UDUPI
ಬಳಸಿ ಪಂಚಗೃವ್ಯ,ಅಮೃತಪಾನಿ : ಪಡೆಯಿರಿ ರೋಗದಿಂದ ಮುಕ್ತಿ
ಉಡುಪಿ, ಸೆಪ್ಟೆಂಬರ್ 12 : ಉಡುಪಿ ದೊಡ್ಡಣಗುಡ್ಡೆಯ ರೈತ ಸೇವಾ ಕೇಂದ್ರದಲ್ಲಿರುವ ಸ್ವ ಸಹಾಯ ಸಂಘಗಳ ಘನ ಮತ್ತು ದ್ರವ ಸಂಪನ್ಮೂಲ ಉತ್ಪನ್ನಗಳು ಇದೀಗ ಎಲ್ಲೆಡೆ ಮನೆಮಾತಾಗಿವೆ. ತೋಟಗಳಲ್ಲಿ ಹಾಗೂ ಮನೆಯಲ್ಲಿ ಬೆಳೆಯುವ ಎಲ್ಲಾ ಜಾತಿಯ ತರಕಾರಿ ಮತ್ತು ಹೂವಿನ ಗಿಡಗಳಿಗೆ , ಎಲ್ಲಾ ರೀತಿಯ ಕೀಟಗಳಿಂದ ರಕ್ಷಣೆ ಹಾಗೂ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವಲ್ಲಿ ಗಮನಾರ್ಹವಾಗಿ ಯಶಸ್ಸು ಕಂಡಿದ್ದು,ರೈತರು ಮತ್ತು ನಾಗರೀಕರಿಂದ ಈ ಉತ್ಪನ್ನಗಳಿಗೆ ಬಹು ಬೇಡಿಕೆ ಬರುತ್ತಿದೆ.
ಸ್ವಚ್ಛ ಮಿಷನ್ ಉಡುಪಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಪ್ರಾರಂಭಗೊಂಡಿರುವ ಈ ಮಳಿಗೆಯಲ್ಲಿ , ಮಹಿಳಾ ಸ್ವಸಹಾಯ ಸಂಘದ ಸದಸ್ಯರು ತಯಾರಿಸುತ್ತಿರುವ ಪಂಚಗ್ರವ್ಯ, ಅಮೃತಪಾನಿ ಹಾಗೂ ಜೈವಿಕ ಕೀಟನಾಶಕಗಳು ಯಾವುದೇ ಅಡ್ಡಪರಿಣಾಮಗಳಿಲ್ಲದೇ ಪರಿಸರ ಸ್ನೇಹಿಯಾಗಿದೆ. ಈ ಉತ್ಪನ್ನಗಳ ತಯಾರಿ ಕುರಿತಂತೆ ಇಂಡಿಯನ್ ಗ್ರೀನ್ ಸರ್ವಿಸಸ್ ನ ನಿರ್ದೇಶಕ ವೆಲ್ಲೂರು ಶ್ರೀನಿವಾಸ್ ನೀಡಿರುವ 5 ದಿನಗಳ ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿರುವ ಸ್ವಸಹಾಯ ಸಂಘದ ಸದಸ್ಯರು ಈ ಉತ್ಪನ್ನಗಳ ಮಾರಾಟದಿಂದ ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ.
ಉತ್ಪನ್ನಗಳ ತಯಾರಿಕೆ ವಿಧಾನ ಮತ್ತು ಪ್ರಯೋಜನ:
ಪಂಚಗ್ರವ್ಯ:
5 ಕೆಜಿ ದೇಶಿ ತಳಿ ದನದ ಸಗಣಿ, 3 ಲೀ ಗೋಮೂತ್ರ, 2 ಲೀ ಹಾಲು, 2 ಲೀ ಮೊಸರು, 1 ಲೀ ತುಪ್ಪ, 2 ಲೀ ಕಬ್ಬಿನ ಹಾಲು, 2 ಲೀ ಎಳನೀರು ಹಾಗೂ 12 ಚೆನ್ನಗಿ ಕಲಿತ ಬಾಳೆಹಣ್ಣುಗಳನ್ನು ಡ್ರಮ್ ನಲ್ಲಿ ಹಾಕಿಟ್ಟು, , 20 ದಿನಗಳ ಕಾಲ ಚೆನ್ನಾಗಿ ಎಡ ಹಾಗೂ ಬಲಕ್ಕೆ ತಿರುಗಿಸಿ, ಬಟ್ಟೆ ಕಟ್ಟಿ ಮುಚ್ಚಿಡಬೇಕು, ನಂತರ ಈ ಮಿಶ್ರಣದ 1 ಲೀ ಗೆ 30 ಲೀ ನೀರು ಬೆರೆಸುವುದರ ಮೂಲಕ 600 ಲೀ ಪಂಚಗ್ರವ್ಯ ತಯಾರಾಗುತ್ತದೆ.
