ಮಂಗಳೂರು,ಜುಲೈ.30 : ಸ್ವಚ್ಛತಾ ಕಾರ್ಯಗಳ ಅನುಷ್ಠಾನದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ 5 ಗ್ರಾಮ ಪಂಚಾಯತ್‍ಗಳಿಗೆ ಜಿಲ್ಲಾ ಪಂಚಾಯತ್ ನೋಟಿಸ್ ಜಾರಿ ಮಾಡಿದೆ. ಸ್ವಚ್ಛತಾ ಕಾರ್ಯಗಳ ಅನುಷ್ಠಾನದಲ್ಲಿ ತೀವ್ರ ನಿರ್ಲಕ್ಷ್ಯ ವಹಿಸಿರುವ ಕಾರಣ ನಿಮ್ಮ ಗ್ರಾಮ ಪಂಚಾಯತ್ ಗಳನ್ನು ವಿಸರ್ಜಿಸಲು ಸರಕಾರಕ್ಕೆ ಏಕೆ ಶಿಫಾರಸು ಮಾಡಬಾರದು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನೋಟೀಸ್ ಜಾರಿ ಮಾಡಿದ್ದಾರೆ.
ಮಂಗಳೂರು ತಾಲೂಕಿನ ತಲಪಾಡಿ, ಸೋಮೇಶ್ವರ, ಬೆಳ್ಮ, ಗಂಜೀಮಠ ಹಾಗೂ ಬಂಟ್ವಾಳ ತಾಲೂಕಿನ ಪುದು ನೋಟೀಸ್ ಜಾರಿಯಾದ ಗ್ರಾಮ ಪಂಚಾಯತ್ ಗಳು. ಸಂಪೂರ್ಣ ಸ್ವಚ್ಛತಾ ಆಂದೋಲನದಡಿ ನಿರ್ಮಲ ಗ್ರಾಮ ಪುರಸ್ಕಾರ ಪಡೆದು ಹಾಗೂ ಸ್ವಚ್ಛ ಭಾರತ ಮಿಷನ್ ಕಾರ್ಯಕ್ರಮದಡಿ ಬಯಲು ಬಹಿರ್ದೆಸೆ ಮುಕ್ತ ಎಂದು ಘೋಷಿಸಲ್ಪಟ್ಟ ಗ್ರಾಮ ಪಂಚಾಯತ್‍ಗಳಲ್ಲಿ ಶುಚಿತ್ವ ಕಾಪಾಡಲು ಸೂಚಿಸಲಾಗಿತ್ತು. ಗ್ರಾ.ಪಂ.ಗಳ ವ್ಯಾಪ್ತಿಯಲ್ಲಿ ತ್ಯಾಜ್ಯ ವಸ್ತುಗಳನ್ನು ಪರಿಸರಕ್ಕೆ ತೊಂದರೆಯಾಗದಂತೆ ವಿಲೇವಾರಿ ಮಾಡಲು ಹಾಗೂ ಹೆದ್ದಾರಿಗಳ ಇಕ್ಕೆಲಗಳಲ್ಲೂ ತ್ಯಾಜ್ಯಗಳನ್ನು ತಂದು ಸುರಿಯುವುದನ್ನು ನಿಯಂತ್ರಿಸಲು ಕಟ್ಟುನಿಟಿನ ಕ್ರಮ ಕೈಗೊಳ್ಳಲು ನಿರ್ದೇಶಿಸಲಾಗಿತ್ತು.
ಆದರೆ ಈ ಎಲ್ಲಾ ನಿರ್ದೇಶನಗಳಿದ್ದರೂ, ಮಂಗಳೂರು ತಾಲೂಕಿನ ತಲಪಾಡಿ, ಸೋಮೇಶ್ವರ, ಬೆಳ್ಮ, ಗಂಜೀಮಠ ಹಾಗೂ ಬಂಟ್ವಾಳ ತಾಲೂಕಿನ ಪುದು ಗ್ರಾಮ ಪಂಚಾಯತ್‍ಗಳ ವ್ಯಾಫ್ತಿಯಲ್ಲಿ ತ್ಯಾಜ್ಯವಸ್ತುಗಳು ರಸ್ತೆಬದಿ ರಾಶಿ ರಾಶಿಯಾಗಿ ಬಿದ್ದಿರುವುದು ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಕರ್ತವ್ಯಲೋಪವೆಸಗಿರುವ ಈ ಗ್ರಾ.ಪಂ.ಗಳ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ನೋಟೀಸ್ ಜಾರಿ ಮಾಡಿದ್ದಾರೆ.
ಸಂಬಂಧಪಟ್ಟ ಗ್ರಾಮ ಪಂಚಾಯತ್‍ಗಳನ್ನು ವಿಸರ್ಜಿಸಲು ಯಾಕೆ ಶಿಫಾರಸು ಮಾಡಬಾರದು ಎಂದು ನೋಟೀಸಿನಲ್ಲಿ ವಿವರಣೆ ಕೇಳಲಾಗಿದೆ. 7 ದಿನಗಳೊಳಗೆ ನೋಟೀಸಿಗೆ ಉತ್ತರಿಸಲು ಪಿಡಿಓಗಳಿಗೆ ಸೂಚಿಸಲಾಗಿದ್ದು, ಇದಕ್ಕೆ ತಪ್ಪಿದ್ದಲ್ಲಿ ಪಿಡಿಓಗಳ ಮೇಲೆ ಶಿಸ್ತು ಕ್ರಮ ಜರುಗಿಸಿ, ಗ್ರಾಮ ಪಂಚಾಯತನ್ನು ವಿಸರ್ಜಿಸಲು ಸರಕಾರಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ.

 

Facebook Comments

comments