LATEST NEWS
ಚುನಾವಣಾ ಕರ್ತವ್ಯ: ಕೇಂದ್ರಸ್ಥಾನದಲ್ಲಿರಲು ಶಿಕ್ಷಕರಿಗೆ ಡಿಡಿಪಿಐ ಸೂಚನೆ
ಚುನಾವಣಾ ಕರ್ತವ್ಯ: ಕೇಂದ್ರಸ್ಥಾನದಲ್ಲಿರಲು ಶಿಕ್ಷಕರಿಗೆ ಡಿಡಿಪಿಐ ಸೂಚನೆ
ಮಂಗಳೂರು, ಎಪ್ರಿಲ್ 10 : ರಾಜ್ಯ ವಿಧಾನಸಭಾ ಚುನಾವಣೆಯು ಬೇಸಿಗೆ ರಜಾ ಅವಧಿಯಲ್ಲಿ ನಡೆಯಲಿರುವುದರಿಂದ ಎಲ್ಲಾ ಶಿಕ್ಷಕರು/ನೌಕರರು ಕೇಂದ್ರ ಸ್ಥಾನದಲ್ಲಿದ್ದು ಚುನಾವಣಾ ಕಾರ್ಯಕ್ಕೆ ತೊಂದರೆಯಾಗದಂತೆ ಕಾರ್ಯ ನಿರ್ವಹಿಸಲು ಎಲ್ಲಾ ಸರ್ಕಾರಿ/ಅನುದಾನಿತ/ಅನುದಾನರಹಿತ ಶಾಲಾ ಮುಖ್ಯ ಶಿಕ್ಷಕರು, ಸಹ ಶಿಕ್ಷಕರು ಹಾಗೂ ಬೋಧಕೇತರ ಸಿಬ್ಬಂಧಿಗಳಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚಿಸಿದೆ.
ರಜಾ ಅವಧಿಯಲ್ಲಿ ಕೇಂದ್ರ ಸ್ಥಾನದಲ್ಲಿದ್ದು ಚುನಾವಣಾ ಆಯೋಗ ವಹಿಸುವ ಜವಾಬ್ದಾರಿಯನ್ನು ಯಾವುದೇ ಲೋಪವಾಗದಂತೆ ನಿರ್ವಹಿಸಬೇಕು, ಶಾಲಾ ಆವರಣದಲ್ಲಿ ಮಾದರಿ ನೀತಿ ಸಂಹಿತೆಗೆ ಭಂಗ ತರುವಂತಹ ಯಾವುದೇ ಪ್ಲೆಕ್ಸ್, ಬ್ಯಾನರ್, ಭಿತ್ತಿ ಪತ್ರ, ಬರಹ ಮತ್ತು ಚಿತ್ರಗಳಿದ್ದಲ್ಲಿ ತಕ್ಷಣದಿಂದಲೇ ತೆರವುಗೊಳಿಸಲು ಕ್ರಮ ವಹಿಸಬೇಕು.
ಶಾಲಾ ಆವರಣದಲ್ಲಿ ಚುನಾವಣಾಧಿಕಾರಿಗಳು/ ಸಕ್ಷಮ ಪ್ರಾಧಿಕಾರದ ಅನುಮತಿಯಿಲ್ಲದೆ ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶ ನೀಡಬಾರದು.
ಚುನಾವಣೆ ಮತಗಟ್ಟೆಯಿರುವ ಶಾಲೆಯ ಮುಖ್ಯ ಶಿಕ್ಷಕರು ಅಗತ್ಯ ಮೂಲಭೂತ ಸೌಕರ್ಯಗಳೊಂದಿಗೆ ಅಂದರೆ ಕುಡಿಯುವ ನೀರು ಶೌಚಾಲಯ, ವಿದ್ಯುತ್ ಸಂಪರ್ಕ, ಸೇರಿದಂತೆ ಅಗತ್ಯ ಸಂಖ್ಯೆಯ ಪೀಠೋಪಕರಣಗಳನ್ನು ಒದಗಿಸಿ ಚುನಾವಣಾ ಕಾರ್ಯಕ್ಕೆ ಪೂರ್ಣ ಪ್ರಮಾಣದ ಸಹಕಾರ ನೀಡಬೇಕು.
ಚುನಾವಣಾ ಕರ್ತವ್ಯದಲ್ಲಾಗಲಿ ಅಥವಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಾಗಲಿ ಶಿಕ್ಷಕರ ಕರ್ತವ್ಯ ಲೋಪ ಕಂಡು ಬಂದಲ್ಲಿ ಗಂಭೀರವಾಗಿ ಪರಿಗಣಿಸಿ ಶಿಸ್ತು ಕ್ರಮಕ್ಕೆ ಒಳಪಡಿಸಲಾಗುವುದು ಎಂದು ದ.ಕ. ಡಿಡಿಪಿಐ ಶಿವರಾಮಯ್ಯ ಎಚ್ಚರಿಸಿದ್ದಾರೆ.