Connect with us

  BELTHANGADI

  ಚಿಗುರಿದ ಕನಸು ಸಿನಿಮಾ ನಿರ್ಮಾಣದ ಗ್ರಾಮದಲ್ಲಿ ಕಮರಿದ ಕನಸು

  ಚಿಗುರಿದ ಕನಸು ಸಿನಿಮಾ ನಿರ್ಮಾಣದ ಗ್ರಾಮದಲ್ಲಿ ಕಮರಿದ ಕನಸು

  MLA ಬಂಗೇರರ ಉದ್ಧಟತನ : ಮತ್ತೆ ಮುದುಡಿದ ಸೇತುವೆ ಭಾಗ್ಯ

   

  ಬೆಳ್ತಂಗಡಿ, ಅಕ್ಟೋಬರ್ 16:ಕನ್ನಡದ ಖ್ಯಾತ ಚಲನಚಿತ್ರ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ನಟಿಸಿರುವ ‘ಕಡಲ ತೀರದ ಭಾರ್ಗವ’ ಡಾ. ಶಿವರಾಮ ಕಾರಂತರ ಕಾದಂಬರಿ ಆಧಾರಿತ ಚಿತ್ರ ಚಿಗುರಿದ ಕನಸು ಚಲನಚಿತ್ರದ ಚಿತ್ರೀಕರಣ ನಡೆದ ಗ್ರಾಮ ಇದಾಗಿತ್ತು..!! ಚಿತ್ರಿಕರಣಕ್ಕೆ ಆ ಕಾಲದಲ್ಲಿ ಮರದ ಸೇತುವೆಯೊಂನ್ನು ನಿರ್ಮಾಣ ಮಾಡಲಾಗಿತ್ತು.! ಇದೀಗ ದಶಕಗಳ ನಂತರ ಎರಡು ಗ್ರಾಮಗಳು ಬೆಸೆಯುವ ಸೇತುವೆ ನಿರ್ಮಾಣವಾಗಿದೆ. ಆದರೆ ಅದು ಊಟಕ್ಕಿಲ್ಲದ ಉಪ್ಪಿನಕಾಯಿ.. ಇದು ಯಾಕೆ ಅಂತೀರಾ ? ಈ ಸ್ಟೋರಿ ಓದಿ..

  ಕೊಲ್ಲಿಯಲ್ಲಿ ನಡೆದ ಚಿಗುರಿದ ಕನಸು ಸಿನಿಮಾ

  ಇದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಹಿಂದೂ ಹಾಗೂ ಮುಸ್ಲಿಂ ಧರ್ಮಗಳ ಎರಡು ಧಾರ್ಮಿಕ ಕ್ಷೇತ್ರಗಳ ನಡುವೆ ಹರಿಯುವ ಕೊಲ್ಲಿ ನದಿ ತಟದಲ್ಲಿರುವ ಮಲವಂತಿಕೆ ಹಾಗೂ ಮಿತ್ತಬಾಗಿಲು ಗ್ರಾಮದ ಜನರ ಅತಂತ್ರ ಸ್ಥಿತಿಯ ಕಥೆ.

  ಎರಡು ಗ್ರಾಮಗಳ ಬೆಸೆಯುವ ಕೊಂಡಿ ತೆಪ್ಪ

  ಈ ನದಿಯ ಒಂದು ಭಾಗದಲ್ಲಿ ಹಿಂದೂ ಧಾರ್ಮಿಕ ಕ್ಷೇತ್ರವಾದ ಕೊಲ್ಲಿ ದುರ್ಗಾದೇವಿ ದೇವಸ್ಥಾನವಿದ್ದರೆ, ಇನ್ನೊಂದು ಭಾಗದಲ್ಲಿ ಮುಸ್ಲಿಮರ ಹೆಸರಾಂತ ಧಾರ್ಮಿಕ ಕ್ಷೇತ್ರ ಕಾಜೂರು ಮಸೀದಿಯಿದೆ. ಆದರೆ ಈ ಎರಡು ಕ್ಷೇತ್ರಗಳ ಜೊತೆಗೆ ಇಲ್ಲಿನ ಗ್ರಾಮಗಳನ್ನು ಸಂಪರ್ಕಿಸಲು ಈ ಗ್ರಾಮಗಳ ನಡುವೆ ಹರಿಯುವ ಕೊಲ್ಲಿ ನದಿಗೆ ಸೇತುವೆ ನಿರ್ಮಿಸಬೇಕೆಂಬುದು ಈ ಗ್ರಾಮಸ್ಥರ ಹಲವು ವರ್ಷಗಳ ಬೇಡಿಕೆಯೂ ಆಗಿತ್ತು. ಇದೀಗ ಇಲ್ಲಿ 7 ಕೋಟಿ ರೂಪಾಯಿ ವೆಚ್ಚದ ಸೇತುವೆ ನಿರ್ಮಾಣಗೊಂಡಿದೆ.

  ನೂತನ ಸೇತುವೆ

  ಹಣ, ಅಧಿಕಾರ ಇದ್ದರೆ ಜನರ ತೆರಿಗೆ ಹಣವನ್ನು ಹೇಗಾದರೂ ಪೋಲು ಮಾಡುವ ಸಾಕಷ್ಟು ಅಧಿಕಾರಿಗಳು, ಜನಪ್ರತಿನಿಧಿಗಳು ಇದ್ದಾರೆ ಎಂಬುವುದಕ್ಕೆ ತಾಜಾ ಉದಾಹರಣೆ ಇದಾಗಿದೆ.  ಹೀಗೆ ಜನ ಕಟ್ಟಿದ ಕೋಟ್ಯಾಂತರ ರೂಪಾಯಿ ತೆರಿಗೆ ಹಣವನ್ನು ವ್ಯಯಿಸಿ ಯಾರಿಗೂ ಉಪಯೋಗವಾಗದ ಈ ಸೇತುವೆ ಇದೀಗ ಊಟಕ್ಕಿಲ್ಲದ ಉಪ್ಪಿನ ಕಾಯಿ. ಈ ಹಿಂದೆ ಸೇತುವೆಯಿಲ್ಲದೆ ತೆಪ್ಪದ ಮೂಲಕ ನದಿ ದಾಟುತ್ತಿದ್ದ ಈ ಗ್ರಾಮದ ಜನರು ಇದೀಗ ಸೇತುವೆಯನ್ನೇ ತೆಪ್ಪ ಎಂದು ತಿಳಿದುಕೊಳ್ಳಬೇಕಾದ ಪರಿಸ್ಥಿತಿಯಲ್ಲಿದ್ದಾರೆ.

  ಈ ಊಟಕ್ಕಿಲ್ಲದ ಉಪ್ಪಿನಕಾಯಿ ಬಗ್ಗೆ ಗ್ರಾಮಸ್ಥರು ಏನಾಂತರೆ ?

  ಸೇತುವೆ ನಿರ್ಮಾಣದ ಕಾಮಗಾರಿ ಹಾಗೂ ಸೇತುವೆ ಕಾಮಗಾರಿ ಮುಕ್ತಾಯಗೊಂಡು ಇದೀಗ ಒಂದೂವರೆ ವರ್ಷ ಕಳೆದರೂ, ಸೇತುವೆಗೆ ಸಂಪರ್ಕ ರಸ್ತೆಯ ಯೋಜನೆಯನ್ನೇ ಸಂಬಂಧಪಟ್ಟವರು ಮಾಡಿಲ್ಲ. ಕೃಷಿಭೂಮಿಯನ್ನು ರಸ್ತೆಗಾಗಿ ಬಿಟ್ಟುಕೊಡಲು ಇಲ್ಲಿನ ಜನ ಸಿದ್ಧರಿದ್ದರೂ, ಇಷ್ಟರವರೆಗೂ ಯಾವೊಬ್ಬನೂ ಸರ್ವೆ ಕಾರ್ಯಕ್ಕೂ ಇಲ್ಲಿಗೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯ ನಿವಾಸಿ ಯೂಸುಫ್.

