Connect with us

KARNATAKA

ಸುದ್ದಿ ಬಿತ್ತರಸುವುದಾಗಿ ₹ 3 ಲಕ್ಷ ಸುಲಿಗೆ: ಯೂಟ್ಯೂಬ್ ಚಾನೆಲ್‌ನ ಇಬ್ಬರ ಬಂಧನ

Share Information

ಬೆಂಗಳೂರು, ಆಗಸ್ಟ್ 01: ಮಾಂಸ ಮಾರಾಟ ಮಳಿಗೆ ಬಗ್ಗೆ ವಿಡಿಯೊ ಸುದ್ದಿ ಬಿತ್ತರಿಸಿ ಪೊಲೀಸರಿಂದ ಜಪ್ತಿ ಮಾಡಿಸುವುದಾಗಿ ಬೆದರಿಸಿ ವ್ಯಾಪಾರಿಯೊಬ್ಬರಿಂದ ₹ 3 ಲಕ್ಷ ಸುಲಿಗೆ ಮಾಡಿರುವ ಇಬ್ಬರು ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

‘ಆತ್ಮಾನಂದ್ ಹಾಗೂ ಆನಂದ್ ಅಲಿಯಾಸ್ ಫಿಗರ್ ಬಂಧಿತರು. ಇವರಿಬ್ಬರು, ಯೂಟ್ಯೂಬ್‌ನಲ್ಲಿ ‘ಎ.ಕೆ. ನ್ಯೂಸ್ ಕನ್ನಡ’ ಚಾನೆಲ್‌ ಮಾಡಿದ್ದರು. ಅದರ ಹೆಸರಿನಲ್ಲಿ ಜನರನ್ನು ಬೆದರಿಸಿ ಹಣ ಸುಲಿಗೆ ಮಾಡುತ್ತಿದ್ದರು. ಕೆ.ಆರ್.ಪುರ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ ಇವರಿಬ್ಬರನ್ನು ಸೆರೆ ಹಿಡಿಯಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ವಿಡಿಯೊ ಸುದ್ದಿ ಬಿತ್ತರಿಸುವುದಾಗಿ ಹೇಳಿ ಜನರನ್ನು ಸುಲಿಗೆ ಮಾಡುವುದನ್ನೇ ಆರೋಪಿಗಳು ವೃತ್ತಿ ಮಾಡಿಕೊಂಡಿದ್ದರು. ಮಾಂಸ ಮಾರಾಟ ಮಳಿಗೆ ಮಾಲೀಕ ಸಾದಿಕ್ ಖಾನ್ ಮಾತ್ರ ಸದ್ಯ ದೂರು ನೀಡಿದ್ದಾರೆ. ಬೇರೆ ಯಾರಿಗಾದರೂ ವಂಚನೆಯಾಗಿದ್ದರೆ, ಠಾಣೆಗೆ ದೂರು ನೀಡಬಹುದು’ ಎಂದು ತಿಳಿಸಿವೆ.

ಆರಂಭದಲ್ಲಿ ₹2 ಲಕ್ಷ ವಸೂಲಿ: ‘ಕೆ.ಆರ್.ಪುರ ಬಳಿಯ ದೇವಸಂದ್ರದ ಹಾದಿ ಮಸೀದಿ ರಸ್ತೆಯ 8ನೇ ಅಡ್ಡರಸ್ತೆ ನಿವಾಸಿ ಸಾದಿಕ್ ಖಾನ್, ಮನೆ ಸಮೀಪದಲ್ಲಿ ಮಾಂಸ ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ನಾಲ್ಕು ತಿಂಗಳ ಹಿಂದೆ ಅಂಗಡಿ ಬಳಿ ಹೋಗಿದ್ದ ಆರೋಪಿಗಳು, ‘ನಾವು ‘ಎ.ಕೆ. ನ್ಯೂಸ್ ಕನ್ನಡ’ ಚಾನೆಲ್ ವರದಿಗಾರರು. ನಿಮ್ಮ ಅಂಗಡಿ ಬಗ್ಗೆ ಸುದ್ದಿ ಬಿತ್ತರಿಸಿ, ಪೊಲೀಸರಿಂದ ಜಪ್ತಿ ಮಾಡಿಸುತ್ತೇವೆ’ ಎಂಬುದಾಗಿ ಬೆದರಿಸಿದ್ದರು’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘₹ 5 ಲಕ್ಷ ನೀಡಿದರೆ ಸುದ್ದಿ ಮಾಡುವುದಿಲ್ಲವೆಂದು ಆರೋಪಿಗಳು ಹೇಳಿದ್ದರು. ಹೆದರಿದ್ದ ಸಾದಿಕ್, ₹ 2 ಲಕ್ಷ ನೀಡಿದ್ದರು. ಇದಾದ ನಂತರವೂ ಆರೋಪಿಗಳ ಕಿರುಕುಳ ಮುಂದುವರಿದಿತ್ತು. ಪುನಃ ಹಣಕ್ಕೆ ಆರೋಪಿಗಳು ಬೇಡಿಕೆ ಇರಿಸಿದ್ದರು. ಆದರೆ, ಹಣವಿಲ್ಲವೆಂದು ಸಾದಿಕ್ ಹೇಳಿದ್ದರು.’

‘ಹಣ ನೀಡಲಿಲ್ಲವೆಂಬ ಕಾರಣಕ್ಕೆ ಆರೋಪಿಗಳು, ಕೆ.ಆರ್.ಪುರ ಪೊಲೀಸರ ಮೂಲಕ ಸಾದಿಕ್ ಅವರ ಅಣ್ಣನ ಅಂಗಡಿ ಮೇಲೆ ದಾಳಿ ಮಾಡಿಸಿದ್ದರು. ನಂತರ, ಸಾದಿಕ್ ಅಂಗಡಿ ಮೇಲೂ ದಾಳಿ ಮಾಡಿಸುವುದಾಗಿ ಬೆದರಿಸಿ ಪುನಃ ₹ 1 ಲಕ್ಷ ಪಡೆದಿದ್ದರು. ಪ್ರತಿ ತಿಂಗಳು ₹ 20 ಸಾವಿರದಿಂದ ₹ 25 ಸಾವಿರ ನೀಡುವಂತೆಯೂ ಆರೋಪಿಗಳು ಒತ್ತಾಯಿಸಿದ್ದರು.’

‘ಇತ್ತೀಚಿನ ದಿನಗಳಲ್ಲಿ ಆರೋಪಿಗಳ ಕಿರುಕುಳ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಸಾದಿಖ್ ಖಾನ್, ಕೆ.ಆರ್.ಪುರ ಠಾಣೆಗೆ ದೂರು ನೀಡಿದ್ದರು. ಅದರನ್ವಯ ದಾಖಲಾಗಿದ್ದ ಪ್ರಕರಣದ ತನಿಖೆಯನ್ನು ಸಿಸಿಬಿಗೆ ವಹಿಸಲಾಗಿತ್ತು’ ಎಂದು ಮೂಲಗಳು ತಿಳಿಸಿವೆ.


Share Information
Advertisement
Click to comment

You must be logged in to post a comment Login

Leave a Reply