Connect with us

    DAKSHINA KANNADA

    ಪುತ್ತೂರಿನ ಗಾಂಧಿಕಟ್ಟೆಗೆ ಬಂದಿದೆ ಸಂಚಕಾರ:ಉರುಳಿಸಲು ನಡೆಯುತ್ತಿದೆ ಕುತಂತ್ರ.

    ಪುತ್ತೂರು, ಆಗಸ್ಟ್22: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರನ್ನು ರಾಜ್ಯ ಮತ್ತು ದೇಶದಲ್ಲಿ ಗುರುತಿಸುವಂತೆ ಮಾಡಿರುವುದು ಇದೇ ಗಾಂಧಿಕಟ್ಟೆಯಾಗಿದೆ.  ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಸರಕಾರಿ ಬಸ್ ನಿಲ್ದಾಣವಿರುವ ವಾಣಿಜ್ಯ ಕಟ್ಟಡಕ್ಕೆ ಈ ಗಾಂಧಿಕಟ್ಟೆ ಹಾಗೂ ಅದರ ಪಕ್ಕದಲ್ಲೇ ಇರುವ ಅಶ್ವಥ ಮರ ಅಡ್ಡವಾಗುತ್ತಿದೆ ಎನ್ನುವ ಒಂದೇ ಕಾರಣಕ್ಕೆ ತೆರೆಮರೆಯಲ್ಲಿ ಎರಡನ್ನೂ ಕೆಡವಲು ಪ್ರಯತ್ನಗಳು ಸಾಗುತ್ತಿದೆ. ಗಾಂಧಿಕಟ್ಟೆ ಹಾಗೂ ಅಶ್ವಥ ಮರದ ಕಟ್ಟೆಯ ಸುತ್ತವಿರುವ ಮಣ್ಣನ್ನು ಕೊರೆಯುವ ಮೂಲಕ ಅಪಾಯಕಾರಿ ಮರ ಎನ್ನುವ ಸಬೂಬು ನೀಡಿ ತೆರವುಗೊಳಿಸುವ ಚಾಲಾಕಿತನ ವಾಣಿಜ್ಯ ಕಟ್ಟಡದ ಮಾಲಿಕರಿಂದ ಹಾಗೂ ಕೆಲವು ಜನಪ್ರತಿನಿಧಿಗಳಿಂದ ನಡೆಯುತ್ತಿದೆ.ಅಂದು ರಾಷ್ಟ್ರದಾದ್ಯಂತ ಸ್ವಾತಂತ್ರ್ಯದ ಕಹಳೆ ಮೊಳಗುತ್ತಿದ್ದ ಸಂದರ್ಭದಲ್ಲಿ ಪುತ್ತೂರಿನಲ್ಲೂ ಆ ಕಿಚ್ಚನ್ನು ಹಚ್ಚಲು ದೂರದಿಂದ ಬಂದ ಮಹಾತ್ಮಾ ಗಾಂಧಿ ಕುಳಿತ ಕಟ್ಟೆಯಿದು. 1934 ರಲ್ಲಿ ಗಾಂಧೀಜಿ ಮೊದಲ ಬಾರಿಗೆ ಪುತ್ತೂರಿಗೆ ಆಗಮಿಸಿ ಇದೇ ಕಟ್ಟೆಯಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಸ್ವಾತಂತ್ರ್ಯದ ಭಾಷಣ ಮಾಡಿದ್ದರು, ಹಾಗೂ ಇಲ್ಲೇ ಧ್ಯಾನವನ್ನೂ ಮಾಡಿದ್ದರು. ಗಾಂಧೀಜಿಯವರು ಕುಳಿತ ಈ ಸ್ಥಳದಲ್ಲಿ ಕಟ್ಟೆಯನ್ನು ಕಟ್ಟಿ ಅದಕ್ಕೆ ಗಾಂಧೀಕಟ್ಟೆ ಎನ್ನುವ ಹೆಸರನ್ನೂ ಇಡಲಾಯಿತು. ಗಾಂಧೀಕಟ್ಟೆ ಕಟ್ಟುವ ಸಂದರ್ಭದಲ್ಲಿ ನೆನಪಿಗಾಗಿ ಕಟ್ಟೆಯ ಪಕ್ಕದಲ್ಲೇ ಒಂದು ಅಶ್ವಥ ಮರವನ್ನೂ ನೆಡಲಾಗಿತ್ತು. ಆದರೆ ಆ ಆಶ್ವಥ ಮರ ಸ್ವಲ್ಪ ಸಮಯದ ಬಳಿಕ ಸತ್ತಾಗ, ಅದರ ಸ್ಥಳದಲ್ಲಿ ಇನ್ನೊಂದು ಅಶ್ವಥ ಮರವನ್ನು ನೆಡಲಾಯಿತು. ಅಂದು ನೆಟ್ಟ ಮರ ಇಂದು ಬೃಹದಾಕಾರವಾಗಿ ಬೆಳೆದಿದ್ದು, ಇದೀಗ ಇದೇ ಪರಿಸರದಲ್ಲಿ ನೂತನವಾಗಿ ನಿರ್ಮಾಣಗೊಂಡ ಸರಕಾರಿ ಬಸ್ ನಿಲ್ದಾಣವಿರುವ ವಾಣಿಜ್ಯ ಕಟ್ಟಡಕ್ಕೆ ಈ ಅಶ್ವಥ ಮರ ಹಾಗೂ ಗಾಂಧಿಕಟ್ಟೆ ಅಡ್ಡವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಈ ಎರಡನ್ನೂ ಉಪಾಯವಾಗಿ ಸರಿಸುವ ಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿದೆ. ಇದೇ ಕಾರಣಕ್ಕಾಗಿ ಗಾಂಧಿಕಟ್ಟೆ ಹಾಗೂ ಅಶ್ವಥ ಮರದ ಕಟ್ಟೆಯ ಸುತ್ತಮುತ್ತಲ ಮಣ್ಣನ್ನು ಉಪಾಯವಾಗಿ ಸರಿಸಿ ಎರಡೂ ಕಟ್ಟೆಗಳೂ ಸಾರ್ವಜನಿಕರಿಗೆ ಅಪಾಯಕಾರಿಯಾಗಿದೆ ಎನ್ನುವುದನ್ನು ಬಿಂಬಿಸಿ ತೆರವುಗೊಳಿಸುವ ಕುತಂತ್ರ ನಡೆಯುತ್ತಿದೆ. ಈ ಎರಡೂ ಕಟ್ಟೆಯನ್ನು ದುರಸ್ಥಿಪಡಿಸುವ ಕೆಲಸವನ್ನೂ ಮಾಡದೆ ಬೀಳುವುದಕ್ಕೆ ಕಾಯುತ್ತಿರುವ ಚಾಲಾಕಿತನವೂ ಇಲ್ಲಿ ಕಾಣುತ್ತಿದೆ.

