Connect with us

    KARNATAKA

    ಗಾಂಜಾಗ್ಯಾಂಗ್ ಹಿಡಿಯಲು ಹೊರಟಿದ್ದ ಶಿವಾಜಿನಗರ ಪೊಲೀಸರು: ಆಂಧ್ರದಲ್ಲಿ ಅಪಘಾತ PSI ಸೇರಿ ಮೂವರ ಸಾವು

    ಬೆಂಗಳೂರು, ಜುಲೈ 24: ಗಾಂಜಾ ಗ್ಯಾಂಗ್​ ಹಿಡಿಯಲು ಆಂಧ್ರ ಪ್ರದೇಶಕ್ಕೆ ತೆರಳಿದ್ದ ವೇಳೆ ಬೆಂಗಳೂರು ಪೊಲೀಸರ ಕಾರು ಚಿತ್ತೂರಿನ ಬಳಿ ಭೀಕರ ಅಪಘಾತಕ್ಕೀಡಾಗಿದೆ. ಪರಿಣಾಮ ಮೂವರು ಪೊಲೀಸ್​ ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ನಾಲ್ವರಿಗೆ ತೀವ್ರ ಗಾಯಗಳಾಗಿವೆ.

    ಪೂತಲಪಟ್ಟು ಮಂಡಲದ ಪಿ. ಕೊಟ್ಟಕೋಟ ರೈಲ್ವೆ ಕೆಳ ಸೇತುವೆ ಬಳಿ ಅಪಘಾತ ನಡೆದಿದೆ. ಪೊಲೀಸ್​ ಸಿಬ್ಬಂದಿ ಇದ್ದ ಇನ್ನೋವಾ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಸುಮಾರು 30 ಅಡಿ ದೂರದ ಮತ್ತೊಂದು ರಸ್ತೆಗೆ ಹಾರಿಹೋಗಿ ಬಿದ್ದಿದೆ. ಪರಿಣಾಮ ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದಾರೆ ಮತ್ತು ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ಚಿತ್ತೂರು ಜಿಲ್ಲಾ ಮುಖ್ಯ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

    ಮೃತರು ಬೆಂಗಳೂರಿನ ಶಿವಾಜಿ ನಗರದ ಪೊಲೀಸರು ಎಂದು ಗುರುತಿಸಲಾಗಿದೆ. ಸಬ್​ ಇನ್ಸ್‌ಪೆಕ್ಟರ್ ಅವಿನಾಶ್, ಪ್ರೊಬೆಷನರಿ ಪಿಎಸ್‌ಐ ದೀಕ್ಷಿತ್, ಪೊಲೀಸ್​ ಕಾನ್ಸ್​ಟೇಬಲ್​ ಅನಿಲ್ ಸೇರಿ ಆರು ಜನರ ತಂಡವು ಖಾಸಗಿ ಟ್ರಾವೆಲ್ಸ್​ನಿಂದ ಇನ್ನೋವಾ ಕಾರನ್ನು ಬಾಡಿಗೆ ಪಡೆದು ಗಾಂಜಾ ಗ್ಯಾಂಗ್​ ಹಿಡಿಯಲು ಆಂಧ್ರಕ್ಕೆ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ. ನಸುಕಿನ ಜಾವ 3 ಗಂಟೆ ಸುಮಾರಿಗೆ ಘಟನೆ ನಡೆದಿರುವ ಬಗ್ಗೆ ಮಾಹಿತಿ ಇದೆ.

    ಸಬ್​ ಇನ್ಸ್‌ಪೆಕ್ಟರ್ ಅವಿನಾಶ್, ಕಾನ್ಸ್​ಟೇಬಲ್​ ಅನಿಲ್ ಹಾಗೂ ಖಾಸಗಿ ಕಾರು ಚಾಲಕ ಮೃತಪಟ್ಟಿದ್ದಾರೆ. ಪ್ರೊಬೆಷನರಿ ಪಿಎಸ್‌ಐ ದೀಕ್ಷಿತ್​, ಕಾನ್ಸ್​ಟೇಬಲ್​ ಶರಣಬಸವ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿತ್ತೂರಿನ ಬಳಿ ಆರೋಪಿಗಳು ಇರುವ ಬಗ್ಗೆ ತಂಡ ಮಾಹಿತಿ ಹೊಂದಿತ್ತು.

    ಹೀಗಾಗಿ ಅವರನ್ನು ಹಿಡಿಯಲು ಖಾಸಗಿ ಇನೋವಾ ಕಾರಲ್ಲಿ ತೆರಳಿದ್ದರು. ಆರೋಪಿ ಚಿತ್ತೂರಿನಲ್ಲಿ ಸಿಗದ ಹಿನ್ನೆಲೆಯಲ್ಲಿ ಹುಡುಕಾಟಕ್ಕಾಗಿ ಇನ್ನೊಂದು ಕಡೆಗೆ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಇತ್ತ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಮೌನ ಮಡುಗಟ್ಟಿದೆ. ತಮ್ಮ ಸಹೋದ್ಯೋಗಿಗಳ ದಾರುಣ ಸಾವು ಹಿನ್ನಲೆಯಲ್ಲಿ ಶಿವಾಜಿನಗರ ಠಾಣೆ ಬಳಿ ನೀರವ ಮೌನ ಆವರಿಸಿದೆ. ಸಹೋದ್ಯೋಗಿಗಳನ್ನು ನೆನೆದು ಪೊಲೀಸ್​ ಸಿಬ್ಬಂದಿ ಕಣ್ಣೀರಿಡುತ್ತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply