DAKSHINA KANNADA
ಕಾವ್ಯಾ ಸಾವಿನ ಹೋರಾಟ, ಬಿಲ್ಲವ-ಬಂಟರ ಪ್ರತಿಷ್ಟೆಯ ಹಠ…
ಅಗಸ್ಟ್ 10 : ಜುಲೈ 20 ರಂದು ನಡೆದ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿನ ಕಾವ್ಯಾ ಪೂಜಾರಿ ಅನುಮಾನಾಸ್ಪದ ಸಾವಿನ ಬಳಿಕ ಹಲವು ಸಂಘಟನೆಗಳು ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಪ್ರತಿಭಟನೆಗಳನ್ನು ಆರಂಭಿಸಿದೆ. ಸ್ಪತಹ ಕಾವ್ಯಾ ಪೋಷಕರೇ ಈ ಸಾವಿನ ಹಿಂದೆ ನಿಗೂಢತೆ ಇದ್ದು, ಆಳ್ವಾಸ್ ಶಿಕ್ಷಣ ಸಂಸ್ಥೆ ಈ ಸಾವಿನ ಹಿಂದಿನ ರಹಸ್ಯವನ್ನು ಮುಚ್ಚಿಹಾಕುತ್ತಿದೆ ಎನ್ನುವ ಆರೋಪವನ್ನು ಮಾಡಿದ್ದಾರೆ.
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಡಿಯಲ್ಲಿ ಬರುವಂತಹ ಪ್ರೌಢಶಾಲೆಯಲ್ಲಿ 10 ನೇ ತರಗತಿಯಲ್ಲಿ ಓದುತ್ತಿದ್ದ ಕಾವ್ಯಾ ಜುಲೈ 20 ರಂದು ತನ್ನ ಹಾಸ್ಟೆಲ್ ನಲ್ಲಿ ಫ್ಯಾನಿಗೆ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಪ್ರತಿಭಾವಂತ ಬಾಲ್ ಬ್ಯಾಡ್ಮಿಟನ್ ಆಟಗಾರ್ತಿಯಾಗಿದ್ದ ಕಾವ್ಯಾ ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವುದು ಕಾವ್ಯ ಪೋಷಕರ ವಾದವಾಗಿತ್ತು.
ಈ ನಡುವೆ ಕಾವ್ಯಾ ಸಾವಿಗೆ ನ್ಯಾಯ ಒದಗಿಸಬೇಕು ಎನ್ನುವ ನಿಟ್ಟಿನಲ್ಲಿ ಜಸ್ಟೀಸ್ ಫಾರ್ ಕಾವ್ಯಾ, ಬಿರುವೆರ್ ಕುಡ್ಲ ಹಾಗೂ ಇನ್ನಿತರ ಸಂಘಟನೆಗಳು ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿರುದ್ಧ ಇದೀಗ ಹೋರಾಟಕ್ಕೆ ಇಳಿದಿವೆ. ಆದರೆ ಈ ಹೋರಾಟ ಇದೀಗ ಕೇವಲ ಕಾವ್ಯಾ ಸಾವಿಗೆ ಮಾತ್ರ ಸೀಮಿತವಾಗಿರದೆ, ಬಂಟ ಹಾಗೂ ಬಿಲ್ಲವ ಸಮುದಾಯ, ಕಾಂಗ್ರೇಸ್ ಮತ್ತು ಬಿಜೆಪಿ ಎನ್ನುವ ವಿಚಾರದ ಪ್ರತಿಷ್ಟೆಯಾಗಿ ಬದಲಾವಣೆಗೊಂಡಿದೆ.
ಆಳ್ವಾಸ್ ಶಿಕ್ಷಣ ಸಂಸ್ಥೆ ಹಾಗೂ ಮೋಹನ್ ಆಳ್ವ ಪರವಾಗಿ ಒಂದು ಗುಂಪು ವಾದ ಮಂಡಿಸಿದರೆ, ಇನ್ನೊಂದು ಗುಂಪು ಕಾವ್ಯಾ ಹೆಸರಿನಲ್ಲಿ ತನ್ನ ಹಿಡನ್ ಅಜೆಂಡಾವನ್ನು ಪ್ರಸ್ತುತಪಡಿಸುವ ಯತ್ನದಲ್ಲಿದೆ ಎನ್ನುವ ಗುಮಾನಿ ಕೂಡ ಮೂಡಲಾರಂಬಿಸಿದೆ.
