DAKSHINA KANNADA
ಕಾವ್ಯ ಪರ ಹೋರಾಟ ತೀವ್ರ, ಆಗಸ್ಟ್ 9 ರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ
ಮಂಗಳೂರು, ಆಗಸ್ಟ್ 03 : ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಸಾವಿನ ಕುರಿತು ಪಾರದರ್ಶಕ ತನಿಖೆಯ ಮೂಲಕ ನ್ಯಾಯ ಕೊಡಲು ಜಸ್ಟೀಸ್ ಫಾರ್ ಕಾವ್ಯ ಹೋರಾಟ ಸಮಿತಿ ವತಿಯಿಂದ ಆಗಸ್ಟ್ ಒಂಬತ್ತು ರಂದು ಬೃಹತ್ ಪ್ರತಿಭಟನಾ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ಜಸ್ಟಿಸ್ ಫೋರ್ ಕಾವ್ಯ ಹೋರಾಟ ಸಮಿತಿಯ ಸದಸ್ಯ , ನ್ಯಾಯವಾದಿ ದಿನಕರ್ ಶೆಟ್ಟಿ ತಿಳಿಸಿದ್ದಾರೆ .
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಜುಲೈ ಇಪ್ಪತ್ತು ರಂದು ಮೂಡಬಿದಿರೆಯ ಆಳ್ವಾಸ್ ಸಂಸ್ಥೆಯ ಹಾಸ್ಟೆಲ್ ನಲ್ಲಿ ಹತ್ತನೇ ತರಗತಿ ವಿದ್ಯಾರ್ಥಿನಿ ಕಾವ್ಯ ನೇಣು ಬಿಗಿದ ರೀತಿಯಲ್ಲಿ ಸಾವು ಸಂಭವಿಸಿತ್ತು .ಈ ಘಟನೆಯ ಕುರಿತು ಸಮಗ್ರ ತನಿಖೆ ಆಗಬೇಕೆಂದು ರಾಜ್ಯಾದ್ಯಂತ ವಿವಿಧ ಸಂಘಟನೆಗಳು.ಪ್ರತಿಭಟನೆ ನಡೆಸುತ್ತಿವೆ ಎಂದು ಹೇಳಿದರು .ಘಟನೆ ನಡೆದು ಹನ್ನೆರಡು ದಿನಗಳು ಕಳೆದಿದೆ ಆದರೆ ಕಾವ್ಯ ಪೂಜಾರಿ ಸಾವಿನ ಕಾರಣ ದ ಬಗ್ಗೆ ಸ್ಪಷ್ಟ ಮಾಹಿತಿ ದೊರೆತಿಲ್ಲ ಎಂದು ಕಿಡಿಕಾರಿದರು .ಪ್ರಕರಣದ ಕುರಿತು ಪೊಲೀಸ್ ತಂಡ ತನಿಖೆ ನಡೆಸಿದೆ ಆದರೆ ಈವರೆಗೆ ಪ್ರಕರಣದ ತನಿಖೆಯ ಮಾಹಿತಿಯನ್ನು ಪೊಲೀಸ್ ಇಲಾಖೆ ಸಾರ್ವಜನಿಕರ ಮುಂದೆ ಇಟ್ಟಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು .ಪೊಲೀಸ್ ಇಲಾಖೆಯ ಈ ನಡೆ ಅಚ್ಚರಿ ಮೂಡಿಸಿದೆ ಎಂದು ಹೇಳಿದ ಅವರು ಕಾವ್ಯಾಳ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಹೋರಾಟ ತೀವ್ರಗೊಳಿಸುವ ದೃಷ್ಟಿಯಿಂದ ಆಗಸ್ಟ್ ಒಂಬತ್ತರಂದು ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು 30 ಕ್ಕೂ ಅಧಿಕ ಸಮಾನ ಮನಸ್ಕ ಸಂಘಟನೆಗಳು ಕಾವ್ಯ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿವೆ ಎಂದು ಅವರು ಹೇಳಿದರು .