ಮಂಗಳೂರು, ಅಗಸ್ಟ್ 07 : ಪ್ರತಿವರ್ಷದ ಸಂಪ್ರದಾಯದಂತೆ ಈ ವರ್ಷವೂ ಸಮುದ್ರ ಪೂಜೆಯ ಮಂಗಳೂರಿನ ತಣ್ಣಿರು ಬಾವಿ ಕಡಲ ಕಿನಾರೆಯಲ್ಲಿ ನೆರವೇರಿಸಲಾಯಿತು. ಏಳುಪಟ್ಣ ಮೊಗವೀರ ಸಂಯುಕ್ತ ಮಹಾಸಭಾ ದ ವತಿಯಿಂದ ಪರಂಪರೆಯಂತೆ ಸಮುದ್ರ ಪೂಜೆ ನೆರವೇರಿಸಲಾಯಿತು. ಬೋಳೂರು, ಬೊಕ್ಕಪಟ್ಣ, ಕುದ್ರೋಳಿ, ಹೊಯಿಗೆ ಬಜಾರ್, ಬೋಳಾರ, ಜಪ್ಪು, ನೀರೇಶ್ವಾಲ್ಯ, ಪಡು ಹೊಯಿಗೆ, ಮೊಗವೀರ ಪಟ್ಣ ಸಭೆಗಳ ಒಳಪಟ್ಟ ಮೋಗವೀರರು ಕದ್ರಿಯ ಸುವರ್ಣ ಕದಳೀ ಮಠಾಧೀಶ ಶ್ರೀ ರಾಜಯೋಗಿ ನಿರ್ಮಲಾನಾಥಜೀ ಮಹಾರಾಜ್ ಅವರ ನೇತೃತ್ವದಲ್ಲಿ ಸಮುದ್ರ ಪೂಜೆ ನೆರವೇರಿಸಿದರು.

ಇಂದು ಚಂದ್ರ ಗೃಹಣ ದ ಕಾರಣ ಪೂಜಾ ವಿಧಿವಿದಾನಗಳಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಲಾಯಿತು. ಸಂಪ್ರದಾಯದಂತೆ ನೆರವೇರುತಿದ್ದ ವೈಭವದ ಮೆರವಣಿಗೆ ಕೈಬಿಟ್ಟು ನೇರವಾಗಿ ಸಮುದ್ರ ಪೂಜೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ 7 ಪಟ್ಣ ಮೊಗವೀರ ಸಂಯುಕ್ತ ಮಹಾಸಭಾಕ್ಕೆ ಒಳಪಟ್ಟ ಪ್ರತಿ ಮನೆಯವರು ತಮ್ಮ ಕಾಣಿಕೆಯಾಗಿ , ಹಾಲು, ತೆಂಗಿನ ಕಾಯಿ,ಸಿಯಾಳ ಸಮುದ್ರ ರಾಜನಿಗೆ ಅರ್ಪಿಸಲಾಯಿತು. ಸಮುದ್ರ ಪೂಜೆಯ ಬಳಿಕ ಅಧಿಕೃತ ಮೀನುಗಾರಿಕೆ ಆರಂಭವಾಗಿದೆ. ಹೊಸ ಉಲ್ಲಾಸ ಮತ್ತು ಆತ್ಮವಿಶ್ವಾಸದೊಂದಿಗೆ ಮೀನುಗಾರಿಕೆಗೆ ಕಡಲ ಮಕ್ಕಳು ತೆರಳಿದ್ದಾರೆ .

ಕರಾವಳಿಯ ವಿಶಿಷ್ಟ ಆಚರಣೆ ಈ ಸಮುದ್ರ ಪೂಜೆ

ಮಳೆಗಾಲ ಆರಂಭವಾದರೆ ಸಾಕು ಪಶ್ಚಿಮ ಕರಾವಳಿಯಲ್ಲಿರುವ ಅರಬ್ಬಿ ಸಮುದ್ರ ಆರ್ಭಟಿಸಲು ಪ್ರಾರಂಭಿಸುತ್ತದೆ, ಇಂತಹ ರೌದ್ರಾವತಾರ ತಾಳಿರುವ ಸಮುದ್ರ ರಾಜನನ್ನು ಮಣಿಸುವುದು ಸುಲಭದ ಮಾತಲ್ಲ ಇದೇ ಕಡಲನ್ನು ನಂಬಿ ಬದುಕುವ ಲಕ್ಷಾಂತರ ಮಂದಿ ಕರಾವಳಿ ಮೀನುಗಾರರಿಗೆ ಸಮುದ್ರವೇ ಅನ್ನದಾತ ಎಂದರೆ ತಪ್ಪಾಗಲಾರದು ಆದ್ದರಿಂದ ಸಮುದ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಮ್ಮ ಸಂಸಾರದ ರಥ ನಡೆಸಲು ಅನಾದಿ ಕಾಲದಿಂದಲೂ ನಡೆದು ಬಂದ ಕಡಲಿನ ಒಡಲನ್ನು ತಂಪಾಗಿರಿಸುವ ನಂಬಿಕೆ ಕರಾವಳಿಯಲ್ಲಿ ಇಂದಿಗೂ ಜೀವಂತವಾಗಿದೆ.

ಮೊಗವೀರ ಸಮುದಾಯ :

ಕರಾವಳಿಯ ಉದ್ದಕ್ಕೂ ಕಡಲ ತಡಿಯಲ್ಲಿ ವಾಸಿಸುವವರು ಈ ಮೊಗವೀರರು. ಈ ಮೊಗವೀರರ ಕುಲಕಸುಬು ಮೀನುಗಾರಿಕೆ. ಮುಂಜಾನೆ ಸೂರ್ಯೋದಯಕ್ಕೆ ಮೊದಲೇ ದೋಣಿಗಳನ್ನು ಕೆಳಗಿಳಿಸಿ ಆಳ ಸಮುದ್ರದಲ್ಲಿ ಬಲೆ ಬೀಸಿ ಮೀನು ಹಿಡಿದು ಹಿಂದಿರುಗುತ್ತಾರೆ. ಕಡಲ ತಡಿ ತಲುಪುತ್ತಿದ್ದಂತೆ ಹಿಡಿದ ಮೀನು ಮಾರಾಟ ಮಾಡಿ ಬಂದ ಗಳಿಕೆಯಿಂದಲೇ ಈ ಮೊಗವೀರರ ಜೀವನ ರಥ ಸಾಗುತ್ತದೆ. ಮೊಗವೀರರಿಗೆ ಮೀನುಗಾರಿಕಾ ದೋಣಿಗಳೆ ಜೀವನಾಧಾರ. ಸಮುದ್ರ ರಾಜನೇ ಅನ್ನದಾತ. ಮೊಗವೀರರು ಸಾಮೂಹಿಕವಾಗಿ ಮೀನುಹಿಡಿಯುವುದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಫ್ರೆಂಚರು ಭಾರತಕ್ಕೆ ಆಗಮಿಸಿದ ಕಾಲದಲ್ಲಿ ತಮ್ಮ ವಸಾಹತುಗಳನ್ನು ಹೆಚ್ಚಾಗಿ ಕರಾವಳಿಯಲ್ಲಿ ಸ್ಥಾಪಿಸಿದ್ದರು . ಕರಾವಳಿ ಪ್ರದೇಶದಲ್ಲಿದ್ದ ಮೀನುಗಾರರಿಗೆ ಫ್ರೆಂಚರು ಗುಂಪು ಗುಂಪಾಗಿ ಮೀನುಗಾರಿಕೆ ನಡೆಸುವ ಸಾಮೂಹಿಕ ಮೀನುಗಾರಿಕೆಯನ್ನು ಪರಿಚಯಿಸಿದರು. ಮೊಗವೀರ ಸಮುದಾಯ ಮೀನುಗಾರಿಕೆ ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಸಿಕೊಂಡು ಬಂದಿದೆ.

