DAKSHINA KANNADA
ರಹೀಂ ಉಚ್ಚಿಲ್ ಕೊಲೆ ಯತ್ನ ಪ್ರಕರಣ : ಇಬ್ಬರಿಗೆ 4 ವರ್ಷ ಕಠಿಣ ಶಿಕ್ಷೆ
ಮಂಗಳೂರು, ಆಗಸ್ಟ್ 03 : ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಜ್ಯ ಉಪಾಧ್ಯಕ್ಷ ರಹೀಂ ಉಚ್ಚಿಲ್ ಅವರ ಮೇಲೆ ನಡೆದ ಕೊಲೆಯತ್ನ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ನಾಲ್ಕು ವರ್ಷ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ .ಉಳ್ಳಾಲದ ಕೆ.ಸಿ ರೋಡ್ ನಿವಾಸಿ ಮಹಮ್ಮದ್ ರಫೀಕ್ ಹಾಗೂ ಸುರತ್ಕಲ್ ಇಡ್ಯಾ ನಿವಾಸಿ ಅಬ್ದುಲ್ ಬಶೀರ್ ಅವರಿಗೆ ಶಿಕ್ಷೆ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ ರಹೀಂ ಉಚ್ಚಿಲ್ ಅವರು ರಾಜ್ಯ ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಕೊಲೆ ಯತ್ನ ನಡೆದಿತ್ತು .೨೦೧೨ ರ ಮಾರ್ಚ್ ೧೫ ರಂದು ಮಂಗಳೂರಿನ ಅತ್ತಾವರದಲ್ಲಿ ಪ್ರಿಸಿಡಿಯಮ್ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯಲ್ಲಿ ರಹೀಂ ಉಚ್ಚಿಲ್ ಅವರ ಮೇಲೆ ಮಾರಕಾಸ್ತ್ರಗಳಿಂದ ಕಡಿದು ದಾಳಿ ನಡೆಸಲಾಗಿತ್ತು . ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರಹೀಂ ಉಚ್ಚಿಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು .ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪಾಂಡೇಶ್ವರ ಠಾಣೆಯ ಪೊಲೀಸರು ಏಳು ಮಂದಿ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು .
ಈ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಮಂಗಳೂರು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಬ್ಬರು ಆರೋಪಿಗಳಿಗೆ ನಾಲ್ಕು ವರ್ಷ ಕಠಿಣ ಶಿಕ್ಷೆ ಹಾಗೂ ತಲಾ ಒಂದು ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಾಧೀಶರಾದ ಕೆ.ಎಸ್ ಬೀಳಗಿ ತೀರ್ಪು ನೀಡಿದ್ದಾರೆ .ಸಾಕ್ಷಿಗಳ ಕೊರತೆ ಹಿನ್ನೆಲೆಯಲ್ಲಿ ೫ ಮಂದಿ ಆರೋಪಿಗಳನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ . ಸರಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಪುಷ್ಪರಾಜ್ ಅಡ್ಯಂತಾಯ ವಾದಿಸಿದ್ದರು .
You must be logged in to post a comment Login