ನವದೆಹಲಿ, ಆಗಸ್ಟ್ 22 : ತ್ರಿವಳಿ ತಲಾಖ್ ಗೆ 6 ತಿಂಗಳ ತಡೆಯಾಜ್ಞೆ ಸುಪ್ರೀಂಕೋರ್ಟ್ ನೀಡಿದೆ. ಮತ್ತು ಇದಕ್ಕೆ ಸೂಕ್ತ ಹೊಸ ಕಾನೂನು ಜಾರಿಗೆ ತರುವಂತೆ ಕೇಂದ್ರ ಸರಕಾರಕ್ಕೆ ಅದು ಸೂಚಿಸಿದೆ. ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಪಂಚ ಸದಸ್ಯರ ನ್ಯಾಯಪೀಠ ತ್ರಿವಳಿ ತಲಾಕ್ ಸಿಂಧುತ್ವ ಎತ್ತಿ ಹಿಡಿಯುವ ಮೂಲಕ ಇಂದು ಐತಿಹಾಸಿಕ ತೀರ್ಪು ನೀಡಿತು. ಪ್ರತ್ಯೇಕ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿ ಖೇಹರ್, ಕುರಿಯನ್ ಜೋಸೆಫ್, ರೋಹಿಂಗ್ಟನ್ ಎಫ್. ನಾರಿಮನ್, ಉದಯ ಲಲಿತ್, ಎಸ್. ಅಬ್ದುಲ್ ನಜೀರ್ ನ್ಯಾಯಪೀಠ ಈ ಮಹತ್ವದ ತೀರ್ಪನ್ನು ನೀಡಿದೆ. ಮುಸ್ಲಿಂ ಸಮುದಾಯದಲ್ಲಿ ಪತಿ ತನ್ನ ಪತ್ನಿಗೆ ವಿಚ್ಛೇದನ ನೀಡಲು ಮೂರು ಬಾರಿ ತಲಾಕ್ ಅಂದ್ರೆ ಸಾಕು ಎಂಬ ಅಲಿಖಿತ ಕಾನೂನು ಜಾರಿಯಲ್ಲಿತ್ತು. ಇತ್ತೀಚೆಗೆ ವಾಟ್ಸಾಪ್, ಫೇಸ ಬುಕ್, ಪೋಸ್ಟ್ ಕಾರ್ಡ್ ಮೂಲಕವೂ ತಲಾಕ್ ಹೇಳುವ ಕಾರ್ಯಗಳು ನಡೆದಿವೆ. ಹೀಗಾಗಿ 1400 ವರ್ಷಗಳ ಹಿಂದಿನ ಈ ತ್ರಿವಳಿ ತಲಾಕ್ ಆಚರಣೆ ಆಚರಣೆಯ ವಿರುದ್ಧ ಮುಸ್ಲಿಂ ಮಹಿಳೆಯರು ಸಾಮೂಹಿಕವಾಗಿ ಧ್ವನಿ ಎತ್ತಿ ನ್ಯಾಯಾಲಯದ ಮೊರೆ ಹೋಗಿದ್ದರು. ಹೀಗಾಗಿ ಮಹಿಳೆಯರ ಪ್ರಾಥಮಿಕ ಹಕ್ಕನ್ನು ಉಲ್ಲಂಘಿಸುವ ಮತ್ತು ಕಸಿಯುವ ಈ ಅನಿಷ್ಟ ತಲಾಕ್ ಪದ್ಧತಿಯನ್ನು ತೊಲಗಿಸುವ ನಿಟ್ಟಿನಲ್ಲಿ ಹೊಸ ಕಾನೂನು ತರಬೇಕೆಂದು ಒತ್ತಾಯ ಕೇಳಿ ಬಂದಿತ್ತು. ಕೆಲವು ತಿಂಗಳಿಂದ ಈ ಅರ್ಜಿಗಳ ಕುರಿತು ವಿಚಾರಣೆ ಸುಪ್ರೀಂ ಕೋರ್ಟಿನಲ್ಲಿ ನಡೆದಿದ್ದು, ಇಂದು ಮಹತ್ವದ ತೀರ್ಪು ಹೊರಬಿದ್ದಿದೆ. ಈ ಹಿಂದೆ ತ್ರಿವಳಿ ತಲಾಕ್ ವಿಚಾರದಲ್ಲಿ ಕೋರ್ಟ್ ಮಧ್ಯಪ್ರವೇಶಕ್ಕೆ ಆಕ್ಷೇಪ ಎತ್ತಿದ್ದ ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಇದೊಂದು ಪಾಪದ ಕೃತ್ಯ ಮತ್ತು ಅನಪೇಕ್ಷಿತ. ಕಳೆದ 1400 ವರ್ಷಗಳಿಂದ ಇದು ನಡೆದು ಬಂದಿದೆ ಎಂದು ತಲಾಖ್ ಪರವಾಗಿ ವಾದಿಸಿತ್ತು ಇದೀಗ ತನ್ನ ಹೇಳಿಕೆಯನ್ನು ಬದಲಾಯಿಸಿದ್ದು ನಾವೂ ತಲಾಖ್ ಪರವಾಗಿಲ್ಲ, ತಲಾಕ್ ನೀಡದಂತೆ ಮದುವೆಯ ಸಂದರ್ಭದಲ್ಲಿ ಸಲಹೆ ನೀಡುತ್ತೇವೆ ಮತ್ತು ಈ ಕ್ಷೇತ್ರದ ಸುಧಾರಣೆಗೆ ನಾವು ಶ್ರಮಿಸುತ್ತಿವೆ ಎಂದು ಹೇಳಿದೆ.