ಸಮುದ್ರ ಪೂಜೆ:

ಮೊಗವೀರರು ಆಚರಿಸುವ ಸಮುದ್ರ ಪೂಜೆ ಅತಿ ಪುರಾತನ ಸಂಪ್ರದಾಯ . ಮೊಗವೀರ ಸಮುದಾಯದವರು ಮೀನುಗಾರಿಕೆ ಆರಂಭಿಸಿದಂದಿನಿಂದ ನಡೆದು ಬಂದ ಸಂಪ್ರದಾಯ. ಮಳೆಗಾಲ ಆರಂಭವಾಗುತ್ತಿದ್ದಂತೆ ಕಡಲು ಪ್ರಕ್ಷುಬ್ಧ ವಾಗುತ್ತದೆ .ಕಡಲ ರೌದ್ರ ನರ್ತನ ಆರಂಭಗೊಳ್ಳುತ್ತಿದ್ದಂತೆ ಕಡಲ ಮಕ್ಕಳ ಮೀನುಗಾರಿಕೆ ರಜೆ ಆರಂಭವಾಗುತ್ತದೆ. ಹಿಂದೆ 3 ತಿಂಗಳ ಮೀನುಗಾರಿಕೆ ರಜೆ ಇತ್ತು .ಆದರೆ ಈಗ 45 ದಿನಗಳ ಮೀನುಗಾರಿಕಾ ರಜೆ ನೀಡಲಾಗಿದೆ .ಮೀನುಗಾರಿಕಾ ರಜೆ ಮುಗಿದ ಬಳಿಕ ಪ್ರಕ್ಷುಬ್ಧ ಗೊಂಡಿರುವ ಸಮುದ್ರ ರಾಜನನ್ನು ಶಾಂತಗೊಳಿಸಲು ಸಂಪ್ರದಾಯವೇ ಸಮುದ್ರ ಪೂಜೆ ಈ ಸಮುದ್ರ ಪೂಜೆಯಲ್ಲಿ ಎಲ್ಲಾ ಮೊಗವೀರ ಬಾಂಧವರು ಪಾಲ್ಗೊಳ್ಳುತ್ತಾರೆ.
ಮೊಗವೀರ ಸಮಾಜಕ್ಕೂ ಮಂಗಳೂರಿನ ಕದ್ರಿ ದೇವಾಲಯಕ್ಕೆ ಅದರಲ್ಲೂ ಸುವರ್ಣ ಕದಳೀ ಮಠಕ್ಕೂ ಅನನ್ಯ ಸಂಬಂಧ .ಮೊಗವೀರರ ಆದಿಗುರು ಮುತ್ಸೇಂದ್ರ ನಾಥ ರು ನಾಥ ಪಂಥಕ್ಕೆ ಸೇರಿದವರು .

