Connect with us

  LATEST NEWS

  ದೇವಮಾನವ ರಾಮ್ ರಹೀಂ ದೋಷಿ, ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು

  ಚಂಡೀಗಢ, ಆಗಸ್ಟ್ 25: ದೇಶಾದ್ಯಂತ ಭಾರೀ ಕುತೂಹಲ ಸೃಷ್ಟಿಸಿರುವ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ದೇರಾ ಸಚ್ಚಾ ಸೌದಾದ ಮುಖ್ಯಸ್ಥ ಹಾಗೂ ಸ್ವಯಂ ಘೋಷಿತ ದೇವಮಾನವ ಗುರ್ಮೀತ್ ರಾಮ್ ರಹೀಂ ಸಿಂಗ್ ದೋಷಿ ಎಂದು ಸಿಬಿಐ ವಿಶೇಷ ನ್ಯಾಯಾಲಯ ಇಂದು ಅಪರಾಹ್ನ ತೀರ್ಪು ನೀಡಿದೆ. ಗುರ್ಮಿತ್ ರಾಮ್ ರಹೀಮ್ ಸಿಂಗ್ ದೋಷಿ ಎಂದು ಪಂಚಕುಲದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ತೀರ್ಪು ನೀಡಿದೆ.
  ಆದರೆ ಮಾನ್ಯ ನ್ಯಾಯಾಲಯ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿಲ್ಲ. ಆಗಸ್ಟ್ 28 ರಂದು ಸಿಬಿಐ ವಿಶೇಷ ನ್ಯಾಯಾಲಯದಲ್ಲಿ ರಾಮ್ ರಹೀಮ್ ಸಿಂಗ್ ರಿಗೆ ಶಿಕ್ಷೆಯ ಪ್ರಮಾಣವನ್ನು ಘೋಷಿಸಲಿದೆ. ಈ ಹಿನ್ನಲೆಯಲ್ಲಿ ಹರ್ಯಾಣ ಮತ್ತು ಪಂಜಾಬ್ ಈ ಎರಡೂ ರಾಜ್ಯಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಎರಡೂ ರಾಜ್ಯಗಳಲ್ಲಿ ಅಕ್ಷರಶಃ ಬಂದ್ ವಾತಾವರಣ ನಿರ್ಮಾಣವಾಗಿದೆ. ರಾಮ್ ರಹೀಮ್ ಸಿಂಗ್ ಅತ್ಯಾಚಾರ ಪ್ರಕರಣದ ತೀರ್ಪಿನ ಪ್ರಭಾವ ರಾಜಸ್ಥಾನಕ್ಕೂ ವ್ಯಾಪಿಸಿದೆ. ರಾಜಸ್ಥಾನದಲ್ಲಿಯೂ 48 ಗಂಟೆಗಳ ಕಾಲ ಅಂತರ್ಜಾಲ ಸೇವೆ ಸ್ಥಗಿತಗೊಳಿಸಲಾಗಿದೆ. ಇಡೀ ರಾಜಸ್ಥಾನದಾದ್ಯಂತ ಸಿಆರ್’ಪಿಸಿ ಸೆಕ್ಷನ್ 144 ಹೇರಲಾಗಿದೆ. ಅಗತ್ಯ ಬಿದ್ದರೆ ಶಸ್ತ್ರಾಸ್ತ್ರ ಬಳಸುವಂತೆ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಹರ್ಯಾಣ ಸರಕಾರಕ್ಕೆ ಸೂಚನೆ ನೀಡಿದೆ. ಪ್ರಚೋದನಕಾರಿ ಹೇಳಿಕೆ ನೀಡುವವರ ವಿರುದ್ಧ ಎಫ್ಐಆರ್ ದಾಖಲಿಸುವಂತೆಯೂ ಕೋರ್ಟ್ ಹೇಳಿದೆ.ಪಂಚಕುಲದಲ್ಲಿ ಭದ್ರತಾ ಮೇಲೆ ಮಿಲಿಟರಿ ಹೆಲಿಕಾಪ್ಟರ್ ಗಳು ನಿಗಾ ಇಟ್ಟಿವೆ. ಇದರ ಜತೆಗೆ ಡ್ರೋನ್ ಗಳ ಮೂಲಕವೂ ಪರಿಸ್ಥಿತಿ ಮೇಲೆ ನಿಗಾ ಇಡಲಾಗಿದೆ.ರಾಮ್ ರಹೀಮ್ ಸಿಂಗ್ ವಾಹನಕ್ಕೆ ಅಭಿಮಾನಿಗಳು ಅಡ್ಡಿಪಡಿಸಿದ ಘಟನೆಯೂ ನಡೆಯಿತು. ನಂತರ ಪೊಲೀಸರು ರಸ್ತೆಯಿಂದ ದೇವಮಾನವನ ಅನುಯಾಯಿಗಳನ್ನು ತೆರವುಗೊಳಿಸಿದರು. ಭದ್ರತೆ ದೃಷ್ಟಿಯಿಂದ ಪಂಜಾಬ್ ಮತ್ತು ಹರ್ಯಾಣ ವ್ಯಾಪ್ತಿಯಲ್ಲಿ 74 ರೈಲುಗಳ ಪ್ರಯಾಣವನ್ನು ರದ್ದುಗೊಳಿಸಲಾಗಿದೆ. ಎರಡೂ ರಾಜ್ಯಗಳಲ್ಲಿ ಮೂರು ದಿನಗಳ ಕಾಲ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಭದ್ರತೆಗಾಗಿ 150 ಅರೆಸೇನಾ ಪಡೆ ತುಕಡಿ, 15 ಸಾವಿರ ಪೊಲೀಸರನ್ನು ಎರಡೂ ರಾಜ್ಯಗಳಿಗೆ ಕರೆಸಿಕೊಳ್ಳಲಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply