Connect with us

  DAKSHINA KANNADA

  ಧರ್ಮಾಧಿಕಾರಿ ಹೆಗ್ಗಡೆಯವರ ಪಟ್ಟಾಭಿಷೇಕಕ್ಕೆ 50 ವರ್ಷಗಳ ಸಂಭ್ರಮ

  ಧರ್ಮಾಧಿಕಾರಿ ಹೆಗ್ಗಡೆಯವರ ಪಟ್ಟಾಭಿಷೇಕಕ್ಕೆ 50 ವರ್ಷಗಳ ಸಂಭ್ರಮ

  ಪುತ್ತೂರು, ಅಕ್ಟೋಬರ್ 15 : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 50 ವರ್ಷಗಳ ಸಾರ್ಥಕ ಸೇವೆಯ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಸಂಭ್ರಮ. ಅಕ್ಟೋಬರ್ 24ರಂದು ಸಂಜೆ ಶ್ರೀ ಕ್ಷೇತ್ರದ ಅಮೃತವರ್ಷಿಣಿ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಮೈಸೂರು ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಧ್ಯಕ್ಷತೆ ವಹಿಸುವರು.

  ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಮತ್ತು ಶಾಸಕ ಕೆ.ವಸಂತ ಬಂಗೇರ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಸಾಹಿತಿ ಡಾ. ಗುರುರಾಜ ಕರ್ಜಗಿ ಅಭಿನಂದನಾ ಭಾಷಣ ಮಾಡುವರು.

  ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಪರಿಚಯ :

  1948 ನವೆಂಬರ್ 25ರಂದು ಅಂದಿನ ಧರ್ಮಾಧಿಕಾರಿಯಾಗಿದ್ದ ಕೀರ್ತಿಶೇಷ ರತ್ನವರ್ಮ ಹೆಗ್ಗಡೆ ಮತ್ತು ರತ್ನಮ್ಮ ದಂಪತಿಯ ಹಿರಿಯ ಮಗನಾಗಿ ವೀರೇಂದ್ರ ಕುಮಾರ್ ಜನಿಸಿದರು.

  ಬಂಟ್ವಾಳದ ಬೋರ್ಡ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಅವರು ಉಜಿರೆಯಲ್ಲಿ ಪ್ರೌಢ ಶಿಕ್ಷಣ, ಸಿದ್ಧವನ ಗುರುಕುಲದಲ್ಲಿ ವಿದ್ಯಾಭ್ಯಾಸ, ಬೆಂಗಳೂರಿನ ಶೇಷಾದ್ರಿಪುರಂ ಪ್ರೌಢಶಾಲೆ ಸೈಂಟ್ ಜೋಸೆಫ್ ಶಾಲೆಯಲ್ಲಿ ಶಿಕ್ಷಣ ಪಡೆದು 1963 ರಲ್ಲಿ ಎಸ್ ಎಸ್ ಎಲ್ ಸಿ ತೇರ್ಗಡೆಯಾದರು.ನಂತರ ಬೆಂಗಳೂರಿನ ಸೈಂಟ್ ಜೋಸೆಫ್ ಜೂನಿಯರ್ ಕಾಲೇಜಿನಲ್ಲಿ ಪಿಯುಸಿ ಬಳಿಕ ಕಲಾ ವಿಭಾಗವನ್ನು ಅವರು ಪ್ರವೇಶಿಸಿ, ನಂತರ ಬಿ.ಎ ಪದವೀಧರರಾದರು.

   


  ಕಾನೂನು ಪದವಿ ಪಡೆಯ ಬೇಕೆಂಬ ಅವರ ಆಸೆಗೆ ಅರ್ಧದಲ್ಲೇ ತೆರೆ ಬಿತ್ತು. ಅವರ ಬದುಕಿನಲ್ಲಿ ಅದು ಮಹತ್ವದ ತಿರುವುವಾಗಿತ್ತು. ಧರ್ಮಾಧಿಕಾರಿ ರತ್ನವರ್ಮ ಹೆಗ್ಗಡೆ ಅವರು ಅನಾರೋಗ್ಯಕ್ಕೆ ಗುರಿಯಾದರು. ಅವರ ಆರೈಕೆಯಲ್ಲಿ ವೀರೇಂದ್ರ ಹೆಗ್ಗಡೆ ತಮ್ಮನ್ನು ತೊಡಗಿಸಿಕೊಂಡರು.

