BANTWAL
ಸ್ವಾಭಿಮಾನಿ ಸಮಾವೇಶದ ಹಿಂದಿರುವುದೇನು ಮರ್ಮ, ಇನ್ನೂ ಗೊಂದಲದಲ್ಲಿದ್ದಾನೆ ಜನಸಾಮಾನ್ಯ ಕರ್ಮ !
ಸ್ವಾಭಿಮಾನಿ ಸಮಾವೇಶದ ಹಿಂದಿರುವುದೇನು ಮರ್ಮ, ಇನ್ನೂ ಗೊಂದಲದಲ್ಲಿದ್ದಾನೆ ಜನಸಾಮಾನ್ಯ ಕರ್ಮ !
ಬಂಟ್ವಾಳ, ಎಪ್ರಿಲ್ 28: ರಾಜ್ಯದಲ್ಲಿ ವಿಧಾನಸಭೆಗೆ ಚುನಾವಣೆ ಘೋಷಣೆಯಾದಾಗಿನಿಂದ ಕರ್ನಾಟಕದಲ್ಲಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಎನ್ನುವ ವೇದಿಕೆಯೊಂದು ಹಲವು ಕಾರ್ಯಕ್ರಮಗಳನ್ನು ರಾಜ್ಯದಾದ್ಯಂತ ಹಮ್ಮಿಕೊಳ್ಳುತ್ತಿವೆ.
ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಗುಜರಾತಿನ ಯುವ ದಲಿತ ಮುಖಂಡ ಹಾಗೂ ಅಲ್ಲಿನ ವಿಧಾನಸಭಾ ಸದಸ್ಯ ಜಿಗ್ನೇಶ್ ಮೇವಾನಿ ಮುಖ್ಯ ಭಾಷಣಕಾರರಾಗಿಯೂ ಆಗಮಿಸುತ್ತಿದ್ದಾರೆ.
ಗುಜರಾತ್ ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೇಸ್ ಹಾಗೂ ಎಸ್.ಡಿ.ಪಿ.ಐ ಸೇರಿದಂತೆ ಹಲವು ಪಕ್ಷಗಳ ಸಹಕಾರದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಜಿಗ್ನೇಶ್ ಮೇವಾನಿ ಇದೀಗ ಕರ್ನಾಟಕದಲ್ಲಿ ನಡೆಯುವ ಚುನಾವಣೆಯ ಸಂದರ್ಭದಲ್ಲಿ ತನ್ನ ಬಿರುಸಿನ ಪ್ರಚಾರ ಕೈಗೊಳ್ಳುವ ಮೂಲಕ ಪ್ರಚಾರದಲ್ಲಿದ್ದಾರೆ.
ಸಂವಿಧಾನ ಉಳಿವಿಗಾಗಿ ಕರ್ನಾಟಕ ವೇದಿಕೆ ಸ್ವಾಭಿಮಾನಿ ಸಮಾವೇಶದ ಮೂಲಕ ಈ ಮುಖಂಡರಿಗೆ ವೇದಿಕೆಯನ್ನು ಕಲ್ಪಿಸುತ್ತಿದೆ.
ಇದರಲ್ಲಿ ಬಹುಭಾಷಾ ನಟ ಪ್ರಕಾಶ್ ರೈ, ಜೆ.ಎನ್.ಯು ಹಾಗೂ ಇತರ ವಿಶ್ವವಿದ್ಯಾನಿಲಯಗಳ ಎಡ ಸಿದ್ಧಾಂತದ ವಿದ್ಯಾರ್ಥಿ ಮುಖಂಡರೂ ಭಾಗಿಯಾಗುತ್ತಿದ್ದಾರೆ.
ಇಂತಹುದೇ ಒಂದು ಕಾರ್ಯಕ್ರಮವನ್ನು ಬಂಟ್ವಾಳದಲ್ಲೂ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮಗಳ ಆರಂಭಗೊಳ್ಳುತ್ತಿದ್ದಂತೆ ಎಲ್ಲರನ್ನೂ ಸ್ವಾಗತಿಸಿದ ಸ್ವಾಗತಗಾರ ಈ ಕಾರ್ಯಕ್ರಮದಲ್ಲಿ ಯಾವುದೇ ಜಾತಿ , ಮತಭೇಧವಿಲ್ಲ.
