Connect with us

  UDUPI

  ಕಾಡುಪ್ರಾಣಿಗಳ ಹಾವಳಿಗೆ ಖಂಡಿತ ಪರಿಹಾರ : ಸಚಿವ ಪ್ರಮೋದ್ ಭರವಸೆ

  ಕಾಡು ಪ್ರಾಣಿಗಳ ಹಾವಳಿಗೆ ಖಂಡಿತ ಪರಿಹಾರ : ಸಚಿವ ಪ್ರಮೋದ್ ಭರವಸೆ

  ಉಡುಪಿ, ಅಕ್ಟೋಬರ್ 14: ತಂತ್ರಜ್ಞಾನದ ನೆರವಿನಿಂದ ಜಿಲ್ಲೆಯ ರೈತರು ಬಹಳಷ್ಟು ಮುಂದುವರಿದಿದ್ದರೂ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಬೇಸತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ಅರಣ್ಯ ಸಚಿವರು, ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ರೈತರ ಸಭೆ ಕರೆದು ಪರಿಹಾರಕ್ಕೆ ಯತ್ನಿಸಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಭರವಸೆ ನೀಡಿದ್ದಾರೆ.

  ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾನಿಲಯ, ಶಿವಮೊಗ್ಗ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರ, ಕೃಷಿ, ತೋಟಗಾರಿಕೆ, ರೇಷ್ಮೆ, ಅರಣ್ಯ ಪಶು ಸಂಗೋಪನೆ, ಮೀನುಗಾರಿಕೆಯವರ ಸಂಯುಕ್ತ ಆಶ್ರಯದಲ್ಲಿ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಕೃಷಿ ವಿಜ್ಞಾನ ಕೇಂದ್ರ ಬ್ರಹ್ಮಾವರದಲ್ಲಿ ನಡೆದ ಕೃಷಿ ಮೇಳ-2017 ಉದ್ಘಾಟಿಸಿ ಅವರು ಮಾತನಾಡಿದರು.

  ಈ ಸಂದರ್ಭದಲ್ಲಿ ಕೃಷಿಕರು ಸಚಿವರಲ್ಲಿ ಪ್ರಸಕ್ತ ದಿನಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಕೃಷಿಕರು ಸಚಿವರ ಗಮನಸೆಳದಾಗ ಕಾಡು ಪ್ರಾಣಿಗಳ ಉಪಟಳ ಹಾಗೂ ಹಾವಳಿಗೆ ಖಂಡಿತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.
  ಹಸಿರು ಕ್ರಾಂತಿ, ಕೃಷಿ ಕ್ರಾಂತಿಯಿಂದ ಕೃಷಿಕ್ಷೇತ್ರ ಮುಂದುವರಿದಿರುವುದನ್ನು ಪ್ರಸ್ತಾಪಿಸಿದ ಸಚಿವರು, ರೈತರು ಲಾಭದಾಯಕ ಕೃಷಿ ಮಾಡಬೇಕಾದರೆ ತಂತ್ರಜ್ಞಾನ ಬಹಳ ಮುಖ್ಯವಾದುದು. ತಂತ್ರಜ್ಞಾನದ ಮಾಹಿತಿ ಕೃಷಿ ಮೇಳದಲ್ಲಿ ಸಿಗುತ್ತದೆ ಅಭಿಪ್ರಾಯಪಟ್ಟರು.

