Connect with us

KARNATAKA

ಗೌರಿ ಲಂಕೇಶ್‌ ಹತ್ಯೆ ಭೇದಿಸಲು ರೇಖಾ ಚಿತ್ರ ಮೊರೆ ಹೋದ SIT

ಗೌರಿ ಲಂಕೇಶ್‌ ಹತ್ಯೆ ಭೇದಿಸಲು ರೇಖಾ ಚಿತ್ರ ಮೊರೆ ಹೋದ SIT

ಬೆಂಗಳೂರು, ಅಕ್ಟೋಬರ್ 15 : ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ನಡೆದು ತಿಂಗ್ಳು ಕಳೆದಿದೆ. ಆದರೆ ಹಂತಕರ ಸುಳಿವು ಸಿಗಲೇ ಇಲ್ಲ. ಈ ಹಿನ್ನೆಲೆಯಲ್ಲಿ ಇದೀಗ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಬ್ಬರು ಶಂಕಿತ ಹಂತಕರು ಎನ್ನಲಾದ ಮೂರು ರೇಖಾಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣದ ಪತ್ತೆಗಾಗಿ ಸಾರ್ವಜನಿಕರ ಮೊರೆ ಹೋಗಿದೆ.

ಗೌರಿ ಹತ್ಯೆಯನ್ನುಭೇದಿಸಲು ನಾಲ್ಕು ಐಪಿಎಸ್‌ ಅಧಿಕಾರಿಗಳ ನೇತೃತ್ವದಲ್ಲಿ ಸುಮಾರು 150ಕ್ಕೂ ಅಧಿಕ ಮಂದಿಯ ತನಿಖಾ ತಂಡ ಹಗಳಿರುಳು ಶ್ರಮ ಪಟ್ಟಿದೆ ಆದರೆ ಕೊಲೆ ಆರೋಪಿಗಳನ್ನು ಪತ್ತೆ ಹಚ್ಚಲು ವಿಫಲವಾಗಿದೆ.

ಗೌರಿ ಹತ್ಯೆಯಾದ ಸ್ಥಳ, ಪತ್ರಿಕಾ ಕಚೇರಿಯ ಆಸು-ಪಾಸಿನ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಸೆರೆ ಸಿಕ್ಕ ಶಂಕಿತರ ಚಹರೆ, ಸ್ಥಳೀಯರು ಹಾಗೂ ಪ್ರತ್ಯಕ್ಷದರ್ಶಿಗಳು ನೀಡಿದ ಮಾಹಿತಿ ಮೇರೆಗೆ ನುರಿತ ಚಿತ್ರಕಾರರಿಂದ ಸುಮಾರು 25-30ರ ವಯೋಮಾನದ ಇಬ್ಬರು ವ್ಯಕ್ತಿಗಳ ರೇಖಾ ಚಿತ್ರಗಳನ್ನು ಸಿದ್ದಪಡಿಸಲಾಗಿದ್ದು ಅದನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಿದೆ.

ಇದರೊಂದಿಗೆ ಗೌರಿ ಲಂಕೇಶ್‌ ಮನೆಯ ಅಕ್ಕ-ಪಕ್ಕದಲ್ಲಿರುವ ಸಿಸಿಟಿವಿಯ 13 ಸೆಕೆಂಡ್‌ಗಳ ಎರಡು ಪ್ರತ್ಯೇಕ ದೃಶ್ಯಾವಳಿಗಳನ್ನೂ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಒಂದು ದೃಶ್ಯದಲ್ಲಿ ಹೆಲ್ಮೆಟ್‌ ಧರಿಸಿದ ವ್ಯಕ್ತಿಯೊಬ್ಬ ಕೆಂಪು ಬಣ್ಣದ ಪಲ್ಸರ್‌ ಬೈಕ್‌ನಲ್ಲಿ ಹಾದು ಹೋಗುತ್ತಾನೆ.

ಇನ್ನೊಂದರಲ್ಲಿ ಮಣ್ಣು ರಸ್ತೆಯಲ್ಲಿ ಹೆಲ್ಮೆಟ್‌ ಧರಿಸಿದ ವ್ಯಕ್ತಿ ಹೋಗುತ್ತಿದ್ದು, ಹೆಲ್ಮೆಟ್‌ನ ಮುಂಭಾಗದ ಗಾಜು ತೆರೆದಿದೆ. ಈ ಎರಡು ವಿಡಿಯೋಗಳಲ್ಲಿನ ವ್ಯಕ್ತಿ ಒಬ್ಬನೇ ಎಂದು ಅಂದಾಜಿಸಲಾಗಿದ್ದರೂ ಈ ದೃಶ್ಯಗಳಲ್ಲಿ ವ್ಯಕ್ತಿಗಳ ಚಹರೆ ಸ್ಪಷ್ಟವಾಗಿಲ್ಲ. ಕೃತ್ಯದ ಬಳಿಕ ಹಾಗೂ ಇದಕ್ಕೂ ಮೊದಲು ಆರೋಪಿಗಳು ಹೆಲ್ಮೆಟ್‌ ಧರಿಸಿದ್ದರು.

ಆದರೆ ರಸ್ತೆ ಮಾರ್ಗದಲ್ಲಿ ಹೋಗುವಾಗ ಅಲ್ಲಲ್ಲಿ ಹೆಲ್ಮೆಟ್‌ ಮುಂಭಾಗದ ಗಾಜು ತೆರೆದಿರುವುದು ಕೆಲ ಸ್ಥಳದಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಇದನ್ನಾಧರಿಸಿ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ತನಿಖೆ ನಡೆಯುತ್ತಿದೆ ಎಂದು ಎಸ್‌ಐಟಿಯ ಮುಖ್ಯಸ್ಥ ಬಿ.ಕೆ.ಸಿಂಗ್‌ ಹೇಳಿದ್ದಾರೆ.