ಎಲ್ಲರನ್ನೂ ಒಂದೇ ರೀತಿಯಲ್ಲಿ ನೋಡುವ ಸಂವಿಧಾನದ ಆಶಯಗಳ ನೆಲೆಯಲ್ಲಿ ಕಾಣುವ ವೇದಿಕೆ ಇದು ಎಂದು ಹೇಳಿ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದರು.
ಬಳಿಕ ಬಂಟ ಜಾತಿಯ ಮುಖಂಡ, ಬಿಲ್ಲವ ಮುಖಂಡ, ಮುಸ್ಲಿಂ ಮುಖಂಡ, ಕ್ರೈಸ್ತ ಮುಖಂಡ, ಕುಲಾಲ ಮುಖಂಡ ಹೀಗೆ ಎಲ್ಲಾ ಜಾತಿಗಳ ಮುಖಂಡರನ್ನು ವೇದಿಕೆಯ ಮೇಲೆ ತಮ್ಮ ಜಾತಿಯ ನೆಲೆಯಲ್ಲಿ ಆಸೀನರಾಗುವಂತೆ ವಿನಂತಿಸಿದ್ದಾರೆ.
ಕಾರ್ಯಕ್ರಮ ಆರಂಭಕ್ಕೆ ಮೊದಲು ನಾವೆಲ್ಲಾ ಒಂದು, ನಮ್ಮಲ್ಲಿ ಭಿನ್ನತೆಯಿಲ್ಲ ಎಂದ ಸಂಘಟಕರು ಬಳಿಕ ವೇದಿಕೆಯಲ್ಲಿ ಒಂದೊಂದೇ ಜಾತಿಯ ಹೆಸರು ಹೇಳಿ ಅದರ ಮುಖಂಡ ಎಂದು ಗುರುತಿಸಿಕೊಂಡವರನ್ನು ವೇದಿಕೆಯಲ್ಲಿ ಕೂರಿಸಿಕೊಳ್ಳಿಸುತ್ತಾರೆ.
ಇದನ್ನು ಕಂಡಾಗಲೇ ಈ ಕಾರ್ಯಕ್ರಮ ನಡೆಸುತ್ತಿರುವ ಔಚಿತ್ಯದ ಬಗ್ಗೆ ಕಾರ್ಯಕ್ರಮ ವೀಕ್ಷಿಸಲು ಬಂದ ಯಾವುದೇ ಸಿದ್ಧಾಂತ , ಪಕ್ಷದಲ್ಲಿ ಗುರುತಿಸಿಕೊಳ್ಳದ ಪ್ರಜ್ಞಾವಂತನ ಅರಿವಿಗೆ ಬಂದಿದ್ದು.
ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಜಿಗ್ನೇಶ್ ಮೇವಾನಿ, ಪ್ರಕಾಶ್ ರೈ ಸೇರಿದಂತೆ ಹಲವು ತನ್ನ ಭಾಷಣದ ತುಂಬೆಲ್ಲಾ ಬಿಜೆಪಿ, ಆರ್.ಎಸ್.ಎಸ್ ಅನ್ನು ಹೀಯಾಳಿಸಿದ್ದೇ, ಹೀಯಾಳಿಸಿದ್ದು.
ಯಾವುದೇ ಕಾರಣಕ್ಕೂ ಬಿಜೆಪಿಗೆ ಮತ ನೀಡಬೇಡಿ ಎಂದು ಹೇಳುವ ಮೂಲಕ ಕಾಂಗ್ರೇಸ್ ಗೆ ಮತ ನೀಡಿ ಎಂದು ಪರೋಕ್ಷವಾಗಿ ಸೂಚನೆಯನ್ನು ನೀಡಿದ್ದೇ , ನೀಡಿದ್ದು.
ಕಾರ್ಯಕ್ರಮದಲ್ಲಿ ಪ್ರೇಕ್ಷಕರಾಗಿ ಬಂದಿದ್ದ ನೂರು ಜನರಲ್ಲಿ ಶೇಕಡಾ 80 ರಷ್ಟು ಜನ ಕಾಂಗ್ರೇಸ್ ಪಕ್ಷದಲ್ಲಿ ಗುರುತಿಸಿಕೊಂಡವರಾಗಿದ್ದರು.
