DAKSHINA KANNADA
ಜೀ ಹುಜೂರ್ ಸಂಸೃತಿಗೆ ಮಣಿಯದ ಎಸ್ಪಿ ರೆಡ್ಡಿ, ವರ್ಗಾವಣೆಗೆ ಆಗಿದೆ ಲಿಸ್ಟ್ ರೆಡಿ

ಜೀ ಹುಜೂರ್ ಸಂಸೃತಿಗೆ ಮಣಿಯದ ಎಸ್ಪಿ ರೆಡ್ಡಿ, ವರ್ಗಾವಣೆಗೆ ಆಗಿದೆ ಲಿಸ್ಟ್ ರೆಡಿ
ಪುತ್ತೂರು ಡಿಸೆಂಬರ್ 29: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜೀ ಹುಜೂರ್ ಸಂಸೃತಿಗೆ ಬಗ್ಗದ ಅಧಿಕಾರಿಗಳಿಗೆ ಇದೀಗ ವರ್ಗಾವಣೆ ಭಾಗ್ಯ ಎದುರಾಗಿದೆ.
ಈ ಭಾಗ್ಯಕ್ಕೆ ಇದೀಗ ಹೊಸದಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಸುಧೀರ್ ರೆಡ್ಡಿ ಸೇರ್ಪಡೆಗೊಂಡಿದ್ದಾರೆ.

ಜಿಲ್ಲೆಯಲ್ಲಿ ನಡೆಯುತ್ತಿರುವ ಹಲವು ರೀತಿಯ ಅಕ್ರಮಗಳಿಗೆ ತನ್ನದೇ ರೀತಿಯಲ್ಲಿ ಕಡಿವಾಣ ಹಾಕಿಹೊಂಡು ಬರುತ್ತಿರುವ ಎಸ್ಪಿ ಇದೀಗ ಜಿಲ್ಲಾ ಉಸ್ತುವಾರಿ ಸಚಿವ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳ ಹಾಗೂ ಅವರದೇ ಕೆಳಸ್ತರದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವ ಸುಧೀರ್ ರೆಡ್ಡಿಗೆ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿರುವವರ ವಿರುದ್ಧ ಕ್ರಮ ಕೈಗೊಳ್ಳದಂತೆ ಹಾಗೂ ಬಂಧಿಸಲ್ಪಟ್ಟವರನ್ನು ಬಿಡುವಂತೆ ಕರೆ ಮಾಡುವ ಜನಪ್ರತಿನಿಧಿಗಳ ಬುಲಾವ್ ಗೆ ಕ್ಯಾರೇ ಮಾಡದ ಎಸ್ಪಿ ವಿರುದ್ಧ ತಿರುಗಿ ಬಿದ್ದಿರುವ ಅಕ್ರಮ ಕೋರರ ತಂಡ ಇದೀಗ ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ದಕ್ಷ ಅಧಿಕಾರಿಯಾಗಿರುವ ಸುಧೀರ್ ರೆಡ್ಡಿಯವರನ್ನು ಎತ್ತಂಗಡಿ ಮಾಡಲು ಪ್ರಯತ್ನ ನಡೆಸುತ್ತಿದೆ.
ಈ ಬಗ್ಗೆ ಹೆಚ್ಚು ಉತ್ಸುಕರಾಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಗಳ ಗಮನಕ್ಕೂ ವಿಚಾರವನ್ನು ತಂದಿದ್ದಾರೆ.
ಇದಕ್ಕೆ ಮುಖ್ಯಮಂತ್ರಿ ಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎನ್ನುವ ಮಾಹಿತಿ ಮುಖ್ಯಮಂತ್ರಿ ಕಾರ್ಯಾಲಯದ ಬಲ್ಲ ಮೂಲಗಳಿಂದ ಲಭಿಸಿದೆ.
ಕೇವಲ ಜನಪ್ರತಿನಿಧಿಗಳು ಮಾತ್ರವಲ್ಲದೆ ಸ್ವತಃ ಎಸ್ಪಿ ಅಂಡರ್ ನಲ್ಲಿರುವ ಪೋಲೀಸ್ ಅಧಿಕಾರಿಗಳು ಕೂಡಾ ಈ ಕುತಂತ್ರದ ಹಿಂದಿದ್ದಾರೆ.
ಜಿಲ್ಲೆಯಲ್ಲಿ ಯಾವುದೇ ಅಕ್ರಮಗಳು ನಡೆದರೂ ನೇರವಾಗಿ ಫೀಲ್ಡ್ ಗೆ ಇಳಿದು ಕಾರ್ಯಾಚರಣೆ ನಡೆಸುವ ಎಸ್ಪಿ ಕಾರ್ಯ ವೈಖರಿ ಕೆಲವು ಸುಭಗರೆಂದು ತಿಳಿದಿರುವ ಅಧಿಕಾರಿಗಳಿಗೆ ಕಿರಿಕಿರಿಯುಂಟು ಮಾಡಿದೆ.
ಇದಕ್ಕಾಗಿ ಜನಪ್ರತಿನಿಧಿಗಳ ಚೇಲಾಗಳಾಗಿ ವರ್ತಿಸುವ ಕೆಲವು ಸ್ಟೇಷನ್ ಗಳ ಪೋಲೀಸ್ ಅಧಿಕಾರಿಗಳು ಎಸ್ಪಿಯವರ ವರ್ಗಾವಣೆ ಹಿಂದೆ ಹಗಲಿರುಳು ಶ್ರಮಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.
ಪೋಲೀಸ್ ವರಿಷ್ಠಾಧಿಕಾರಿಯಾಗಿ ಜಿಲ್ಲೆಗೆ ಆಗಮಿಸಿ ವರ್ಷವೂ ಕಳೆಯದಿದ್ದರೂ, ಪ್ರಾಮಾಣಿಕ ಅಧಿಕಾರಿಗಳಿಗೆ ಜಿಲ್ಲೆಯಲ್ಲಿ ಕೆಲಸ ಮಾಡಲು ಅವಕಾಶವಿಲ್ಲ ಎನ್ನುವ ನಿರ್ದೇಶನವನ್ನು ಈಗಾಗಲೇ ನೀಡಿರುವ ಉಸ್ತುವಾರಿ ಸಚಿವ ಸೇರಿದಂತೆ ಇತರ ಜನಪ್ರತಿನಿಧಿಗಳು ಇದೀಗ ಎಸ್ಪಿಗೂ ಈ ಭಾಗ್ಯವನ್ನು ಸದ್ಯದಲ್ಲೇ ಕರುಣಿಸಲಿದ್ದಾರೆ.