LATEST NEWS
ಕರಾವಳಿಯ ಅಂಡೆಪಿರ್ಕಿ ಈಗ ಟಿವಿಯಲ್ಲಿ

ಕರಾವಳಿಯ ಅಂಡೆಪಿರ್ಕಿ ಈಗ ಟಿವಿಯಲ್ಲಿ
ಮಂಗಳೂರು ನವೆಂಬರ್ 11: ಮಕ್ಕಳ ಹಾಟ್ ಫೇವರೇಟ್ ಅನಿಮೇಷನ್ ಪಾತ್ರಗಳಾದ ಮೋಟು ಪತ್ಲು, ಚೋಟಾ ಭೀಮ್, ಡೊರೆಮೋನ್, ಮೈಟಿ ರಾಜು, ಆಗಿ ಎಂಡ್ ಕಾರ್ಕೋಜ್ ಗಳಿಗೆ ಕರಾವಳಿಯ ತುಳು ಅನಿಮೇಷನ್ ಪಾತ್ರ ಒಂದು ಸೆಡ್ಡು ಹೊಡೆದಿದೆ ಎಂದರೆ ನಂಬಲು ಸಾಧ್ಯವೇ ?
ಆದರೆ ಇದು ನಿಜ, ತುಳುನಾಡಿನ ಅದರಲ್ಲೂ ಮಂಗಳೂರಿನ ಪ್ರಚಲಿತ ಅನಿಮೇಶನ್ ಪಾತ್ರ ಒಂದು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಹವಾ ಎಬ್ಬಿಸಿದೆ. ಕಳೆದ 3 ವರ್ಷಗಳಿಂದ ಈ ಅನಿಮೇಷನ್ ಪಾತ್ರ ಅನಿಮೇಷನ್ ಕ್ಷೇತ್ರದಲ್ಲಿನ ಇತ್ತೀಚೆಗಿನ ಎಲ್ಲಾ ಘಟಾನುಘಟಿ ಅನಿಮೇಷನ್ ಪಾತ್ರಗಳಿಗೆ ಸೆಡ್ಡು ಹೊಡೆದು ಕರಾವಳಿಯ “ಅಂಡೆಪಿರ್ಕಿ” ಪ್ರಶಸ್ತಿ ಗಳಿಸಿದೆ.

ಮಂಗಳೂರಿನ ಓಂ ಅನಿಮೇಷನ್ ಸ್ಟುಡಿಯೋ ಈ “ಅಂಡೆಪಿರ್ಕಿ” ಪಾತ್ರಕ್ಕೆ ಜೀವ ತುಂಬಿದ್ದು ಕಳೆದ 2015, 2016 ಸೇರಿದಂತೆ 2017ರಲ್ಲಿ ಸತತ ಮೂರು ಬಾರಿ ಪ್ರಶಸ್ತಿ ಗೆದ್ದುಕೊಂಡಿದೆ.
ಮಂಗಳೂರಿನ ಓಂ ಅನಿಮೇಷನ್ ತಂಡದ ಶ್ರಮ ಸಾಕಾರಗೊಂಡಿದ್ದು ಇನ್ನು ಕೆಲವೇ ದಿನಗಳಲ್ಲಿ ಅಂದರೆ ಡಿಸೆಂಬರ್ 3 ರಂದು “ಅಂಡೆಪಿರ್ಕಿ” “ಆ್ಯಂಡಿ ಪಿರ್ಕಿ”ಯಾಗಿ ಭಾರತ ಸೇರಿದಂತೆ ಸಾರ್ಕ ದೇಶಗಳಾದ ಅಫಘಾನಿಸ್ತಾನ, ಬಾಂಗ್ಲಾದೇಶ, ಬೂತಾನ್, ಮಾಲ್ಡಿವ್ಸ್, ನೇಪಾಳ, ಶ್ರೀಲಂಕಾ ಸೇರಿದಂತೆ ಪಾಕಿಸ್ತಾನದ ಚಿಣ್ಣರನ್ನು ರಂಜಿಸಲಿದ್ದಾರೆ.
ಅಂತರಾಷ್ಟ್ರೀಯ ಅನಿಮೇಷನ್ ವಾಹಿನಿ ಪೊಗೊ ದಲ್ಲಿ ಭಾನುವಾರ ಪ್ರೈಮ್ ಟೈಮ್ ನಲ್ಲಿ ಈ “ಆ್ಯಂಡಿ ಪಿರ್ಕಿ” ಪ್ರಸಾರ ಆರಂಭವಾಗಲಿದೆ.