  1968ರಲ್ಲಿ ರತ್ನವರ್ಮ ಹೆಗ್ಗಡೆ ನಿಧನರಾದರು. ಈ ಹಿನ್ನೆಲೆಯಲ್ಲಿ ಅದೇ ವರ್ಷ ಅಕ್ಟೋಬರ್ 24 ರಂದು ವೀರೇಂದ್ರ ಕುಮಾರ್ ಹೆಗ್ಗಡೆ ಧರ್ಮಾಧಿಕಾರಿಯಾಗಿ ನೇಮಕಗೊಂಡರು. ತಮ್ಮ 20ನೇ ವಯಸ್ಸಿನಲ್ಲಿಯೇ ಅವರು ಧರ್ಮಸ್ಥಳ ಶ್ರೀ ಕ್ಷೇತ್ರದ 21 ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾದರು.

   

  ಶ್ರೀ ವಿರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕದ ಕ್ಷಣ

  1968ರ ಅಕ್ಟೋಬರ್ 24ರಂದು ನೆಲ್ಯಾಡಿ ಬೀಡಿನಲ್ಲಿ ಧರ್ಮಸ್ಥಳದ 21ನೇ ಧರ್ಮಾಧಿಕಾರಿಯಾಗಿ ಪಟ್ಟಾಭಿಷಿಕ್ತರಾಗಿ ವೀರೇಂದ್ರ ಹೆಗ್ಗಡೆ ಆದರು. ಕಳೆದ 20 ಮಂದಿ ಧರ್ಮಾಧಿಕಾರಿಗಳಲ್ಲಿ ಅತಿ ಹೆಚ್ಚು ಕಾಲ ಆಡಳಿತ ನಡೆಸಿದ ಹೆಗ್ಗಳಿಕೆ ಮತ್ತು ಅನೇಕ ಹೊಸ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿ ಇವರಿಗಿದೆ. ಹೆಗ್ಗಡೆ ಅವರಿಗೆ ಪದ್ಮವಿಭೂಷಣ ಪುರಸ್ಕಾರ ದೊರಕಿರುವುದು ಧರ್ಮಸ್ಥಳದ ಇತಿಹಾಸದಲ್ಲೇ ಮೊದಲನೆಯದಾಗಿದೆ.

  ಶ್ರೇಷ್ಟ ಮಾನವತಾವಾದಿ:

  ಸ್ವತಃ ಜೈನರಾಗಿದ್ದರೂ ಹಿಂದೂ ದೇವಸ್ಥಾನದ ಧರ್ಮದರ್ಶಿಯಾಗಿ ಕಾರ್ಯ ವಹಿಸುವ ವೀರೇಂದ್ರ ಹೆಗ್ಗಡೆ ಯವರು ಧರ್ಮಸ್ಥಳ ಕ್ಷೇತ್ರಕ್ಕೆ ಧಾರ್ಮಿಕ ಸಹಿಷ್ಣುತೆಯ ಕ್ಷೇತ್ರ ಎಂದು ಹೆಸರು ಬರುವಂತೆ ಮಾಡಿದ್ದಾರೆ. ಧರ್ಮಸ್ಥಳದ ಬೃಹತ್ ಬಾಹುಬಲಿಯ ವಿಗ್ರಹವನ್ನು ಕೆತ್ತಿಸಿ ಸ್ಥಾಪಿಸಿದವರು.

  ರಾಷ್ಟ್ರ ಕವಿ ಕುವೆಂಪು ಅವರೊಂದಿಗೆ ಹೆಗ್ಗಡೆ ದಂಪತಿ

  ಧರ್ಮಸ್ಥಳದಲ್ಲಿ ಪ್ರತಿ ದಿನ ಆಗಮಿಸುವ ದೂರದೂರದ ಭಕ್ತರಿಗೆ ಉಚಿತ ಊಟದ ವ್ಯವಸ್ಥೆಯನ್ನು ಅನೇಕ ದಶಕಗಳಿಂದ ಮಾಡುತ್ತಾ ಬಂದಿದ್ದಾರೆ.. ಪ್ರತಿ ದಿನವೂ ಸುಮಾರು 10000 ಜನರ ಊಟಕ್ಕೆ ವ್ಯವಸ್ಥೆ ಮಾಡಲಾಗಿದೆ.