ಕಾರಿನಿಂದ ಇಳಿದ ಜಿಗ್ನೇಶ್ ಮೇವಾನಿಯನ್ನು ಇದೇ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಸಣ್ಣ-ಪುಟ್ಟ ಮುಖಂಡರೇ ವೇದಿಕೆಯವರೆಗೆ ಬಾಡಿಗಾರ್ಡ್ ಗಳಂತೆ ಮುಟ್ಟಿಸಿದ್ದರು.
ಕಾರ್ಯಕ್ರಮ ಮುಗಿದ ಬಳಿಕ ಸಚಿವ ಹಾಗೂ ಬಂಟ್ವಾಳ ಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿ ರಮಾನಾಥ ರೈ ಯವರ ಆಪ್ತ ಸಹಾಯಕರೂ ಹಾಜರ್.
ಜಿಗ್ನೇಶ್ ಮೇವಾನಿಯನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು, ಶುಭ ಹಾರೈಕೆಯ ಮೂಲಕ ಬಂಟ್ವಾಳದಿಂದ ಉಳ್ಳಾಲಕ್ಕೆ ಕಳುಹಿಸುವ ಜವಾಬ್ದಾರಿಯನ್ನೂ ಈತ ನಿರ್ವಹಿಸಿದ್ದ.
ರಮಾನಾಥ ರೈ ಆಪ್ತ ಸಹಾಯಕ ಕಾರ್ಯಕ್ರಮದ ವೇದಿಕೆಯ ಬಳಿ ಕಾಲಿಡುವ ಮೊದಲೇ ಆತನನ್ನು ಬರಮಾಡಿಕೊಂಡ ಕೋಮು ಸೌಹಾರ್ದ ವೇದಿಕೆಯ ಮುಖಂಡ ಕೆ. ಅಶೋಕ್ ಸೀದಾ ಜಿಗ್ನೇಶ್ ಮೇವಾನಿಯಲ್ಲಿ ಕರೆದೊಯ್ದು ಮಾತುಕತೆಗೆ ಅವಕಾಶವನ್ನೂ ಮಾಡಿಕೊಟ್ಟಿದ್ದಾರೆ.
ಈ ಎಲ್ಲಾ ದೃಶ್ಯಗಳನ್ನು ಕಣ್ಣಾರೆ ನೋಡಿದ್ದ ಪ್ರಜ್ಞಾವಂತ ನಾಗರಿಕನಿಗೆ ಈ ಸಮಾವೇಶ ಸ್ವಾಭಿಮಾನಿ ಸಮಾವೇಶವೋ ಅಥವಾ ಕಾಂಗ್ರೇಸ್ ಸಮಾವೇಶವೋ ಎನ್ನುವ ಗೊಂದಲವನ್ನೂ ಮೂಡಿಸಿತ್ತು.
ಕೇವಲ ಸಚಿವರು ವೈಯುಕ್ತಿಕ ನೆಲೆಯಲ್ಲಿ ಇಟ್ಟುಕೊಂಡಿರುವ ಆಪ್ತ ಸಹಾಯಕನನ್ನು ರೆಡ್ ಕಾರ್ಪೆಟ್ ಹಾಸಿ ಬರ ಮಾಡಿಕೊಳ್ಳುವ ಅವಶ್ಯಕತೆಯೇನಿತ್ತು.
ಇದೇ ರೀತಿ ಒರ್ವ ಸಾಮಾನ್ಯ ವ್ಯಕ್ತಿಯನ್ನೂ ಕೆ. ಅಶೋಕ್ ಈ ರೀತಿ ತರಾತುರಿಯಲ್ಲಿ ಬರಮಾಡಿಕೊಂಡು, ಅತ್ಯಂತ ಗರಿಷ್ಟ ಭದ್ರತೆಯಿರುವ ಜಿಗ್ನೇಶ್ ಮೇವಾನಿಯನ್ನು ಭೇಟಿ ಮಾಡಿಸುತ್ತಿದ್ದರೇ ಎನ್ನುವ ಪ್ರಶ್ನೆಗಳೂ ಪ್ರಜ್ಞಾವಂತನ ಮನದಲ್ಲಿ ಮೂಡಿದೆ.
ಹಾಗಾದರೆ ಕಾಂಗ್ರೇಸ್ ಗೂ , ಈ ವೇದಿಕೆಗೂ ಏನು ಸಂಬಂಧ ಎನ್ನುವ ಗೊಂದಲಕ್ಕೂ ಈ ಸಮಾವೇಶ ಕಾರಣವಾಗಿತ್ತು.