LATEST NEWS
“ಮಂಗಳೂರಿನಲ್ಲಿ ಇಂದಿರಾ ಕ್ಯಾಂಟಿನ್” – ಡಿವೈಎಫ್ ಐ ಅಣಕು ಪ್ರದರ್ಶನ
ಮಂಗಳೂರು ಅಗಸ್ಟ್ 16: ಇಡ್ಲಿ ಪ್ಲೇಟಿಗೆ ಐದು ರುಪಾಯಿ. ಬಿಸ್ಕೆತ್ ರೊಟ್ಟಿ ಪ್ಲೇಟಿಗೆ ಐದು ರುಪಾಯಿ, ಸಂಜೀರ ಕೇವಲ ಐದು ರೂಪಾಯಿ, ಐದು ರೂಪಾಯಿಗೆ ಚಾ ಕಾಫಿ ಈ ಬೆಲೆಯಲ್ಲಿ ಹೋಟೆಲ್ ನಡೆಯುತ್ತಾ ಎಂದು ಹುಬ್ಬೇರಿಸಬೇಡಿ.
ಈ ರೀತಿಯ ಭಾರೀ ಕಡಿಮೆ ಬೆಲೆಯಲ್ಲಿ ಚಾ ತಿಂಡಿ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಮಾರಾಟ ಮಾಡಲಾಗಿತ್ತು.
ಜನರು ನಾಮುಂದು ತಾಮುಂದು ಎಂದು ಚಾ ತಿಂಡಿ ತಿನಿಸುಗಳನ್ನು ಖರೀದಿಸಿ ಹೊಟ್ಟೆ ತಣಿಸಿಕೊಂಡರು. ಈ ಎಲ್ಲಾ ದೃಶ್ಯಾವಳಿಗಳು ಕಂಡು ಬಂದದ್ದು ಡಿವೈಎಫ್ಐ ಸಂಘಟನೆ ಆಯೋಜಿಸಿದ್ದ ಅಣಕು ಇಂದಿರಾ ಕ್ಯಾಂಟೀನ್ ಪ್ರದರ್ಶನ ಪ್ರತಿಭಟನೆಯಲ್ಲಿ.
ರಾಜ್ಯ ಸರಕಾರ ಕಡಿಮೆ ದರದ ಉಪಹಾರಗೃಹ ಇಂದಿರಾ ಕ್ಯಾಂಟೀನ್ ಗೆ ಬೆಂಗಳೂರಿನಲ್ಲಿ ಚಾಲನೆ ನೀಡಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಬೆಂಗಳೂರಿನಲ್ಲಿ ಇಂದಿರಾ ಕ್ಯಾಂಟೀನ್ ಗೆ ಇಂದು ಚಾಲನೆ ನೀಡಿದ್ದಾರೆ.
ಆದರೆ ಈ ನಡುವೆ ಇಂದಿರಾ ಕ್ಯಾಂಟೀನ್ ಸೌಲಭ್ಯವನ್ನು ಮಂಗಳೂರಿಗೂ ವಿಸ್ತರಿಸಬೇಕೆಂದು ಡಿವೈಎಫ್ಐ ಇಂದು ಮಂಗಳೂರಿನಲ್ಲಿ ಅಣಕು ಪ್ರದರ್ಶನ, ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಅಣುಕು ಇಂದಿರಾ ಕ್ಯಾಂಟೀನ್ ಆರಂಭಿಸಿ ಭಾರಿ ಕಡಿಮೆ ದರದಲ್ಲಿ ಚಾ ತಿಂಡಿ ವಿತರಿಸಲಾಯಿತು. ಮಂಗಳೂರಿನ ಹೋಟೆಲ್ ಗಳಲ್ಲಿ ದರ ಗಗನಕ್ಕೆರಿದ್ದು ಅದನ್ನು ನಿಯಂತ್ರಿಸಬೇಕಾದರೆ ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ಅನ್ನು ಮಂಗಳೂರಿಗೂ ವಿಸ್ತರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು .
ಈ ಸಂದರ್ಭದಲ್ಲಿ ಮಾತನಾಡಿದ ಸಿಐಟಿಯು ಮುಖಂಡ ಸುನಿಲ್ ಕುಮಾರ್ ಬಜಾಲ್ ಇಂದಿರಾ ಕ್ಯಾಂಟೀನ್ ಬೆಂಗಳೂರಿಗೆ ಮಾತ್ರ ಸೀಮಿತವಾಗದೇ ಸರಕಾರ ರಾಜ್ಯದಾದ್ಯಂತ ವಿಸ್ತರಿಸಬೇಕೆಂದು ಒತ್ತಾಯಿಸಿದರು . ಇಂದಿರಾ ಕ್ಯಾಂಟೀನ್ ಮಂಗಳೂರು ನಗರಕ್ಕೆ ವಿಸ್ತರಣೆಯಾದರೆ ಮಾತ್ರ ಮಂಗಳೂರಿನ ಹೋಟೆಲ್ ಗಳಲ್ಲಿ ದರ ನಿಯಂತ್ರಣಕ್ಕೆ ಬರಲಿದೆ ಎಂದು ಅಭಿಪ್ರಾಯಪಟ್ಟರು. ಜನಸಾಮಾನ್ಯರ ಬವಣೆಗಳನ್ನು ಗಮನದಲ್ಲಿಟ್ಟು ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್ ನನ್ನು ಆರಂಭಿಸಿರುವುದು ಶ್ಲಾಘನೀಯ ಎಂದವರು ಹೇಳಿದರು.