  ಕೃಷಿಯಾಧಾರಿತ ದೇಶದಲ್ಲಿ ನಾವಿಂದು ಸ್ವಾವಲಂಬಿಗಳಾಗಿದ್ದರೂ, ಭವಿಷ್ಯವನ್ನು ನೋಡುವಾಗ ಯುವಕರು ಕೃಷಿಯತ್ತ ಮುಖ ಮಾಡದೆ ಇರುವುದು ಚಿಂತೆಗೆ ಕಾರಣವಾಗುತ್ತದೆ. ರಾಜ್ಯ ಸರ್ಕಾರ ಬೆಳೆದವನಿಗೆ ನ್ಯಾಯ ದೊರಕಿಸಿಕೊಡುವ ಉದ್ದೇಶದಿಂದ ಆನ್‍ಲೈನ್ ಮಾರುಕಟ್ಟೆ ಆರಂಭಿಸಿದ್ದು, ರಾಜ್ಯದ ರೈತರಿಗೆ ಇದರಿಂದ ಬಹಳಷ್ಟು ಅನುಕೂಲವಾಗಿದೆ.
  ಪ್ರಸಕ್ತ ಸಾಲಿನಲ್ಲಿ ಜಿಲ್ಲೆಯನ್ನೂ ಕೃಷಿ ಭಾಗ್ಯದಡಿ ಸೇರಿಸಿದ್ದು, 22000 ರೂ. ಕೃಷಿ ಹೊಂಡ ನಿರ್ಮಾಣಕ್ಕೆ ಕೃಷಿಕರಿಗೆ ಲಭ್ಯವಾಗಲಿದೆ. ಕೃಷಿ ಯಂತ್ರೋಪಕರಣಗಳಿಗೆ 2 ಕೋಟಿ ಸಬ್ಸಿಡಿ, ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಡಿ ಎಕರೆಗೆ ತೆಂಗಿನ ತೋಟದ ಕೃಷಿಗೆ 50 ಸಾವಿರ ಅನುದಾನವನ್ನು, ಅಡಿಕೆ ಬೆಳೆ ಕೃಷಿಗೆ 1 ಲಕ್ಷ 20 ಸಾವಿರ ಅನುದಾನವನ್ನು ಪಡೆಯಬಹುದು. ರೈತರು ಉದ್ಯೋಗ ಚೀಟಿಯನ್ನು ಪಡೆಯುವ ಮುಖಾಂತರ ತಮ್ಮ ತೋಟದಲ್ಲಿ ತಾವೇ ದುಡಿದು ಉದ್ಯೋಗ ಖಾತರಿ ಯೋಜನೆಯ ಉಪಯೋಗವನ್ನು ಪಡೆಯಬೇಕು ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಪಿ.ನಾರಾಯಣ ಸ್ವಾಮಿ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೆ.ಪ್ರತಾಪ್‍ಚಂದ್ರ ಶೆಟ್ಟಿ, ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ನಳಿನಿ ಪ್ರದೀಪ್ ರಾವ್, ಚಾಂತಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸರಸ್ವತಿ ವಿ.ನಾಯ್ಕ, ಉಡುಪಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಅಶೋಕ್ ಕುಮಾರ್ ಕೊಡ್ಗಿ, ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಶೀಲಾ ಕೆ ಶೆಟ್ಟಿ, ವ್ಯವಸ್ಥಾಪನಾ ಮಂಡಳಿಯ ಸದಸ್ಯ ಕೃಷಿ ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗದ ಡಾ.ವಿ.ವೀರಭದ್ರಯ್ಯ, ಕೃಷಿ ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ ವ್ಯವಸ್ಥಾಪನಾ ಮಂಡಳಿ ಸದಸ್ಯೆ ನೀತು ಯೋಗಿರಾಜ್ ಪಾಟೀಲ್, ಕೃಷಿ ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ ಇದರ ವಿಸ್ತರಣಾ ನಿರ್ದೇಶಕ ಡಾ.ಟಿ.ಹೆಚ್ ಗೌಡ, ಕೃಷಿ ತೋಟಗಾರಿಕಾ ವಿಶ್ವ ವಿದ್ಯಾಲಯ ಶಿವಮೊಗ್ಗ ಇದರ ನಿರ್ದೇಶಕ ಡಾ.ವೈ.ವಿಶ್ವನಾಥ ಶೆಟ್ಟಿ, ಉಡುಪಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶರಾದ ಡಾ.ಅಂತೋನಿ ಮರಿಯಾ ಇಮ್ಯಾನುಯಲ್,  ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರ ಬ್ರಹ್ಮಾವರದ ಸಹ ಸಂಶೋಧನಾ, ವಿಸ್ತರಣಾ, ನಿರ್ದೇಶಕರು ಡಾ.ಎಸ್.ಯು.ಪಾಟೀಲ್,  ಉಡುಪಿ ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಭುವನೇಶ್ವರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಪುರುಷೋತ್ತಮ ಪಿ.ಕೆ. ಹಾಗೂ ಮತ್ತಿತರು ಉಪಸ್ಥಿತರಿದ್ದರು.

  ವಿವಿಧ ಬಗೆಯ ಕೃಷಿ ಯಂತ್ರಗಳು, ಕೃಷಿ ಆವಿಷ್ಕಾರಗಳು, ವಾಹನ, ಕೃಷಿ ಉಪಕರಣ, ಕರಕುಶಲ ವಸ್ತುಗಳು, ತರಕಾರಿ ಬೀಜಗಳು, ವಿವಿಧ ಬಗೆಯ ಹೂ-ಹಣ್ಣು ಗಿಡಗಳು ಹಾಗೂ ಇತರ ವಸ್ತುಗಳ ಪ್ರದರ್ಶನ ಏರ್ಪಡಿಸಲಾಗಿತ್ತು.

  Share Information
  Advertisement
  Click to comment

  You must be logged in to post a comment Login

  Leave a Reply