  ಧರ್ಮಸ್ಥಳ ಮತ್ತು ಇತರ ವಿವಿಧೆಡೆಗಳಲ್ಲಿ ಸಮಾಜ ಸೇವೆ, ಆರೋಗ್ಯ ವಿಕಾಸ, ಶಿಕ್ಷಣ ಮುಂತಾದ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದ್ದಾರೆ. ಉತ್ತರ ಕರ್ನಾಟಕದಲ್ಲಿ ಕ್ಷಾಮ ಬಂದಾಗ ಅಗತ್ಯವಿದ್ದವರಿಗೆ ಪರಿಹಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1974 ರ ಪ್ರವಾಹ ಮತ್ತು ಗದಗ್ ನಲ್ಲಿ 1969 ರಲ್ಲಿ ಪ್ರವಾಹ ಉಂಟಾದಾಗಲೂ ಪುನರ್ನಿರ್ಮಾಣ ಕಾರ್ಯ ಮತ್ತು ಪರಿಹಾರಗಳಿಗಾಗಿ ಸಹಾಯ ಮಾಡಿದರು. ಮಂಗಳೂರಿನಲ್ಲಿ ಇತ್ತೀಚಿನ ಪ್ರವಾಹದ ಸಮಯ ದಲ್ಲೂ ಸುಮಾರು 2 ಲಕ್ಷ ಇಟ್ಟಿಗೆಗಳನ್ನು ಪುನರ್ನಿರ್ಮಾಣಕ್ಕಾಗಿ ಒದಗಿಸಿಕೊಟ್ಟರು.


  ವೀರೇಂದ್ರ ಹೆಗ್ಗಡೆಯವರು ಹಲವಾರು ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. 1982 ರಲ್ಲಿ ಆರಂಭಿಸಲ್ಪಟ್ಟ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಸ್ವ ಕ್ಷೇತ್ರದ ಜಿಲ್ಲೆಯ ಗಡಿ ಮೀರಿ ಸಾವಿರಾರೂ ಕುಟುಂಬಗಳಿಗೆ ಸಹಾಯವನ್ನೊದಗಿಸುತ್ತಿದೆ. 1971 ರಿಂದ ಆರಂಭಗೊಂಡು ಧರ್ಮಸ್ಥಳದಲ್ಲಿ “ಸಾಮೂಹಿಕ ವಿವಾಹ”ಗಳನ್ನು ಆರಂಭಿಸಿದರು. 500 ಕ್ಕೂ ಹೆಚ್ಚು ದಂಪತಿಗಳು ಪ್ರತಿವರ್ಷ ಧರ್ಮಸ್ಥಳದಲ್ಲಿ ವಿವಾಹವಾಗುತ್ತಾರೆ. ಉಚಿತ ವಿದ್ಯಾರ್ಥಿ ನಿಲಯಗಳು, ಹಲವಾರು ಪ್ರಾಥಮಿಕ, ಪ್ರೌಢ ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪಿಸಿದ್ದಾರೆ.
  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು ಡಾ.ಡಿ. ವೀರೇಂದ್ರ ಹೆಗ್ಗಡೆ ಅವರ ನೇತೃತ್ವದಲ್ಲಿ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರವನ್ನು 1991 ರಿಂದ ಧರ್ಮೋತ್ಥಾನ ಟ್ರಸ್ಟ್‌ ಕೈಗೊಳ್ಳುತ್ತಿದೆ.

  ಧರ್ಮೋತ್ಥಾನ ಟ್ರಸ್ಟ್ ನಾಡಿನಾದ್ಯಂತ ದೇವಾಲಯಗಳ ಜೀರ್ಣೋದ್ಧಾರ ಕೈಗೆತ್ತಿಕೊಂಡಿದೆ. ಈಗಾಗಲೇ 200ಕ್ಕೂ ದೇವಸ್ಥಾನಗಳ ಕೆಲಸ ಪೂರ್ಣಗೊಂಡಿದೆ. 25 ಜಿಲ್ಲೆಗಳಲ್ಲಿ ಧರ್ಮೋತ್ಥಾನ ಟ್ರಸ್ಟ್ ಕೆಲಸ ನಡೆಯುತ್ತಿದೆ.

