ನವದೆಹಲಿ ಅಗಸ್ಟ್ 2 : ಸೀರೆಗಳ ಮೇಲೆ ಶೇ 5 ರಷ್ಟು ಸರಕು ಮತ್ತು ಸೇವಾ ತೆರಿಗೆ ವಿಧಿಸಲಾಗುವುದು ಎಂದು ಅಬಕಾರಿ ಮತ್ತು ಸೀಮಾ ಸುಂಕಗಳ ಕೇಂದ್ರೀಯ ಮಂಡಳಿಯು ಸ್ಪಷ್ಟಪಡಿಸಿದೆ. ಸೀರೆಯನ್ನು ವಸ್ತ್ರ ಅಥವಾ ಉಡುಪು ಎಂದು ವರ್ಗೀಕರಿಸುವುದಕ್ಕೆ ಮತ್ತು ಯಾವ ತೆರಿಗೆ ಹಂತದ ವ್ಯಾಪ್ತಿಗೆ ಬರಲಿದೆ ಎನ್ನುವುದರ ಕುರಿತು ಗೊಂದಲಗಳಿಗೆ ಮಂಡಳಿಯು ತೆರೆ ಎಳೆದಿದೆ. ಕಸೂತಿ ಕೆಲಸದ ಸೀರೆಗಳನ್ನು ವಸ್ತ್ರ ಎಂದೇ ಪರಿಗಣಿಸುವುದಾಗಿ ಹೇಳಿದೆ ಇದರಿಂದ ವಸ್ತ್ರೋದ್ಯಮದಲ್ಲಿ ಈ ಕುರಿತು ಮೂಡಿದ್ದ ಅನುಮಾನಗಳು ಈಗ ದೂರವಾಗಿವೆ. ಸೀರೆಗಳಿಗೆ ಕುಸುರಿ ಕೆಲಸ ಮಾಡಿರಲಿ ಅಥವಾ ಮಾಡದಿರಲಿ ವಸ್ತ್ರಗಳಿಗೆ ವಿಧಿಸಲಾಗಿರುವ ಶೇಕಡ 5ರಷ್ಟು ಜಿಎಸ್ಟಿ ದರವೇ ಅನ್ವಯಿಸಲಿದೆ ಎಂದು ತಿಳಿಸಿದೆ. ಜವಳಿ ನೂಲು ಮತ್ತು ವಸ್ತ್ರಗಳಿಗೆ ಶೇಕಡ ಐದರಷ್ಟು ತೆರಿಗೆ ವಿಧಿಸಲಾಗುತ್ತಿದ್ದು, ಸಿದ್ಧ ಉಡುಪುಗಳಿಗೆ ಸಂಬಂಧಿಸಿದಂತೆ 5ಸಾವಿರ ವರೆಗಿನ ಸರಕಿಗೆ ಶೇಕಡ 5ರಷ್ಟು ಮತ್ತು ಬೆಲೆ 1ಸಾವಿರ ದಾಟಿದ ಉಡುಪುಗಳಿಗೆ ಶೇಕಡ 12 ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಎಲ್ಲ ಬಗೆಯ ವಸ್ತುಗಳಿಗೆ ಶೇ 5 ರಷ್ಟು ಜಿಎಸ್ಟಿ ವಿಧಿಸಲು ಜಿಎಸ್ಟಿ ಮಂಡಳಿಯು ಈ ಮೊದಲೇ ನಿರ್ಧರಿಸಿದೆ. ಧೋತಿಗಳಿಗೂ ಶೇಕಡ 5ರಷ್ಟು ತೆರಿಗೆ ಅನ್ವಯ ಗೊಳ್ಳಲಿದೆ. ಸಣಬಿನಿಂದ ತಯಾರಿಸಿದ ಕೈಚೀಲಗಳು ಶೇಕಡ 18 ರಷ್ಟು ತೆರಿಗೆ ವ್ಯಾಪ್ತಿಗೆ ಒಳಪಡಲಿವೆ ಎಂದು ಸಿಬಿಇಸಿ ಸ್ಪಷ್ಟಪಡಿಸಿದೆ.

0 Shares

Facebook Comments

comments