ಮಂಗಳೂರು,ಜುಲೈ 19 : ರಾಜ್ಯದಲ್ಲಿ ಹತ್ಯೆಗೀಡಾದ ಸಂಘಪರಿವಾರ ಮತ್ತು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರ ಹೆಸರಿನ ಪಟ್ಟಿಯನ್ನು ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರ ಗೃಹ ಸಚಿವ ರಾಜ್‌ನಾಥ್‌ ಸಿಂಗ್‌ ಅವರಿಗೆ ನೀಡಿದ್ದು, ಈ ಪಟ್ಟಿಯಲ್ಲಿ ಜೀವಂತವಿರುವ ವ್ಯಕ್ತಿ ಮೃತಪಟ್ಟಿರುವುದಾಗಿ ಉಲ್ಲೇಖವಾಗಿದೆ. ಇದು ಸಂಸದೆ ಶೋಭಅ ಕರಂದ್ಲಾಜೆ ಅವರ ಜೊತೆ ಬಿಜೆಪಿ ಪಕ್ಷವನ್ನು ಮುಜುಗರಕ್ಕೀಡಾಗುವಂತೆ ಮಾಡಿದೆ.

2015 ಸೆಪ್ಟಂಬರ್‌ ನಲ್ಲಿ ಮೂಡಬಿದಿರೆಯ ಹಂಡೇಲುವಿನಲ್ಲಿ ಅಶೋಕ್‌ ಪೂಜಾರಿ ಎಂಬ ಸಂಘಪರಿವಾರದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ ನಡೆದು, ಆಸ್ಪತ್ರೆಗೆ ದಾಖಲಾಗಿದ್ದು ಅಶೋಕ್‌ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಅಶೋಕ್‌ ಪೂಜಾರಿ ಅವರ ಹೆಸರನ್ನೆ ಪತ್ರದ ಮೊದಲ ಸಾಲಿನಲ್ಲಿ ಉಲ್ಲೇಖೀಸಲಾಗಿದೆ.


ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನಡೆದ ಸಂಘಪರಿವಾರ ಹಾಗೂ ಬಿಜೆಪಿಯ 23 ಕಾರ್ಯಕರ್ತರ ಹತ್ಯೆಗಳ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು ಮತ್ತು ಆರ ಎಸ್ ಎಸ್ ಕಾರ್ಯಕರ್ತ ಶರತ್‌ ಮಡಿವಾಳ ಹತ್ಯೆ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ ನೀಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಗೆ ಪತ್ರ ಮುಖೇನ ಲಿಖಿತ ಮನವಿ ಮಾಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ತಾನು ನೀಡಿದ ಪಟ್ಟಿಯಲ್ಲಿ ಗೊಂದಲವಾಗಿದು ಹೌದು. ಶೀಘ್ರದಲ್ಲೇ ಹಲ್ಲೆಗೊಳಗಾದ ಹೆಸರುಗಳನ್ನು ಸೇರಿಸಿ ಮತ್ತೊಂದು ಪತ್ರವನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಸುವುದಾಗಿ ತಿಳಿಸಿದ್ದಾರೆ.