    ಅಲ್ಲದೆ ಅಶ್ವಥ ಮರವನ್ನು ಕಡಿಯುವ ಪ್ರಯತ್ನವೂ ನಡೆಯುತ್ತಿದ್ದು, ಒಂದು ವೇಳೆ ಈ ಮರವನ್ನು ಕಡಿದ್ದಲ್ಲಿ ಈ ಮರವನ್ನೇ ಆಶ್ರಯಿಸಿದ ನೂರಾರು ಪಕ್ಷಿ ಸಂಕುಲಗಳು ಅಳಿವಿನ ಅಂಚಿಗೆ ತಲುಪುವ ಸಾಧ್ಯತೆಯಿದೆ. ಅತ್ಯಂತ ವಿರಳ ಪ್ರವರ್ಗಕ್ಕೆ ಸೇರಿದ ಕೊಕ್ಕರೆ, ಕಡಲು ಕಾಗೆ ಹೀಗೆ ಹಲವು ಪ್ರಕಾರದ ಪಕ್ಷಿಗಳು ಈ ಮರದಲ್ಲಿದೆ. ವಾಣಿಜ್ಯ ಸಂಕೀರ್ಣದಲ್ಲಿರುವ ಅಂಗಡಿಗಳಿಗೆ ಅಡ್ಡವಾಗುತ್ತಿದೆ ಎನ್ನುವ ಕಾರಣಕ್ಕಾಗಿ ಆರ್ಥಿಕ ಲಾಭದ ಮುಖವಾಡದ ಕೆಲವು ಹೋರಾಟಗಾರರು ಇದೀಗ ಮರವನ್ನು ಕಡಿಯಬೇಕು ಎನ್ನುವ ಅಭಿಯಾನವನ್ನೂ ಆರಂಭಿಸಿದ್ದಾರೆ. ಶೀತ ಬಂದಾಗ ಮೂಗನ್ನೇ ಮುರಿಯಬೇಕು ಎನ್ನುವ ವಾದ ಮಾಡುವ ಈ ಮಂದಿ ಮೊದಲು ಅಶ್ವಥ ಮರ ಹಾಗೂ ಗಾಂಧಿಕಟ್ಟೆಯ ಅಡಿಪಾಯವನ್ನು ಸುಭದ್ರಗೊಳಿಸುವ ಕಾರ್ಯ ನಡೆಸಬೇಕಿದೆ. ಪರಿಸರಕ್ಕೆ ಹಾನಿಯಾಗಿರುವ ಇಂಗಾಲದ ಡೈ ಆಕ್ಸೈಡನ್ನು ತನ್ನೊಳಗೆ ಹೀರಿ ಆಮ್ಲಜನಕವನ್ನು ಬಿಡುಗಡೆ ಮಾಡುವ ಅಪರೂಪದ ಅಶ್ವಥ ಮರವು ನಗರ ಪ್ರದೇಶದಲ್ಲಿರುವುದು ಈ ಭಾಗದ ಜನರಿಗೆ ಆರೋಗ್ಯಕ್ಕೂ ಉತ್ತಮವಾಗಿದೆ. ಯಾವುದೋ ಎರಡು ಅಂಗಡಿಗಳಿಗೆ ಅಡ್ಡವಾಗಿದೆ ಎನ್ನುವ ಕಾರಣಕ್ಕೆ ಬೃಹದಾಕಾರವಾಗಿ ಬೆಳೆದಿರುವ ಮರವನ್ನು ಕಡಿಯುವುದು ಹಾಗೂ ಆ ಮರವನ್ನೇ ಆಶ್ರಯಿಸಿ ಬದುಕುತ್ತಿರುವ ನೂರಾರು ಪಕ್ಷಿಗಳಿಗೆ ಹಾನಿಯುಂಟುಮಾಡುವ ಮೊದಲು ಸಂಬಂಧಪಟ್ಟವರು, ಸ್ಥಳೀಯ ಜನಪ್ರತನಿಧಿಗಳು, ಪರಿಸರವಾದಿಗಳು ಈ ವಿಚಾರವಾಗಿ ಚಿಂತನೆ ನಡೆಸಬೇಕಿದೆ.

    Share Information
    Advertisement
    Click to comment

    You must be logged in to post a comment Login

    Leave a Reply