  ಇಷ್ಟು ಹಣ ವ್ಯಯಿಸಿ ನಿರ್ಮಿಸಿದ ಈ ಸೇತುವೆ ಯಾರಿಗೂ ಉಪಯೋಗವಿಲ್ಲದೆ ಅನಾಥವಾಗಿ ನಿಲ್ಲುವಂತಾಗಿದೆ ಎಂದು ಮಲವಂತಿಕೆ ಗ್ರಾಮಪಂಚಾಯತ್ ಅಧ್ಯಕ್ಷ ನಾರಾಯಣ ಪಾಟಾಳಿ ತಮ್ಮ ಹತಾಶೆಯ ಉತ್ತರ ನೀಡುತ್ತಾರೆ.

  7 ಕೋಟಿಯಲ್ಲಿ ನಿರ್ಮಾಣವಾದ ಸೇತುವೆ

  ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ಕಾಮಗಾರಿ ಬಿಡಿ, ರಸ್ತೆಗೆ ಬೇಕಾದ ಖಾಸಗಿ ಜಮೀನುಗಳನ್ನು ಒತ್ತುವರಿ ಮಾಡುವ ಕಾರ್ಯವೂ ನಡೆದಿಲ್ಲ. ಪ್ರಸ್ತುತ ಸೇತುವೆ ನಿರ್ಮಾಣವಾಗಿರುವ ಜಾಗದ ಪಕ್ಕದಲ್ಲೇ ಪಂಚಾಯತ್ ರಸ್ತೆಯುವ ನದಿಯ ತಟದವರೆಗೂ ಸಂಪರ್ಕ ಕಲ್ಪಿಸುವ ಜಾಗವಿದ್ದರೂ, ಈ ಸ್ಥಳವನ್ನು ಬಿಟ್ಟು ಖಾಸಗಿ ಕೃಷಿಭೂಮಿಗಳಿರುವ ಜಾಗದಲ್ಲಿ ಸೇತುವೆ ನಿರ್ಮಾಣ ಮಾಡಿರುವುದು ಹಲವು ಸಂಶಯಗಳಿಗೂ ಎಡೆ ಮಾಡಿಕೊಟ್ಟಿದೆ.

  ಚಿಗುರಿದ ಕನಸು ಕನ್ನಡ ಸಿನೆಮಾ ನಿರ್ಮಾಣದ ಗ್ರಾಮದಲ್ಲಿ ಕಮರಿದ ಕನಸು

  ಕನ್ನಡ ಚಲನಚಿತ್ರ ನಟ ಶಿವರಾಜ್ ಕುಮಾರ್ ನಟಿಸಿರುವ ಚಿಗುರಿದ ಕನಸು ಚಿತ್ರದ ಚಿತ್ರೀಕರಣವು ನಡೆದ ಗ್ರಾಮವೂ ಇದಾಗಿದೆ. ಆ ಚಿತ್ರದಲ್ಲಿ ಚಿತ್ರೀಕರಣಕ್ಕಾಗಿ ರಸ್ತೆಯ ಅತೀ ಹತ್ತಿರದ ಸಂಪರ್ಕವಿರುವ ಕೊಲ್ಲಿ ನದಿಯ ತಟದಲ್ಲಿ ಮರದ ಸೇತುವೆಯೊಂದನ್ನು ನಿರ್ಮಿಸಲಾಗಿತ್ತು.

  ಮಲವಂತಿಕೆ ಹಾಗೂ ಮಿತ್ತಬಾಗಿಲು ಗ್ರಾಮಗಳ ಮಧ್ಯೆ ಇರುವ ಕೊಲ್ಲಿ ನದಿಗೆ ಸೇತುವೆ ಇಲ್ಲದ ಕಾರಣ ಈ ಎರಡೂ ಗ್ರಾಮಗಳ ಜನ ಬಿದಿರಿನ ತೆಪ್ಪದ ಮೂಲಕವೇ ನದಿಯನ್ನು ದಾಟುತ್ತಿದರು.