ಟಾಮ್ ಆ್ಯಂಡ್ ಜೆರ್ರಿ, ಚೋಟಾ ಭೀಮ್ ನಂತೆಯೇ ಅಂಡೆಪಿರ್ಕಿ ಅ್ಯನಿಮೇಟೆಡ್ ಚಿತ್ರ. ಇತಿಹಾಸ ಪೂರ್ವದ ಕಲ್ಪನೆಯಲ್ಲಿ ಚಿತ್ರ ಮೂಡಿ ಬಂದಿದೆ. ಯಾವುದೇ ಸಂಸ್ಕೃತಿ ಅನುಕರಣೆ ಮಾಡದಿರುವುದರಿಂದ ವಿಶ್ವದ ಯಾವುದೇ ವ್ಯಕ್ತಿ ಇದನ್ನು ಅರ್ಥ ಮಾಡಿಕೊಂಡು ನೋಡಬಹುದಾಗಿದೆ.
ಆ್ಯಂಡಿ ಪಿರ್ಕಿ ಚಿತ್ರ ಇಬ್ಬರು ಗೆಳೆಯರ ನಡುವಿನ ಹಾಸ್ಯ ಭರಿತ ಪ್ರಸಂಗದ ಸುತ್ತ ಹಣೆಯಲಾಗಿದೆ. ಆ್ಯಂಡಿ ಒಂದು ಡೈನೋಸರ್ ಪಾತ್ರ ಹಾಗೂ ಪಿರ್ಕಿ ಗುಹೆಯಲ್ಲಿ ವಾಸಿಸುವ ಆದಿ ಮಾನವನ ಪಾತ್ರ. ಒಬ್ಬ ಪೆದ್ದು ಪೆದ್ದಾಗಿ ವರ್ತಿಸುವ ಪಾತ್ರವಾದರೆ ಮತ್ತೊಂದು ಅತೀ ಬುದ್ದಿವಂತ ಪಾತ್ರ. ಇಬ್ಬರ ಚೇಷ್ಟೆ ಮಕ್ಕಳನ್ನು ನಗಿಸುವುದರಲ್ಲಿ ಸಂಶಯವಿಲ್ಲ.
ಮಂಗಳೂರಿನ ಓಂ ಆನಿಮೇಷನ್ ನ ವಿವೇಕ್ ಬೋಳಾರ್ ಅವರ ತಂಡ ಈ ಆ್ಯಂಡಿ ಪಿರ್ಕಿ ಪಾತ್ರಗಳಿಗೆ ಜೀವ ತುಂಬಿದ್ದು 78 ಕಂತುಗಳ ಈ ಸೀರಿಯಲ್ ಪೊಗೊ ಚಾನಲ್ ನಲ್ಲಿ ಪ್ರಸಾರವಾಗಿ ಮಕ್ಕಳ ಮನ ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ.
ಈಗಾಗಲೇ 20ಕ್ಕೂ ಹೆಚ್ಚು ಎಪಿಸೋಡ್ ಗಳು ಸಿದ್ದವಾಗಿದ್ದು ಪ್ರತಿ ಎಪಿಸೋಡ್ ಸಿದ್ದಪಡಿಸಲು ಓಂ ಅನಿಮೇಷನ್ ತಂಡ 3 ತಿಂಗಳ ಶ್ರಮವಹಿಸಿದೆ.
ಅಂಡೆ ಪಿರ್ಕಿ ಹೆಸರಿನ ಹಿಂದಿರುವ ಕತೆ
ಈ ಪ್ರಾಜೆಕ್ಟ್ ಆರಂಭಿಸುವಾಗ ಸರ್ವರ್ ನಲ್ಲಿ ಹೆಸರೊಂದನ್ನು ಹಾಕಬೇಕಿತ್ತು. ಪ್ರಾಜೆಕ್ಟ್ ಗೆ ಒಂದು ಹೆಸರಿಡುವ ದಾವಂತದಲ್ಲಿ ತಕ್ಷಣಕ್ಕೆ ಹೆಸರು ಹೊಳೆಯಲಿಲ್ಲ. ಆ ಕಾರಣ ತುಳು ಭಾಷೆಯಲ್ಲಿ ಪ್ರಚಲಿತದಲ್ಲಿರುವ ಅಂಡೆಪಿರ್ಕಿ ಎಂದೇ ಹೆಸರಿಡಲಾಯಿತು. ಅಂಡೆ ಪಿರ್ಕಿ ಅಂದರೆ ತುಳು ಭಾಷೆಯಲ್ಲಿ ಪೆದ್ದು ಪೆದ್ದಾಗಿ ವರ್ತಿಸುವ ಎಂದರ್ಥ ಪ್ರಾಜೆಕ್ಟ್ ಗೆ ಹೆಸರಿಡುವ ಧಾವಂತದಲ್ಲಿ ತಕ್ಷಣಕ್ಕೆ ಹುಡುಗಾಟಿಕೆಗೆ ಈ ಅಂಡೆಪಿರ್ಕಿ ಎಂದು ಹೆಸರಿಡಲಾಯಿತು. ಆದರೆ ಅದೇ ಅಂಡೆ ಪಿರ್ಕಿ ಈಗ ವಿಶ್ವದಲ್ಲಿಯೇ ಧೂಳೆಬ್ಬಿಸಲಿದೆ.