ಈ ಹಿನ್ನೆಲೆಯಲ್ಲಿ ಸಮುದ್ರ ಪೂಜೆಯಲ್ಲಿ ನಾಥ ಪಂಥದ ಸ್ವಾಮೀಜಿ ಪ್ರಮುಖ ಪಾತ್ರ ವಹಿಸುತ್ತಾರೆ. ಮುಂಜಾನೆ ಸೂರ್ಯೋದಯದ ನಂತರ ಮೊಗವೀರ ಪಟ್ಟಣದ ಹಿರಿಯರು ಸುವರ್ಣ ಕದಳೀ ಮಠಕ್ಕೆ ತೆರಳಿ ಮಠದ ಮಠಾಧಿಪತಿ ಯವರನ್ನು ಸಮುದ್ರ ಪೂಜೆಗೆ ಆಹ್ವಾನಿಸುತ್ತಾರೆ. ಕದ್ರಿ ದೇವಾಲಯದಿಂದ ಮೆರವಣಿಗೆಯಲ್ಲಿ ಸ್ವಾಮೀಜಿಯವರನ್ನು ಕರೆತಂದು ಬೊಕ್ಕ ಪಟ್ಟಣದ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ನಂತರ ದೋಣಿಯ ಮೂಲಕ ಶೋಭಾಯಾತ್ರೆ ನಡೆದು ಸ್ವಾಮೀಜಿ ಅವರನ್ನು ಪೂಜೆ ನಡೆಯುವ ತಣ್ಣೀರುಬಾವಿ ಸಮುದ್ರ ಕಿನಾರೆಗೆ ಕರೆತರಲಾಗುತ್ತದೆ . ಅಲ್ಲಿ ಸಮುದ್ರ ರಾಜನಿಗೆ ಅರ್ಪಣೆ ಮಾಡುವ ಹಣ್ಣು ಹಾಲು ತೆಂಗಿನ ಕಾಯಿಗಳಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಪ್ರತಿಯೊಂದು ಮೊಗವೀರ ಕುಟುಂಬದಿಂದಲೇ ಒಂದೊಂದು ತೆಂಗಿನಕಾಯಿ ಹಾಗೂ ಹಾಲನ್ನು ಸಂಗ್ರಹಿಸಲಾಗುತ್ತದೆ ನಂತರ ಘೋಷ ವಾದ್ಯಗಳ ಮೂಲಕ ಕಡಲ ಕಿನಾರೆಗೆ ಬರುವ ಸ್ವಾಮೀಜಿ ಹಾಗೂ ಮೊಗವೀರ ಬಾಂಧವರು ಸಮುದ್ರ ರಾಜನಿಗೆ ಪ್ರಾರ್ಥನೆಯನ್ನು ಸಲ್ಲಿಸಿ ಕಡಲ ಒಡಲು ತಣಿಸಲು ಹಾಲು ಹಾಗೂ ಹಣ್ಣು ತೆಂಗಿನಕಾಯಿಯನ್ನು ಸಮರ್ಪಿಸುತ್ತಾರೆ . ಹಾಲು ಹಣ್ಣು ಹಂಪಲು ಅರ್ಪಣೆ ಸಮರ್ಪಿಸುವ ಮುನ್ನ ಶಾಂತವಾಗಿರುವ ಸಮುದ್ರ ರಾಜ ಕಡಲ ಮಕ್ಕಳು ಸಮರ್ಪಿಸಿದವುಗಳನ್ನು ಸ್ವೀಕರಿಸಿ ತನ್ನ ಒಡಲಲ್ಲಿ ಸೇರಿಸಿಕೊಳ್ಳುತ್ತಾನೆ.

ಕಡಲ ಮಕ್ಕಳ ಸಂಭ್ರಮ

ಕಡಲ ಮಕ್ಕಳಿಗೆ ನೂಲ ಹುಣ್ಣಿಮೆ ಯಂದು ನಡೆಯುವ ಸಮುದ್ರ ಪೂಜೆಯ ದಿನ ಸಂಭ್ರಮವೋ ಸಂಭ್ರಮ ಕಡಲನ್ನು ನಂಬಿ ಬದುಕುವವರು ಈ ಮೀನುಗಾರರು . ಸಮುದ್ರವೇ ಇವರಿಗೆ ತಾಯಿ ಕಡಲಿನ ಒಡಲಲ್ಲಿರುವ ಮತ್ಸ್ಯ ಸಂಪತ್ತನ್ನು ಹಿಡಿದು ಮಾರಾಟ ಮಾಡಿ ಜೀವನ ಸಾಗಿಸುವ ಮೀನುಗಾರರು ಎಂತಹ ಬಿರು ಮಳೆಯ ನಡುವೆಯೂ ಜಗ್ಗದೆ ದೋಣಿಗಳನ್ನು ಏರಿ ಹೋದರೆ ಮನೆಗೆ ವಾಪಸ್ ಹಿಂದಿರುಗುತ್ತಾರೆ ಎಂಬ ಭರವಸೆ ಇಲ್ಲ .

