DAKSHINA KANNADA
ತುಳು ಹೆಸರಿನಲ್ಲೆ ನಡೆಯಿತೇ ಜಾತಿ ಸಮ್ಮೇಳನ..?!! ಗತ್ತಿನ ಗಮ್ಮತ್ತಿನಲ್ಲಿ ಕಳೆಯಿತು ಕಲಾವಿದರ ಮಾನ
ತುಳು ಹೆಸರಿನಲ್ಲೆ ನಡೆಯಿತೇ ಜಾತಿ ಸಮ್ಮೇಳನ..?!! ಗತ್ತಿನ ಗಮ್ಮತ್ತಿನಲ್ಲಿ ಕಳೆಯಿತು ಕಲಾವಿದರ ಮಾನ
ಉಡುಪಿ, ನವೆಂಬರ್ 28 : ಇದೇ ನವಂಬರ್ 24 ಮತ್ತು 25 ರಂದು ದೂರದ ದುಬೈ ನಲ್ಲಿ ನಡೆದ ವಿಶ್ವ ತುಳು ಸಮ್ಮೇಳನ ಸಂಪೂರ್ಣ ಯಶಸ್ವಿಯಾಗಿದೆ ಎನ್ನುವ ಸ್ವತ ಬೆನ್ನು ತಟ್ಟಿಕೊಳ್ಳುವವರ ಮಧ್ಯೆ ಇದೀಗ ಸಮ್ಮೇಳನ ಮುಗಿದು ವಾರ ಕಳೆಯುವ ಮೊದಲೇ ಅದರ ವೈಫಲ್ಯಗಳ ಸರಮಾಲೆಗಳೇ ಎಳೆ ಎಳೆಯಾಗಿ ಬಿಚ್ಚಲಾರಂಭಿಸಿದೆ.
ಜೊತೆಗೆ ದುಡ್ಡಿದ್ದವನೇ ದೊಡ್ಡಪ್ಪ ಎನ್ನುವ ರೀತಿಯಲ್ಲಿ ಹಣವಂತರ ಪ್ರದರ್ಶನ ವೇದಿಕೆಯಾಗಿ ದುಬೈ ನಲ್ಲಿ ನಡೆದ ತುಳು ಸಮ್ಮೇಳನ ಮೂಡಿ ಬಂದಿದೆ ಎನ್ನುವ ಆರೋಪವೂ ಕೇಳಿ ಬರಲಾರಂಭಿಸಿದೆ. ಅಲ್ಲದೆ ಸಮ್ಮೇಳನಕ್ಕೆ ಅತಿಥಿಗಳಾಗಿ ಕರೆದ ಕರಾವಳಿಯ ಹೆಮ್ಮೆಯ ಕಲಾವಿದರನ್ನು ಭಿಕ್ಷುಕರ ರೀತಿ ನಡೆಸಿಕೊಳ್ಳಲಾಗಿದೆ ಎಂದು ಸ್ವತಹ ಇಂಥಹ ಅನುಭವವಾದ ಕಲಾವಿದರೇ ತಮ್ಮ ವೇದನೆ ನೋವುಗಳನ್ನು ತೋಡಿಕೊಂಡಿದ್ದಾರೆ. ಅಷ್ಟಕ್ಕೂ ತುಳುವಿನ ಬಗ್ಗೆ ಗಂಧ ಗಾಳಿಯೂ ಇಲ್ಲದ ದೂರದ ದುಬೈಗೆ ಗಂಟು ಮೂಟೆ ಕಟ್ಟಿಕೊಂಡು ತುಳು ಸಮ್ಮೇಳನ ಮಾಡುವ ಅಗತ್ಯವೇನಿತ್ತು ಎನ್ನುವ ಪ್ರಶ್ನೆಯೂ ಇವುಗಳ ಬೆನ್ನಲೇ ಉದ್ಭವಿಸಿದೆ.
