Connect with us

    DAKSHINA KANNADA

    ಬೀಚ್ ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ, ಇಂದು ಅಂತ್ಯವಲ್ಲ ಆರಂಭ

    ಬೀಚ್ ನಲ್ಲಿ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣ, ಇಂದು ಅಂತ್ಯವಲ್ಲ ಆರಂಭ…

    ಮಂಗಳೂರು, ನವೆಂಬರ್ 27: ಇಡೀ ಮಂಗಳೂರು ನಗರವನ್ನೇ ಬೆಚ್ಚಿ ಬೀಳಿಸಿದ ಪಣಂಬೂರು ಪೋಲೀಸ್ ಠಾಣಾ ವ್ಯಾಪ್ತಿಯ ತೋಟ ಬೆಂಗ್ರೆ ಬೀಚ್ ಗ್ಯಾಂಗ್ ರೇಪ್ ಪ್ರಕರಣದ ಹಲವು ಗೌಪ್ಯ ಮಾಹಿತಿಗಳು ಈಗ ಒಂದೊಂದೇ ಹೊರ ಬರಲಾರಂಭಿಸಿದೆ.

    ತೋಟ ಬೆಂಗ್ರೆ ಬೀಚ್ ಗೆ ವಿಹಾರಕ್ಕೆಂದು ಬಂದಿದ್ದ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಯುವತಿಯ ಮೇಲೆ ಬಲವಂತವಾಗಿ ಸಾಮೂಹಿಕ ಅತ್ಯಾಚಾರ ನಡೆಸಿದ ತಂಡದಲ್ಲಿ 7 ಜನರಿದ್ದರೆನ್ನುವ ಮಾಹಿತಿ ಇದೀಗ ಪೋಲೀಸ್ ಮೂಲಗಳಿಂದ ತಿಳಿದು ಬಂದಿದೆ.

    ನವೆಂಬರ್ 18 ರಂದು ನಡೆದಿದ್ದ ಈ ಅತ್ಯಾಚಾರ ಪ್ರಕರಣ ಹಳ್ಳ ಹಿಡಿಯುವುದನ್ನು ಈ ಬಾರಿ ಪೊಲೀಸರೇ ತಡೆದಿದ್ದಾರೆ.

    ಯಾವುದೇ ಸಾಕ್ಷಿ, ದೂರು ಇಲ್ಲದ ಈ ಪ್ರಕರಣವು ಒಂದು ಹಂತದಲ್ಲಿ ಮುಚ್ಚಿ ಹೋಗುವ ಸಾಧ್ಯತೆಯಿತ್ತು.

    ಆದರೆ ಪಣಂಬೂರು ಪೋಲೀಸರು ಸಂತ್ರಸ್ತರ ಮನವೊಲಿಸಿ ಅತ್ಯಾಚಾರ ಪ್ರಕರಣ ದಾಖಲಿಸಿ ಈ ಘೋರ ಘಟನೆಯಲ್ಲಿ ಆರೋಪಿತರಾದವರಿಗೆ ಕಾನೂನು ಪ್ರಕಾರ ಸೂಕ್ತ ಶಿಕ್ಷೆ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿದ್ದಾರೆ.

    ತಣ್ಣೀರುಬಾವಿ, ಬೆಂಗ್ರೆ, ತೋಟ ಬೆಂಗ್ರೆ, ಫಾತಿಮಾ ಬೀಚ್ ಈ ಎಲ್ಲಾ ಬೀಚ್ ಗಳಿಗೆ ಪ್ರೇಮಿಗಳು, ದಂಪತಿಗಳು ಬರುವುದು ಸಾಮಾನ್ಯವಾಗಿದ್ದು, ಇಲ್ಲಿ ಬರುವ ಈ ಜೋಡಿಗಳಿಗೆ ಉಪಟಲ ನೀಡುವ ಗ್ಯಾಂಗ್ ಗಳ ಸಂಖ್ಯೆಯೂ ಇಲ್ಲಿ ಹೆಚ್ಚಾಗಿದೆ.

    ಸ್ಥಳೀಯ ಪೋಲೀಸರಿಗೆ ಈ ಬಗ್ಗೆ ಮಾಹಿತಿ ಇದ್ದರೂ, ಯಾರೂ ಈ ಗ್ಯಾಂಗ್ ಗಳ ಬಗ್ಗೆ ದೂರು ನೀಡದ ಹಿನ್ನಲೆಯಲ್ಲಿ ಇವರ ಉಪಟಲವನ್ನು ನಿಯಂತ್ರಿಸಲು ಪೋಲೀಸರಿಗೆ ಸಾಧ್ಯವಾಗಿಲ್ಲ.

    ಆದರೆ ನವಂಬರ್ 18 ರಂದು ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಸಲೀಸಾಗಿ ಬಿಟ್ಟಲ್ಲಿ ಮತ್ತೆ ಪೋಲೀಸರಿಗೇ ಈ ತಂಡ ಕಂಟಕವಾಗುವ ಸಾಧ್ಯತೆಯನ್ನು ಮನಗಂಡು ಪೋಲೀಸರು ಈ ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ.

    ಘಟನೆ ಬಗ್ಗೆ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದ ಪಣಂಬೂರು ಪೋಲೀಸರು ಸಂತ್ರಸ್ತ ಜೋಡಿಯನ್ನು ಪತ್ತೆ ಹಚ್ಚಿ ಆರೋಪಿಗಳ ವಿರುದ್ಧ ದೂರು ನೀಡುವಂತೆ ಸೂಚಿಸಿದ್ದರು.