ಈ ಪಂಚಗ್ರವ್ಯವನ್ನು ಗಿಡದ ಎಲ್ಲಾ ಭಾಗದ ಬುಡಗಳಿಗೆ ಹಾಕಬಹುದು ಹಾಗೂ ಎಲೆ ಮತ್ತು ಕಾಂಡಗಳಿಗೆ ಸ್ಪ್ರೈ ಮಾಡುವುದರಿಂದ ಗಿಡಗಳಿಗೆ ಯಾವುದೇ ರೀತಿಯ ರೋಗ ಬರದಂತೆ ತಡೆಯಬಹುದಾಗಿದೆ.
ಅಮೃತಪಾನಿ :
5 ಕೆಜಿ ದೇಶಿ ತಳಿ ದನದ ಸಗಣಿ, 13 ಲೀ ಗೋಮೂತ್ರ, 2 ಲೀ ಕಬ್ಬಿನ ಹಾಲನ್ನು 2 ದಿನಗಳ ಕಾಲ ಮಿಶ್ರಣ ಮಾಡಿ, ಈ ಮಿಶ್ರಣವನ್ನು 1 ಲೀ ಗೆ 30ಲೀ ನೀರನ್ನು ಬೆರೆಸಿ ಮಣ್ಣಿಗೆ ಬೆರೆಸುವುದರಿಂದ ಮಣ್ಣಿನಲ್ಲಿ ಫಲವತ್ತತೆ ಹೆಚ್ಚಿಸಲು ಸಾಧ್ಯ.
ಜೈವಿಕ ಕೀಟನಾಶಕ :
ಹಸುಗಳು ತಿನ್ನದ , ಬಿಳಿ ದ್ರಾವಣ ಬರುವ 5 ಜಾತಿಯ ಗಿಡದ ಎಲೆಗಳು ಈ ಕೀಟನಾಶಕ ತಯಾರಿಕೆಗೆ ಸೂಕ್ತವಾಗಿರುತ್ತದೆ, ಎಕ್ಕೆಗಿಡ, ಸೀತಾಫಲ, ದತ್ತೂರ, ಪಪ್ಪಾಯ,ಆಡುಸೋಗೆ, ಸಂದುಬಳ್ಳಿ ಮುಂತಾದ ಎಲೆಗಳು ಸೂಕ್ತವಾಗಿದ್ದು,ಈ ಎಲೆಗಳ ತಲಾ 2 ಕೆಜಿ ಸೊಪ್ಪನ್ನು , ನುಣ್ಣಗೆ ಅರೆದು , 10 ಲೀ ಗೋ ಮೂತ್ರವನ್ನು ಮಿಶ್ರಣ ಮಾಡಿ, 15 ದಿನಗಳ ಕಾಲ ಡ್ರಮ್ ನಲ್ಲಿ ಇಡಬೇಕು, ನಂತರ ಈ ಮಿಶ್ರಣದ 1 ಲೀ ಗೆ 30 ಲೀ ನೀರನ್ನು ಬೆರೆಸಿ, ಗಿಡಗಳ ಬೇರಿಗೆ ಹಾಗೂ ಎಲೆಗಳಿಗೆ ಸಿಂಪಡಿಸುವುದರಿಂದ ಗಿಡಗಳಿಗೆ ಯಾವುದೇ ಕೀಟಭಾದೆ ಇರುವುದಿಲ್ಲ.
ಈ ಉತ್ಪನ್ನಗಳು ಮಾತ್ರವಲ್ಲದೇ ಸಾವಯವ ಗೊಬ್ಬರ ಮತ್ತಿತರ ಉತ್ಪನ್ನಗಳ ತಯಾರಿ ಕೂಡಾ ಈ ಸ್ವಸಹಾಯ ಸಂಘದ ಸದಸ್ಯರು ಮಾಡುತ್ತಿದ್ದು, ಪ್ರಾಯೋಗಿಕವಾಗಿ ರೈತ ಸೇವಾ ಕೇಂದ್ರದ ಮೇಲ್ಛಾವಣಿಯಲ್ಲಿ ತಾರಸಿ ತೋಟದ ನಿರ್ಮಾಣ ಮಾಡುತ್ತಿದ್ದು, ಈಗಾಗಲೇ ದಿನ ಬಳಕೆಯ ತರಕಾರಿಗಳ ಬೆಳವಣಿಗೆ ಈ ತೋಟದಲ್ಲಿ ಆಗಿದೆ.
