ಮಂಗಳೂರು,ಜುಲೈ22; ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮತ್ತೆ ಕಲ್ಲಿನ ಕೋರೆಯ ದುರಂತ ಮರುಕಳಿಸಿದೆ. ಕಳೆದ ವರ್ಷ ಮೂಡಬಿದಿರೆಯಲ್ಲಿ ಇಬ್ಬರು ಬಾಲಕಿಯರು ಕಲ್ಲಿನ ಕೋರೆಯಲ್ಲಿ ಶೇಖರಣೆಗೊಂಡ ನೀರಿನಲ್ಲಿ ಮುಳುಗಿ ಸಾವನ್ನಪ್ಪಿತ್ತು, ಜಿಲ್ಲೆಯ ಇತರ ಕಡೆಗಳಲ್ಲೂ ಇಂತಹ ದುರಂತಗಳು ಸಂಭವಿಸಿದೆ. ಆದರೆ ಈ ಬಾರಿ ಮತ್ತೆ ಕಲ್ಲಿನ ಕೋರೆಯ ನೀರಿನಲ್ಲಿ ಮುಳುಗಿ ಬಾಲಕನೋರ್ವ ಸಾವಿಗೀಡಾಗಿದ್ದಾನೆ.

ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಇರ್ಫಾನ್(10) ಸಾವಿಗೀಡಾದ ಬಾಲಕನಾಗಿದ್ದು, ಈತ ತನ್ನ ಗೆಳೆಯರೊಂದಿಗೆ ಸೇರಿ ಕಲ್ಲಿನ ಕೋರೆಯಲ್ಲಿ ಸಂಗ್ರಹವಾಗಿದ್ದ ನೀರಿನಲ್ಲಿ ಈಜಲು ಹೋಗಿ ತನ್ನ ಪ್ರಾಣ ಕಳೆದುಕೊಂಡಿದ್ದಾನೆ. ಜಿಲ್ಲೆಯಾದ್ಯಂತ ಇಂಥಹ ಕಲ್ಲಿನ ಕೋರೆಗಳ ಹೊಂಡಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಂಪು ಕಲ್ಲನ್ನು ಕೋರೆಯಿಂದ ತೆಗೆದ ಬಳಿಕ ಅದನ್ನು ಮುಚ್ಚದೆ ಅದನ್ನು ಹಾಗೆಯೇ ಬಿಡುತ್ತಿರುವ ಹಿನ್ನಲೆಯಲ್ಲಿ ಈ ಹೊಂಡಗಳು ಇದೀಗ ಮೃತ್ಯುಕೂಪವಾಗಿ ಬದಲಾಗುತ್ತಿದೆ.

ಕಳೆದ ವರ್ಷ ಇಂಥಹುದೇ ಅವಘಡ ಮೂಡಬಿದಿರೆಯ ಸಮೀಪ ನಡೆದಿದ್ದು, ಆ ಅವಘಡದಲ್ಲಿ ಇಬ್ಬರು ಬಾಲಕಿಯರು ಸಾವನ್ನಪ್ಪಿದ್ದರು. ಆ ಬಳಿಕ ಅಂದಿನ ಜಿಲ್ಲಾಧಿಕಾರಿಗಳು ಕಲ್ಲಿನ ಕೋರೆಗಳ ಹೊಂಡಗಳನ್ನು ಮುಚ್ಚಬೇಕು ಇಲ್ಲವೇ ಹೊಂಡಗಳ ಸುತ್ತಲೂ ತಾತ್ಕಾಲಿಕ ಬೇಲಿಯನ್ನು ನಿರ್ಮಿಸಿಬೇಕೆಂಬ ಆದೇಶವನ್ನೂ ಹೊರಡಿಸಿದ್ದರು. ಆದರೆ ಆ ಆದೇಶ ಹಿಂದಿನ ಜಿಲ್ಲಾಧಿಕಾರಿಗಳ ಹಿಂದೆಯೇ ಹೋಗಿದ್ದು, ಇದೀಗ ಕಲ್ಲುಕೋರೆಗಳ ಧಣಿಗಳು ಮತ್ತೆ ತಮ್ಮ ಚಾಳಿಯನ್ನು ಮುಂದುವರಿಸಿದ್ದಾರೆ.ಸಜಿಪನಡು ಘಟನೆಗೆ ಸಂಬಂಧಿಸಿದಂತೆ ಬಂಟ್ವಾಳ ಗ್ರಾಮಾಂತರ ಪೋಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.