ಉಡುಪಿ, ಆಗಸ್ಟ್ 21: ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ ಅವರ ಪತ್ನಿ ಪದ್ಮಪ್ರಿಯಾ ಆತ್ಮಹತ್ಯೆ ಪ್ರಕರಣದ ಆರೋಪಿ ಅತುಲ್ ರ ವಿರುದ್ಧ ಪ್ರಚೋದನೆ ಮತ್ತು ವ್ಯಭಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಅನಗತ್ಯ ಎಂದು ತಿಳಿಸಿರುವ ಸುಪ್ರೀಂಕೋರ್ಟ್ ಹೇಳಿದೆ. ವಂಚನೆ ಮತ್ತು ಫೋರ್ಜರಿ ಪ್ರಕರಣದ ಪ್ರಕರಣದ ವಿಚಾರಣೆ ತೀವ್ರಗೊಳಿಸುವ೦ತೆ ಅಧೀನ ನ್ಯಾಯಾಲಯಕ್ಕೆ ಅದು ಸೂಚಿಸಿದೆ 2008 ಜೂನ್ 11 ರಂದು ಪದ್ಮಪ್ರಿಯ ಅವರನ್ನು ಅತುಲ್ ರಾವ್ ಅಪಹರಿಸಿದ್ದರು ಎಂದು ದೂರಿ ಪತಿ ರಘುಪತಿ ಭಟ್ ಅವರ ತಾಯಿ ಸರಸ್ವತಿ ಅವರು ಉಡುಪಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು .ಆದರೆ ಪದ್ಮಪ್ರಿಯ ಅವರು ನವದೆಹಲಿಯಲ್ಲಿ ಮನೆಯೊಂದರಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪ್ರಕರಣದ ಕುರಿತು ಸಮಗ್ರ ತನಿಖೆಗೆ ಸೂಚಿಸಿ 2014 ಸೆಪ್ಟೆಂಬರ್ 16 ರಂದು ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನಿಸಿ ರಾವ್ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು 2008 ರಿಂದ ಬಾಕಿ ಇರುವ ವಂಚನೆ ಮತ್ತು ಫೋರ್ಜರಿ ಪ್ರಕರಣದ ಕುರಿತು ಆರು ತಿಂಗಳಲ್ಲಿ ವಿಚಾರಣೆ ಪೂರ್ಣಗೊಳಿಸುವಂತೆ ಅಧೀನ ನ್ಯಾಯಾಲಯಕ್ಕೆ ಸೂಚಿಸಿತು. ಅಲ್ಲದೇ ಆತ್ಮಹತ್ಯೆಗೆ ಪ್ರಚೋದನೆ ಮತ್ತು ವ್ಯಭಿಚಾರ ಆರೋಪ ಕುರಿತು ಹೆಚ್ಚಿನ ತನಿಖೆಗೆ ನಿರ್ದೇಶಿಸುವ ಅಗತ್ಯವಿಲ್ಲ ಎಂದು ಅಧೀನ ನ್ಯಾಯಾಲಯ ನೀಡಿರುವ ವಿವೇಚನೆ ಆದೇಶಕ್ಕೆ ಸಂಬಂಧಿಸಿದಂತೆ ಅನಗತ್ಯವಾಗಿ ಮಧ್ಯಪ್ರವೇಶಿಸಿರುವ ಹೈಕೋರ್ಟ್ ತಪ್ಪು ಎಸಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು .