ಸಾರ್ವಜನಿಕವಾಗಿಯೇ ಅಪ್ಪನನ್ನು ಪರಸ್ಪರ ಎಳೆದಾಡಿಕೊಂಡ ಶಾಸಕರು

ಮಂಗಳೂರು, ಮಾರ್ಚ್ 1: ಶಾಸಕರಿಬ್ಬರು ಸಾರ್ವಜನಿಕರ ಮುಂದೆಯೇ ಪರಸ್ಪರ ಕಚ್ಚಾಡಿ ಕೈ ಕೈ ಮಿಲಾಯಿಸಲು ಮುಂದಾದ ಘಟನೆ ಇಂದು ಪಿಲಿಕುಲ ನಿಸರ್ಗಧಾಮದಲ್ಲಿ ನಡೆದಿದೆ.

ಮೂಡಬಿದಿರೆ ಶಾಸಕ ಮಾಜಿ ಸಚಿವ ಅಭಯಚಂದ್ರ ಜೈನ್ ಹಾಗೂ ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದೀನ್ ಬಾವಾ ಪರಸ್ಪರ ಕಚ್ಚಾಡಿಕೊಂಡ ಶಾಸಕರಾಗಿದ್ದು, ಕಾರ್ಯಕರ್ತರ ಮಧ್ಯಪ್ರವೇಶದಿಂದ ಬೀದಿಯಲ್ಲೇ ಹೊರಳಾಡುವ ಪ್ರಮೇಯ ತಪ್ಪಿದಂತಾಗಿದೆ.

ಪಿಲಿಕುಲ ನಿಸರ್ಗಧಾಮದಲ್ಲಿ ಮಾರ್ಚ್ 1 ರಂದು ಏಷ್ಯಾದಲ್ಲೇ ಪ್ರಥಮ ಎನ್ನಲಾಗುವ ತ್ರೀ ಡಿ ತಾರಾಂಗಣದ ಉದ್ಘಾಟನೆಯ ಕಾರ್ಯಕ್ರಮ ನಿಗದಿಯಾಗಿತ್ತು.

ಈ ಸಂದರ್ಭದಲ್ಲಿ ಮಂಗಳೂರು ಮೇಯರ್ ಕವಿತಾ ಸನಿಲ್ ಹಾಗೂ ಶಾಸಕ ಮೊಯಿದೀನ್ ಬಾವಾ ಹಾಗೂ ಅವರ ಅಪ್ತರು ಆಪ್ತ ಸಮಾಲೋಚನೆಯನ್ನು ನಡೆಸುತ್ತಿದ್ದರು.

ಈ ಸಂದರ್ಭದಲ್ಲಿ ಅಲ್ಲಿದ್ದ ಶಾಸಕರ ಆಪ್ತರೊಬ್ಬರು ಮಂಗಳೂರು ಮೇಯರ್ ಕವಿತಾ ಸನಿಲ್ ಅವರಲ್ಲಿ ನಿಮ್ಮ ಮೇಯರ್ ಸ್ಥಾನ ಮುಗಿಯುತ್ತಾ ಬಂದಿದ್ದು, ಮುಂದೆ ಏನು ಮಾಡುತ್ತೀರಿ ಎಂದು ಕೇಳಿದ್ದಾರೆ.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಮೊಯಿದೀನ್ ಬಾವಾ ಅವರು ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದರು.

ಈ ಸಂದರ್ಭದಲ್ಲಿ ಅವರ ಪಕ್ಕದಲ್ಲೇ ಇದ್ದ ಹಾಲಿ ಶಾಸಕ ಅಭಯಚಂದ್ರ ಜೈನ್ ಕಿವಿಗೆ ಈ ಮಾತು ಬಿದ್ದಿದ್ದು, ಕೂಡಲೇ ಧಾವಿಸಿ ಬಂದ ಜೈನ್ ಆಕಾಂಕ್ಷಿ ನಿನ್ನ ಅಪ್ಪ ಎಂದು ಮೊಯಿದೀನ್ ಬಾವಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದರಿಂದ ಕುಪಿತರಾದ ಮೊಯಿದೀನ್ ಬಾವಾ ಕೂಡಾ ನಿನ್ನ ಅಪ್ಪ ಎಂದು ಎದುರುತ್ತರ ನೀಡಿದ್ದಾರೆ.

ಇದರಿಂದ ಮತ್ತಷ್ಟು ಕುಪಿತರಾದ ಅಭಯಚಂದ್ರ ಜೈನ್ ಮೊಯಿದೀನ್ ಬಾವಾರ ಮೇಲೆ ಹಲ್ಲೆಗೆ ಮುಂದಾದಾಗ ಬಾವಾ ಕೂಡಾ ಪ್ರತಿ ಹಲ್ಲೆಗೆ ಸಿದ್ಧಗೊಂಡಿದ್ದರು.

ಸಾರ್ವಜನಿಕವಾಗಿ ನಡೆದ ಈ ಘಟನೆಯಿಂದ ಕ್ಷಣಕಾಲ ದಂಗಾಗಿದ್ದ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಬಳಿಕ ಇಬ್ಬರು ಶಾಸಕರನ್ನು ಸಮಾಧಾನಪಡಿಸಿ ದೂರಕ್ಕೆ ಕೊಂಡೊಯ್ದಿದ್ದಾರೆ.

ತಾರಾಲಯದ ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಗೂ ಏಷ್ಯಾದ ಪ್ರಥಮ ತಾರಾಲಯ ನೋಡಲು ಕಾತುರದಿಂದ ಬಂದಿದ್ದ ಜನರಿಗಂತು ಪರಿಸ್ಥಿತಿ ಕೈ ಕೊಂಚ ಕೈ ಮೀರಿದ್ದರೆ ವಿಶ್ವದಲ್ಲೇ ಅಪರೂಪವಾದ ಒಂದೇ ಪಕ್ಷದ ಶಾಸಕರಿಬ್ಬರ ಹೊಡೆದಾಟವನ್ನು ನೋಡುವ ಅವಕಾಶವೂ ಸಿಗುತ್ತಿತ್ತು.

Facebook Comments

comments