  ಈ ಜಾಗದಲ್ಲೇ ಸೇತುವೆ ನಿರ್ಮಿಸಬೇಕೆಂಬ ಒತ್ತಾಯವೂ ಗ್ರಾಮಸ್ಥರಲ್ಲಿದ್ದರೂ, ಇದೀಗ ಈ ಜಾಗವನ್ನು ಬಿಟ್ಟು ಯಾವುದೇ ರಸ್ತೆ ಸಂಪರ್ಕವಿಲ್ಲದ ಜಾಗದಲ್ಲಿ ಸೇತುವೆಯನ್ನು ನಿರ್ಮಿಸಲಾಗಿದೆ. ಆದರೆ ರಸ್ತೆಯೇ ಇಲ್ಲದ ಸ್ಥಳದಲ್ಲಿ ಸೇತುವೆ ನಿರ್ಮಿಸಿದರ ಪರಿಣಾಮ ಈ ಭಾಗದ ಜನ ಈ ಸೇತುವೆಯನ್ನೇ ತೆಪ್ಪ ಎಂದು ಕಾಲ್ನಡಿಗೆಯಲ್ಲಿ ದಾಟುವಂತಹ ವ್ಯವಸ್ಥೆಗೆ ಇದೀಗ ಒಗ್ಗಿಕೊಂಡಿದ್ದಾರೆ.

  ಶಾಸಕರ ರಾಜಕೀಯ ದ್ವೇಷ ಹಾಗೂ ಅಧಿಕಾರದ ದರ್ಪಕ್ಕೆ ಬಲಿಯಾಯಿತೇ ? 

  ತನ್ನ ರಾಜಕೀಯ ದ್ವೇಷ ಸಾಧನೆ ಹಾಗೂ ತನ್ನ ಪ್ರತಿಷ್ಟೆಗಾಗಿ ಸ್ಥಳೀಯ ಶಾಸಕರಾದ ವಸಂತ ಬಂಗೇರ ಈ ರೀತಿಯ ಗೊಂದಲ ನಿರ್ಮಿಸುವ ಮೂಲಕ ಊರಿನ ಜನರಿಗೆ ಸೇತುವೆಯಿದ್ದರೂ, ಅದನ್ನು ಉಪಯೋಗಿಸದಂತಹ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ ಎನ್ನುವ ಆರೋಪಗಳೂ ಕೇಳಿ ಬರುತ್ತಿದೆ.

  ಹೆಚ್ಚೆಂದರೆ ಕೇವಲ ಎರಡು ಕೋಟಿ ರೂಪಾಯಿಗಳಲ್ಲಿ ರಸ್ತೆಯ ಜೊತೆಗೆ ಸೇತುವೆಯ ಕಾಮಗಾರಿ ಮುಗಿಯುತ್ತಿದ್ದ ಜಾಗವನ್ನು ಬಿಟ್ಟು, ಇಲ್ಲಿ ರಸ್ತೆ ಸಂಪರ್ಕವೇ ಇಲ್ಲದ ಸ್ಥಳದಲ್ಲಿ ಸೇತುವೆ ನಿರ್ಮಿಸಲಾಗಿದೆ. ಸ್ಥಳೀಯ ಶಾಸಕರ ರಾಜಕೀಯ ದ್ವೇಷ ಹಾಗೂ ಅಧಿಕಾರದ ದರ್ಪಕ್ಕೆ ಇದೀಗ ಜನರ ಕೋಟ್ಯಾಂತರ ರೂಪಾಯಿ ತೆರಿಗೆ ಹಣ ಉಪಯೋಗವಿಲ್ಲದಂತಾಗಿದೆ.

  Share Information
  Advertisement
  Click to comment

  You must be logged in to post a comment Login

  Leave a Reply