ಮಳೆಗಾಲದಲ್ಲಿ ರೌದ್ರಾವತಾರ ತಾಳುವ ಸಮುದ್ರ ರಾಜನನ್ನು ತಣಿಸಲು ಸಾವಿರಾರು ಕುಟುಂಬಗಳು ಇಂದಿನ ದಿನ ಸಮುದ್ರ ರಾಜನ ಒಡಲನ್ನು ತಣಿಸಲು ಹಾಲು ತೆಂಗಿನ ಕಾಯಿಯನ್ನು ಅರ್ಪಿಸುತ್ತಾರೆ. ಮೀನುಗಾರಿಕಾ ಋತು ಆರಂಭವಾಗುವ ಮೊದಲು ಸಮುದ್ರ ರಾಜನಿಗೆ ಸಲ್ಲಿಸುವ ಈ ಪೂಜೆಯಲ್ಲಿ ಕಡಲಲ್ಲಿ ಮತ್ಸ್ಯ ಸಂಪತ್ತನ್ನು ಹೆಚ್ಚಿಸಿ ಎಂದು ಪ್ರಾರ್ಥಿಸುತ್ತಾರೆ.

ಸಮುದ್ರಕ್ಕೆ ಮಳೆಗಾಲದಲ್ಲಿ ರೋಷ ಉಕ್ಕೇರುತ್ತದೆ ಅನೇಕ ಸಲ ಮೀನುಗಾರರನ್ನು ಬಲಿ ತೆಗೆದುಕೊಳ್ಳುವುದು ಇದೇ ಮತ್ಸ್ಯಕ್ಷಾಮ ಉಂಟು ಮಾಡಿ ಸಾವಿರಾರು ಕುಟುಂಬಗಳಲ್ಲಿ ಕಣ್ಣೀರು ಹಾಕುವಂತೆ ಮಾಡುವ ತಾಕತ್ತೂ ಸಮುದ್ರ ರಾಜನಿಗೆ ಈ ಎಲ್ಲ ಕಾರಣಗಳಿಗಾಗಿ ಸಮುದ್ರ ಒಡಲು ತಂಪಾಗಿರಲಿ ಎಂದು ವಿಶೇಷ ಪೂಜೆ ಹವನಗಳನ್ನು ಸಮುದ್ರ ತೀರದಲ್ಲಿ ಮಾಡಿ ಊರಿನ ಸಮಸ್ತರಿಗೂ ಕಡಲಿಗೆ ಹಾಲಿನ ಅಭಿಷೇಕವನ್ನು ಮಾಡುತ್ತಾರೆ .

ಎಳನೀರಿನ ಧಾರೆ ಎರೆಯಲಾಗುತ್ತದೆ ಮತ್ತು ಸಾವಿರಾರು ತೆಂಗಿನ ಕಾಯಿಗಳನ್ನು ಕಡಲಿನ ಒಡಲಿಗೆ ತುಂಬಿ ಮೀನುಗಾರಿಕೆಗೆ ಸಮುದ್ರಕ್ಕೆ ತೆರಳುವ ತಮ್ಮ ಕುಟುಂಬದ ಸದಸ್ಯ ರಕ್ಷಣೆ ಹಾಗೂ ಅಗಾಧ ಪ್ರಮಾಣದಲ್ಲಿ ಮತ್ಸ್ಯ ಸಂಪತ್ತು ನೀಡಬೇಕೆಂದು ಮೋಗವೀರ ಮಹಿಳೆಯರು ಸಮುದ್ರ ರಾಜನಲ್ಲಿ ಪ್ರಾರ್ಥಿಸುತ್ತಾರೆ .

ವಿಡಿಯೋಗಾಗಿ ಈ ಲಿಂಕನ್ನು ಒತ್ತಿರಿ..