ಇಲ್ಲಿ ತಯಾರಿಸುವ ಉತ್ಪನ್ನಗಳು ಅತ್ಯಂತ ಕಡಿಮೆ ದರ ( ಲೀಟರ್ ಗೆ 20 ರೂ ಮಾತ್ರ) ದಲ್ಲಿದ್ದು, ಅದರಲ್ಲಿಯೂ ಕೆಲ ಉತ್ಪನ್ನಗಳನ್ನು ರೈತರಿಗೆ ರಿಯಾಯತಿ ದರದಲ್ಲಿ ಮಾರಾಟ ಮಾಡುತ್ತಿದ್ದು, ಯಾವುದೇ ಪ್ರಚಾರವಿಲ್ಲದಿದ್ದರೂ ಸಹ ಈಗಾಗಲೇ 1000 ಕ್ಕೂ ಅಧಿಕ ಮಂದಿ ಇಲ್ಲಿನ ಉತ್ಪನ್ನಗಳನ್ನು ಖರೀದಿಸಿದ್ದು, ಇವುಗಳ ಸಫಲತೆಯ ಸುದ್ದಿಯು ಕುರಿತು ಬಾಯಿಯಿಂದ ಬಾಯಿಗೆ ಹರಡಿದ್ದು, ಉಡುಪಿ ನಗರ ಪ್ರದೇಶದ ಜನತೆ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸುತ್ತಿದ್ದಾರೆ.
ಸ್ವಸಹಾಯ ಗುಂಪಿನ ಸದಸ್ಯರಾದ ವನಿತಾ ಬೋಳಾ, ಸುಲೋಚನಾ, ಜ್ಯೋತಿ, ಅಭಿದಾ ಭಾನು ಮತ್ತು ಚಂದ ಅಂಚನ್ ಅವರು ಉತ್ಪನ್ನಗಳ ತಯಾರಿ ಹಾಗೂ ಮಾರಾಟದಲ್ಲಿ ತೊಡಗಿದ್ದು, ಸ್ವ ಉದ್ಯೋಗದೊಂದಿಗೆ ಆರ್ಥಿಕ ಲಾಭ ಗಳಿಸುತ್ತಿದ್ದಾರೆ.
ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಸ್ವಚ್ಛ ಉಡುಪಿ ಮಿಷನ್ ಕಾರ್ಯಕ್ರಮದಲ್ಲಿ ಯಾವುದೇ ತ್ಯಾಜ್ಯವನ್ನು ಸಂಪನ್ಮೂಲವಾಗಿ ಬಳಸಬಹುದು ಎನ್ನುವುದಕ್ಕೆ ಈ ಘನ ಮತ್ತು ದ್ರವ ಸಂಪನ್ಮೂಲ ಉತ್ಪನ್ನಗಳ ಮಾರಾಟ ಮಳಿಗೆ ಸಾಕ್ಷಿಯಾಗಿದೆ, ತ್ಯಾಜ್ಯ ನಿರ್ಮೂಲನೆಯ ಜೊತೆಯಲ್ಲಿ ಉದ್ಯೋಗ ಸೃಷ್ಟಿಯೂ ಇಲ್ಲಿ ನಡೆಯುತ್ತಿದೆ.
ಈ ಘನ ಮತ್ತು ದ್ರವ ಸಂಪನ್ಮೂಲ ಉತ್ಪನ್ನಗಳ ಖರೀದಿ ಹಾಗೂ ಮಾಹಿತಿಗಾಗಿ ಉಡುಪಿ ದೊಡ್ಡಣಗುಡ್ಡೆಯಲ್ಲಿನ ರೈತ ಸೇವಾ ಕೆಂಧ್ರ (ಪುಷ್ಪ ಹರಾಜು ಕೇಂದ್ರ) ವನ್ನು ಹಾಗೂ ಸ್ವ ಸಹಾಯ ಸಂಘದ ಸದಸ್ಯೆ ವನೀತಾ ಅವರ ಮೊ.ಸಂ. 9901914469 ನ್ನು ಸಂಪರ್ಕಿಸಬಹುದಾಗಿದೆ.
You must be logged in to post a comment Login