    ಪೋಲೀಸರು ನೀಡಿದ ರಕ್ಷಣೆಯ ಭರವಸೆ ಹಿನ್ನಲೆಯಲ್ಲಿ ಇದೀಗ ಸಂತ್ರಸ್ತ ಯುವ ಜೋಡಿ ಪಣಂಬೂರು ಮಹಿಳಾ ಪೋಲೀಸ ಠಾಣೆಗೆ ದೂರು ನೀಡಿದ್ದಾರೆ.

    ಈ ಸಂಬಂಧ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೋಲೀಸ್ ತಂಡ 7 ಮಂದಿ ಮಾದಕ ವ್ಯಸನಿಗಳನ್ನು ವಶಕ್ಕೆ ಪಡೆದಿದ್ದಾರೆ.

    ಬಂದಿತರನ್ನು ತೋಟ ಬೆಂಗ್ರೆ ನಿವಾಸಿಗಳಾದ ಆದಿತ್ಯ, ಸುಜನ್, ಪ್ರಜ್ವಲ್, ಕಾರ್ತಿಕ್, ಚಿಂತನ್ , ಅರುಣ್ ಮತ್ತು ರಿಯಾಜ್ ಎಂದು ಗುರುತಿಸಲಾಗಿದೆ.

    ರಿಯಾಜ್ ಇದೀಗ ತಲೆ ಮರೆಸಿಕೊಂಡಿದ್ದು, ಈತನ ಪತ್ತೆಗಾಗಿ ಪೋಲೀಸರು ಬಲೆ ಬೀಸಿದ್ದಾರೆ.

    ಬಿಹಾರ ಮೂಲದ ಯುವಕನೊಂದಿಗೆ ಬಂಟ್ವಾಳ ದ ಯುವತಿ ನವೆಂಬರ್ 18 ನಂದು ಮಂಗಳೂರು ಹೊರವಲಯ ತೋಟ ಬೆಂಗ್ರೆ ಸುತ್ತಾಡಲು ಬಂದಿದ್ದರು.

    ಇಬ್ಬರು ಪ್ರೇಮಿಗಳು ಬೀಚ್ ನಲ್ಲಿ ಸುತ್ತಾಡುತ್ತಿದ್ದ ಸಂದರ್ಭ ದಲ್ಲಿ ಅಲ್ಲೆ ಮಾದಕ ವಸ್ತು ಸೇವಿಸುತ್ತಿದ್ದ 8 ಮಂದಿ ಯುವಕರ ತಂಡವೊಂದು ಯುವತಿ ಜೊತೆಗಿದ್ದ ಯುವಕನ ಮೇಲೆ ದಾಳಿ ನಡೆಸಿದೆ.

    ಯುವಕನ ಮೇಲೆ ಹಲ್ಲೆ ನಡೆಸಿದ ಯುವಕರ ತಂಡ , ನಂತರ ಯುವತಿಯ ಮೇಲೆ 8 ಮಂದಿ ಯುವಕರು ಸೇರಿ ಅತ್ಯಾಚಾರ ನಡೆಸಿದ್ದಾರೆ ಎಂದು ಹೇಳಲಾಗಿದೆ.

    ಆರೋಪಿಗಳ ವಿರುದ್ಧ ಪೊಲೀಸರು ಸೆಕ್ಷನ್ 376ಆ, 323, 504, 506ರ ಅಡಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ.

    ಹಲವು ವರ್ಷಗಳ ಹಿಂದೆ ಇದೇ ಪರಿಸರದಲ್ಲಿ ಆಗಿನ ದಕ್ಷಿಣಕನ್ನಡ ಜಿಲ್ಲಾಧಿಕಾರಿ ದಂಪತಿಗಳಿಗೂ ಇಲ್ಲಿ ಹಲ್ಲೆ ನಡೆಸಲಾಗಿತ್ತು. ಅಲ್ಲದೆ ಅವರ ಆಭರಣವನ್ನೂ ಲೂಟಿಗೈದಿದ್ದಲ್ಲದೆ, ಜಿಲ್ಲಾಧಿಕಾರಿ ಪತ್ನಿಗೂ ಲೈಂಗಿಕ ಕಿರುಕುಳ ನೀಡಲಾಗಿತ್ತು.

    ಈ ಪರಿಸರದಲ್ಲಿ ಈಗಲೂ ಕತ್ತಲಾಗುತ್ತಿದ್ದಂತೆ ಗಾಂಜಾ ಸೇರಿದಂತೆ ಹಲವು ಮಾದಕ ವ್ಯಸನಿಗಳ ತಂಡ ತನ್ನ ಚಟುವಟಿಕೆಗಳನ್ನು ಪ್ರಾರಂಭಿಸುತ್ತಿದ್ದು, ನವಂಬರ್ 18 ರಂದು ನಡೆದ ಘಟನೆ ಅಂತ್ಯವಲ್ಲ, ಆರಂಭ ಎನ್ನುವುದರ ಮುನ್ಸೂಚನೆಯನ್ನೂ ನೀಡುವಂತಿದೆ.

    Share Information
    Advertisement
    Click to comment

    You must be logged in to post a comment Login

    Leave a Reply