ಈ ಸಮ್ಮೇಳನಕ್ಕೆ ದುಬೈನಲ್ಲಿರುವ ಅರಬ್ ಪತಿಗಳು ತಮ್ಮ ಕೈಲಾದಷ್ಟು ಖರ್ಚು ಮಾಡಿರುವುದರ ಜೊತೆಗೆ ರಾಜ್ಯ ಜಿಲ್ಲೆಯಲ್ಲಿ ನಡೆಯುವ ಒಳ್ಳೆ ಕಾರ್ಯಕ್ರಮಗಳಿಗೆ ಗಂಟು ಬಿಚ್ಚದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಈ ಕಾರ್ಯಕ್ರಮಕ್ಕೆ ಬರೋಬ್ಬರಿ 25 ಲಕ್ಷ ಅನುದಾನವನ್ನೂ ನೀಡಿದೆ. ಆದರೆ ಈ ಕಾರ್ಯಕ್ರಮ ಮಾತ್ರ ಕೆಲವೇ ವ್ಯಕ್ತಿಗಳ ಪ್ರತಿಷ್ಟೆಯ ಕಣವಾಗಿ, ನಿರ್ದಿಷ್ಟ ಸಮಾಜದ ಸಮಾವೇಶವಾಗಿ ಮೂಡಿ ಬಂದಿದೆ ಎನ್ನುವ ಆರೋಪವಿದೆ.
ಕಾರ್ಯಕ್ರಮದ ಆಯೋಜಕರು ತಮ್ಮ ಗತ್ತನ್ನು ತೋರಿಸಲು ಮಾತ್ರ ಇಂಥ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರೇ ಹೊರತು ಇದರಿಂದಾಗಿ ತುಳುನಾಡಾಗಲೀ, ತುಳು ಭಾಷೆ, ಸಂಸ್ಕೃತಿಯ ಉದ್ಧಾರಕ್ಕಾಗಲೀ ಮಾಡಿಲ್ಲ ಎನ್ನುವ ಗಂಭೀರ ಆರೋಪ ಇದೀಗ ಕಲಾವಿದರಿಂದ ಕೇಳಿ ಬರುತ್ತಿದೆ.
ಅತಿಥಿಗಳಾಗಿ ಕರೆದ ಕರಾವಳಿ ಮಾತ್ರವಲ್ಲ ಇಡೀ ನಾಡಿನ ಹೆಮ್ಮೆಯ ಕಲಾವಿದರನ್ನು ಭಿಕ್ಷುಕರಿಗಿಂತಲೂ ಕೆಟ್ಟ ರೀತಿಯಲ್ಲಿ ನಡೆಸಿಕೊಳ್ಳಲಾಯಿತು.
ಕರಾವಳಿಯಲ್ಲಿ ಎಡೆಬಿಡದೆ ಇರುವ ಚಲನಚಿತ್ರ ಶೂಟಿಂಗ್, ಇತರ ಕಾರ್ಯಕ್ರಮಗಳನ್ನು 4 ದಿನಗಳ ಮಟ್ಟಿಗೆ ಬದಿಗಿಟ್ಟು ದೂರದ ಸೌರ್ಗ ಎಂಬ ದುಬೈಗೆ ಹೋದ ಗೌರವ್ವನಿತ ಕಲಾವಿದರ ಪಾಡು ಹೇಳತೀರದಾಗಿದೆ.
ಈ ಕಲಾವಿದರು ಊಟ ತಿಂಡಿ ಬಿಡಿ ಕೇವಲ ನೀರು ಕುಡಿಯಲೂ ಕಾರ್ಯಕ್ರಮ ಆಯೋಜಕರ ಹಿಂದೆ ಜೋತು ಬೀಳಬೇಕಾದ ಸ್ಥಿತಿ ಇತ್ತೆಂದರೆ ಅಲ್ಲಿ ಸೇರಿದ ಸಾಮಾನ್ಯ ವ್ಯಕ್ತಿಯ ಗತಿಯೇನು ಎನ್ನುವುದನ್ನು ಊಹಿಸುವುದೂ ಕಷ್ಟ.
ಕೆಲ ಕಲಾವಿದರೂ ಅಲ್ಲೇ ಆಯೋಜಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಾಜ್ಯದಲ್ಲೇ ಖ್ಯಾತಿ ಪಡೆದ ನವೀನ್ ಡಿ. ಪಡೀಲ್, ಬೋಜರಾಜ್ ವಾಮಂಜೂರು, ತಾಳಮದ್ದಲೆಯ ಬೃಹಸ್ಪತಿ ಎಂದೇ ಖ್ಯಾತರಾದ ಜಬ್ಬರ್ ಸುಮೋ ಇಂತಹ ಘಟಾನುಘಟಿ ಕಲಾ ಮುತ್ತುಗಳ ಮೌಲ್ಯ ಈ ಸಮ್ಮೇಳನ ಆಯೋಜಕರು ಅಂದಾಜಿಸಕ್ಕಿಲ್ಲ.