ವಾರದಿಂದ ಗೌರಿ ಅವರ ಚಲನಾವಲನಗಳನ್ನು ಗಮನಿಸುತ್ತಿದ್ದ ಹಂತಕರು :

ವಾರದಿಂದ ಗೌರಿ ಅವರ ಚಲನಾವಲನಗಳನ್ನು ಗಮನಿಸುತ್ತಿದ್ದ ಹಂತಕರು , ಲಂಕೇಶ್‌ ಮನೆಯ ಆಸುಪಾಸಿನ ನೀಲನಕ್ಷೆ ಕೂಡ ಸಿದ್ದಪಡಿಸಿದ್ದರು ಎಂಬ ಮಾಹಿತಿಯಿದೆ. ಹೀಗಾಗಿ ಆರೋಪಿಗಳ ರೇಖಾಚಿತ್ರ ಬಿಡುಗಡೆ ಮಾಡಿದ್ದು, ಸ್ಥಳೀಯರು, ಸಾರ್ವಜನಿಕ ಸ್ಥಳಗಳಲ್ಲಿ ಆರೋಪಿಗಳನ್ನು ಕಂಡಿದ್ದಲ್ಲಿ ಮಾಹಿತಿ ನೀಡಬೇಕು. ಅವರು ವಾಸಿಸುತ್ತಿದ್ದ ಮನೆ, ಹೋಟೆಲ್‌ನಲ್ಲಿ ತಂಗಿದ್ದರೆ ಅಲ್ಲಿ ನೋಡಿದವರು ಮಾಹಿತಿ ನೀಡಬೇಕೇಂದು ಪೋಲಿಸ್ ಇಲಾಖೆ ಮನವಿ ಮಾಡಿದೆ.

ಗೌರಿ ಹತ್ಯೆ ವೃತ್ತಿ ವೈಷಮ್ಯದಿಂದ ನಡೆದಿಲ್ಲ :

ಗೌರಿಲಂಕೇಶ್‌ ಹತ್ಯೆಗೈಯಲು ವೃತ್ತಿ ದ್ವೇಷ ಕಾರಣವಲ್ಲ ಎಂಬ ಅಂಶ ತನಿಖೆಯಿಂದ ಬೆಳಕಿಗೆ ಬಂದಿದೆ. ಇದುವರೆಗೂ ಎಸ್ ಐಟಿ ನಡೆಸಿದ ತನಿಖೆಯಲ್ಲಿ ಈ ಹತ್ಯೆ ವೃತ್ತಿ ವೈಷಮ್ಯದಿಂದ ನಡೆದಿಲ್ಲ ಎಂಬುದು ಸಾಬೀತಾಗಿದೆ. ಇದನ್ನು ಹೊರಪಡಿಸಿ ಇತರ ಚಟುವಟಿಕೆಗಳು ಸೇರಿದಂತೆ ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರಿದಿದೆ.

 

ಲೋಕಲ್ ಮೇಡ್ ಪಿಸ್ತೂಲ್ ಬಳಸಿ ಕೊಲೆ :

ಗೌರಿಲಂಕೇಶ್‌ ಅವರ ಹತ್ಯೆ ಲೋಕಲ್ ಮೇಡ್ ಪಿಸ್ತೂಲಿನಿಂದ ಆಗಿದೆ, ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್‌, ಗೋವಿಂದ ಪಾನ್ಸರೆ, ರಾಜ್ಯದ ಎಂ.ಎಂ. ಕಲುºರ್ಗಿ ಹತ್ಯೆಗೈದ ರೀತಿಯ ಪಿಸ್ತೂಲ್‌ನಿಂದಲೇ ಕೃತ್ಯ ನಡೆದಿದೆ.
2013ರಲ್ಲಿ ಮಹಾರಾಷ್ಟ್ರದ ನರೇಂದ್ರ ದಾಭೋಲ್ಕರ್‌ ಹತ್ಯೆ ಪ್ರಕರಣದ ಬಳಿಕವೂ ಸ್ಥಳೀಯರ ಹೇಳಿಕೆಯನ್ನಾಧರಿಸಿ ರೇಖಾಚಿತ್ರ ಬಿಡುಗಡೆ ಮಾಡಲಾಗಿತ್ತು. ಆದರೆ ಆರೋಪಿಗಳ ಪತ್ತೆಯಾಗಲಿಲ್ಲ. ಮಲ್ಲೇಶ್ವರ ಬಿಜೆಪಿ ಕಚೇರಿ ಸ್ಫೋಟದಲ್ಲೂ ಶಂಕಿತನ ರೇಖಾಚಿತ್ರ ಪ್ರಕಟಿಸಲಾಗಿತ್ತು. ಶಂಕಿತರ ರೇಖಾಚಿತ್ರ ಬಿಡುಗಡೆ ಮಾಡಿದ ಪ್ರಕರಣಗಳಲ್ಲಿ ಯಶಸ್ಸು ಸಿಕ್ಕಿರುವುದು ವಿರಳ ಎಂದು ನಿವೃತ್ತ ಪೊಲೀಸ್‌ ಅಧಿಕಾರಿಗಳು ಅಭಿಪ್ರಾಯಪಡುತ್ತಾರೆ.