ಕಾವ್ಯಾ ಸಾವಿನ ಕುರಿತಂತೆ ಯಾವುದೇ ತನಿಖೆಗೂ ತಾವು ಸಿದ್ಧ ಎನ್ನುವ ಹೇಳಿಕೆಯನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಆಳ್ವಾ ಈಗಾಗಲೇ ನೀಡಿದ್ದರೂ, ಕಾವ್ಯಾ ಫಾರ್ ಜಸ್ಟೀಸ್ ಎನ್ನುವ ಹೆಸರಿನಲ್ಲಿ ಹೋರಾಟಗಳು ಮುಂದುವರಿದೆ. ಅಗಸ್ಟ್ 8 ರಂದು ಮಂಗಳೂರಿನಲ್ಲಿ ಈ ಸಂಘಟನೆ ಹೆಸರಿನಲ್ಲಿ ಬೃಹತ್ ಪ್ರತಿಭಟನೆಯೂ ನಡೆದಿದ್ದು, ಈ ಪ್ರತಿಭಟನೆಯಲ್ಲಿ ಬಿಲ್ಲವ ಸಂಘಟನೆಗಳು ಹಾಗೂ ಕಾಂಗ್ರೇಸ್ ಪಕ್ಷಕ್ಕೆ ಸೇರಿದ ಮುಖಂಡರೇ ಹೆಚ್ಚು ಭಾಗಿಯಾಗಿದ್ದರು.
ಆಳ್ವಾರೊಂದಿಗೆ ನಾವು ಎನ್ನುವ ಪರಿಕಲ್ಮನೆಯಡಿ ಇರುವ ಬಂಟ ಸಮುದಾಯದ ಮಂದಿ ಹಾಗೂ ಬಿಜೆಪಿ ಪಕ್ಷಕ್ಕೆ ಸೇರಿದ ಜನ ಹೆಚ್ಚಾಗಿ ಗುರುತಿಸಲ್ಪಡುತ್ತಿದ್ದಾರೆ. ಅಂದರೆ ಕಾವ್ಯಾ ಹೆಸರಿನಲ್ಲಿ ಜಿಲ್ಲೆಯಲ್ಲಿ ಬಂಟ್ ಹಾಗೂ ಬಿಲ್ಲವ ಸಮುದಾಯಗಳು ತಮ್ಮ ಪ್ರಾಬಲ್ಯವನ್ನು ಮೆರೆಯಲು ಆರಂಭಿಸಿವೆ ಎನ್ನುವುದು ಸ್ಪಷ್ಟವಾಗುತ್ತಿದೆ. ಕಾವ್ಯಾ ಸಾವಿನ ವಿಚಾರವಾಗಿ ಹೋರಾಟ ನಡೆಸುವ ಸಂಘಟನೆಗಳು ನೇರವಾಗಿ ಡಾ. ಮೋಹನ್ ಆಳ್ವಾ ವಿರುದ್ಧವೇ ಧ್ವನಿಯೆತ್ತುತ್ತಿವೆ.
ಕಾವ್ಯಾ ಪೋಷಕರು ಆಕೆಯ ಸಾವಿನ ಹಿಂದೆ ಶಾಲೆಯ ದೈಹಿಕ ಶಿಕ್ಷಕನಾದ ಪ್ರವೀಣ್ ಪೂಜಾರಿ ಕೈವಾಡವಿದೆ ಎನ್ನುವ ನೇರ ಆರೋಪ ಮಾಡಿದರೂ, ಜಸ್ಟೀಸ್ ಫಾರ್ ಕಾವ್ಯಾ ಹೆಸರಿನಲ್ಲಿ ಹೋರಾಟ ನಡೆಸುತ್ತಿರುವ ಸಂಘಟನೆಗಳು ಡಾ. ಮೋಹನ್ ಆಳ್ವಾ ಮೇಲೆಯೇ ಟಾರ್ಗೆಟ್ ಮಾಡುವ ಹಿಂದೆ ಬಲವಾದ ಕಾರಣವೂ ಇದೆ ಎನ್ನಲಾಗಿದೆ. ಮೋಹನ್ ಆಳ್ವಾ ಮೂಡಬಿದಿರೆಯಲ್ಲಿ ಆಳ್ವಾಸ್ ನುಡಿಸಿರಿ ಹಾಗೂ ಆಳ್ವಾಸ್ ವಿರಾಸತ್ ಹೆಸರಿನಲ್ಲಿ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದು ಆಳ್ವಾಸ್ ವಿರೋಧಿ ಬಳಗಕ್ಕೆ ನುಂಗಲಾರದ ಬಿಸಿ ತುಪ್ಪವಾಗಿರುವುದಂತು ನಿಜ.