ಆದ್ದರಿಂದ ಈ ಕಲಾ ಮುತ್ತುಗಳನ್ನು ಅಲ್ಲಿ ಕರೆಸಿ ನಡೆಸಿಕೊಂಡ ರೀತಿಗೆ ಸಮ್ಮೇಳನ ಸಂಘಟಕರ ಬಗ್ಗೆ ತುಳುನಾಡಿನಲ್ಲಿ ಆಕ್ರೋಶ ವ್ಯಕ್ತವಾಗಿದೆ.
ತುಳುನಾಡಿನ ಬಗ್ಗೆ, ತುಳು ಭಾಷೆಯ ಬಗ್ಗೆ ಅಷ್ಟೊಂದು ಅಭಿಮಾನ ಇರುವವರು ತುಳುನಾಡಿನಲ್ಲೇ ಇಂಥ ಕಾರ್ಯಕ್ರಮವನ್ನು ಆಯೋಜಿಸುವ ಬದಲು ತುಳು ಸಂಸ್ಕೃತಿಯ ವಾಸನೆಯೇ ಇಲ್ಲದ ಮರಳುಗಾಡಿನಲ್ಲಿ ಕಾರ್ಯಕ್ರಮ ಆಯೋಜಿಸುವ ಔಚಿತ್ಯವಾದರೂ ಏನಿತ್ತು.
ಇದು ಕೇವಲ ಒಂದು ಸಮಾಜದ ಗತ್ತನ್ನು ಬಿಂಬಿಸುವ ಕಾರ್ಯಕ್ರಮವಾಗಿತ್ತೇ ಹೊರತು ಇಲ್ಲಿ ತುಳು ಭಾಷೆಯ ಬಗ್ಗೆಯಾಗಲೀ, ಸಂಸ್ಕೃತಿಯ ಬಗ್ಗೆಯಾಗಲೀ ಸಣ್ಣ ಚರ್ಚೆಯೂ ನಡೆದಿಲ್ಲ ಎನ್ನುವ ಅಭಿಪ್ರಾಯಗಳೂ ಕೇಳಿ ಬಂದಿದೆ.
ವಿದೇಶೀ ನೆಲದಲ್ಲಿ ಮೈಕ್ ಸಿಕ್ಕಿದ್ದೇ ಛಾನ್ಸ್ ಎಂದು ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗಿಂತಲೂ ಹೆಚ್ಚು ಮಾತನಾಡಿದ ಕಾರ್ಯಕ್ರಮ ನಿರೂಪಕರ ಬಗ್ಗೆಯೂ ಅಪಸ್ವರ ಎತ್ತಲಾಗಿದೆ.
ಮಂಗಳೂರಿನಿಂದ ದುಬೈ ವರೆಗೆ ಫ್ರೀ ಫ್ಲೈಟ್ ಟಿಕೆಟ್ ನೀಡಿದ್ದಾರೆ ಎನ್ನುವ ದಾಕ್ಷಿಣ್ಯಕ್ಕೆ ಒಳಗಾಗಿ ಆ ವ್ಯಕ್ತಿಯನ್ನು ಕಾರ್ಯಕ್ರಮದ ತುಂಬಾ ಹೊಗಳಿದ್ದು ಬಿಟ್ಟು ತುಳು ಭಾಷೆಗೆ, ಸಂಸ್ಕೃತಿಗೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡಿದ ಕಲಾವಿದರನ್ನು ಮೂಲೆ ಗುಂಪು ಮಾಡಲಾಗಿತ್ತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಅನುದಾನ ಪಡೆದ ಈ ಕಾರ್ಯಕ್ರಮವು ಮೇಲ್ನೋಟಕ್ಕೆ ಬಂಟರ ಸಮಾವೇಶದಂತೆ ಕಂಡು ಬರುತ್ತಿತ್ತು ಎನ್ನುವ ಕುಚೋದ್ಯದ ಮಾತುಗಳೂ ಇದೀಗ ದುಬೈಯಿಂದ ಹರಿದು ಬರಲಾರಂಭಿಸಿದೆ.