  ವೀರೇಂದ್ರ ಹೆಗ್ಗಡೆಯವರ ಸಾಮಾಜಿಕ, ಧಾರ್ಮಿಕ ಕಾರ್ಯವನ್ನು ಗುರುತಿಸಿ ಸರ್ಕಾರ ಮತ್ತು ಅನೇಕ ಸಂಸ್ಥೆಗಳು ಅವರಿಗೆ ಪ್ರಶಸ್ತಿ-ಗೌರವಗಳನ್ನು ನೀಡಿದೆ.
  2015 ರಲ್ಲಿ ಭಾರತ ಸರಕಾರದಿಂದ ಪದ್ಮವಿಭೂಷಣ ಪ್ರಶಸ್ತಿ.
  1985 ರಲ್ಲಿ ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ
  1993 ರಲ್ಲಿ ಅಂದಿನ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ ರವರಿಂದ “ರಾಜರ್ಷಿ” ಗೌರವ
  ಅನೇಕ ಧಾರ್ಮಿಕ ಮಠಗಳು ಇವರಿಗೆ “ಧರ್ಮರತ್ನ”, “ಧರ್ಮಭೂಷಣ”. “ಅಭಿನವ ಚಾವುಂಡರಾಯ”, “ಪರೋಪಕಾರ ಧುರಂಧರ” ಬಿರುದುಗಳಿಂದ ಗೌರವ.
  1994 ರಲ್ಲಿ ಇಂದಿರಾ ಗಾಂಧಿ ಪ್ರಿಯದರ್ಶಿನಿ ಪ್ರಶಸ್ತಿ.
  ಮಂಗಳೂರು ವಿಶ್ವವಿದ್ಯಾಲಯ ಇವರಿಗೆ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿದೆ.
  2004 ರಲ್ಲಿ ಈ ಟಿವಿ “ವರ್ಷದ ಕನ್ನಡಿಗ” ಗೌರವ ವೀರೇಂದ್ರ ಹೆಗ್ಗಡೆಯವರಿಗೆ ಲಭಿಸಿದೆ.
  2011 ರಲ್ಲಿ ಡಾ| ವೀರೇಂದ್ರ ಹೆಗ್ಗಡೆಯವರಿಗೆ 2009 ನೇ ಸಾಲಿನ ಕರ್ನಾಟಕ ಸರಕಾರ ಕೊಡಮಾಡುವ ರಾಜ್ಯದ ಅತ್ಯುನ್ನತ ಪ್ರಶಸ್ತಿಯಾದ “ಕರ್ನಾಟಕ ರತ್ನ” ನೀಡಿ ಪುರಸ್ಕರಿಸಲಾಗಿದೆ.
  ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ ಸರ್‌ ಎಂ. ವಿಶ್ವೇಶ್ವರಯ್ಯ ಪ್ರಶಸ್ತಿಯನ್ನು ಹೆಗ್ಗಡೆಯವರಿಗೆ ನೀಡುವ ಮೂಲಕ ಗೌರವಿಸಿದೆ.

  ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ 50 ವರ್ಷಗಳ ಸಾರ್ಥಕ ಸೇವೆಯ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ವರ್ಧಂತ್ಯುತ್ಸವವು ಇದೇ 24ರಂದು ನಡೆಯಲಿದೆ.

  ಶ್ರೀ ಕ್ಷೇತ್ರ ಧರ್ಮಸ್ಥಳದ ಸಿಬ್ಬಂದಿ ವರ್ಗ, ಊರಿನ ನಾಗರಿಕರು ಹಾಗೂ ಭಕ್ತಾಭಿಮಾನಿಗಳು ಸರಳ ರೀತಿಯಲ್ಲಿ ಸುವರ್ಣ ಮಹೋತ್ಸವವನ್ನು ಆಚರಿಸಲು ನಿರ್ಧರಿಸಿದ್ದಾರೆ. ಆದರೂ ಪಟ್ಟಾಭಿಷೇಕದ ಸುವರ್ಣ ಮಹೋತ್ಸವ ಅರ್ಥಪೂರ್ಣವಾಗಿರಿಸಲು ಡಿ. ಹರ್ಷೇಂದ್ರ ಕುಮಾರ್ ಅಧ್ಯಕ್ಷತೆಯಲ್ಲಿ ವಿವಿಧ ಸಮಿತಿಗಳನ್ನು ರಚಿಸಿದ್ದು, ಸಿದ್ಧತೆಗಳು ಭರದಿಂದ ಸಾಗಿವೆ.

  Share Information
  Advertisement
  Click to comment

  You must be logged in to post a comment Login

  Leave a Reply