ಆಳ್ವಾಸ್ ನುಡಿಸಿರಿಗೆ ಪರ್ಯಾಯವಾಗಿ ಜನನುಡಿ ಕಾರ್ಯಕ್ರಮನ್ನೂ ಇದೇ ಗುಂಪು ಆಯೋಜಿಸಿತ್ತು. ಇದೀಗ ಅದೇ ಗುಂಪು ಕಾವ್ಯಾ ಸಾವಿನ ವಿಚಾರವನ್ನು ಮುಂದಿಟ್ಟುಕೊಂಡು ಮೋಹನ್ ಆಳ್ವಾರನ್ನು ಟಾರ್ಗೆಟ್ ಮಾಡುತ್ತಿರುವುದು ಇದೀಗ ಬಯಲಾಗುತ್ತಿದೆ. 2015 ರ ಮಾರ್ಚ್ ತಿಂಗಳಿನಲ್ಲಿ ಮಂಗಳೂರಿನಲ್ಲಿ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ವಿರಾಟ್ ಹಿಂದೂ ಸಮಾವೇಶದ ಕಾರ್ಯದರ್ಶಿಯಾಗಿದ್ದ ಮೋಹನ್ ಆಳ್ವಾ ವಿರುದ್ಧ ಕೆಲವರು ತೆರೆಮರೆಯಲ್ಲಿ ಕತ್ತಿ ಮಸೆಯುತ್ತಿದ್ದರೆ, ಇನ್ನೊಂದೆಡೆ ಆಳ್ವಾ ಬಂಟ್ ಸಮುದಾಯಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಸಾವಿಗೀಡಾದ ಕಾವ್ಯಾ ಬಿಲ್ಲವ ಸಮುದಾಯಕ್ಕೆ ಸೇರಿದ್ದು, ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಿಸಿದಂತೆ ಎರಡೂ ಸಮುದಾಯಗಳೂ ತಮ್ಮ ತಮ್ಮ ಪ್ರತಿಷ್ಟೆಯನ್ನು ಈ ವಿಚಾರದಲ್ಲಿ ಎತ್ತಿತೋರಿಸುವ ಪ್ರಯತ್ನವನ್ನು ಮುಂದುವರಿಸುತ್ತಿದೆ.
ಕಾವ್ಯಾ ಸಾವಿನ ಚಿತೆಯ ಬೆಂಕಿಯಲ್ಲಿ ಬೀಡಿ ಹಚ್ಚಿಕೊಳ್ಳುವ ಸಂಘಟನೆಗಳು ಮೊದಲು ಮಾಡಬೇಕಾಗಿರುವುದು ಸಾವಿನ ಕುರಿತು ತನಿಖೆಗೆ ಆಗ್ರಹವೇ ಹೊರತು ಬಂಟ, ಬಿಲ್ಲವ, ಕಾಂಗ್ರೇಸ್, ಬಿಜೆಪಿ ಪೈಪೋಟಿಯನ್ನಲ್ಲ. ತನ್ನ ಲಾಭ ಈಡೇರಿದ ಬಳಿಕ ಕಾವ್ಯಾ ಸಾವನ್ನು ಮರೆಯುವ ಇಂಥಹ ಸಂಘಟನೆಗಳ ನೈಜ ಬಣ್ಣವನ್ನು ಕಾವ್ಯಾ ಪೋಷಕರು ತಿಳಿಯಬೇಕಿದೆ. ಜಿಲ್ಲೆಯಲ್ಲಿ ನಡೆದ ಕಾವ್ಯಾಳಂತಹ ಅನೇಕ ಸಾವುಗಳ ಬಗ್ಗೆಯೂ ಈ ಸಂಘಟನೆಗಳು ಮೊದಲಿಗೆ ಅಬ್ಬರಿಸಿ, ಬಳಿಕ ಸುಮ್ಮನಾದ ಉದಾಹರಣೆಯೂ ನಮ್ಮ, ನಿಮ್ಮ ಮುಂದಿದೆ. ಕಾವ್ಯಾ ಸಾವಿನ ತನಿಖೆ ಅಗತ್ಯವಾಗಿ ಆಗಬೇಕಿದ್ದು, ಸತ್ಯ ಹೊರಬರಬೇಕಿದೆ. ಆರೋಪಿಗೆ ಕಠಿಣ ಶಿಕ್ಷೆ ಆಗಬೇಕಿದೆ.ಅದನ್ನು ಬಿಟ್ಟು ತಮ್ಮ ಒಣ ಪ್ರತಿಷ್ಟೆಯನ್ನು ಮುಂದಿಟ್ಟು ಹೋರಾಟ ನಡೆಸುವುದನ್ನು ಆಳ್ವಾ ಪರ, ವಿರೋಧ ಬಣಗಳು ಬಿಡಬೇಕಿದೆ…