Connect with us

    UDUPI

    ಕವಿ ಮತ್ತು ಮಹರ್ಷಿಗಳ ಪರಂಪರೆಯಲ್ಲಿ ವಾಲ್ಮೀಕಿ ಶ್ರೇಷ್ಠರು – ಶೀಲಾ ಶೆಟ್ಟಿ

    ಕವಿ ಮತ್ತು ಮಹರ್ಷಿಗಳ ಪರಂಪರೆಯಲ್ಲಿ ವಾಲ್ಮೀಕಿ ಶ್ರೇಷ್ಠರು – ಶೀಲಾ ಶೆಟ್ಟಿ

    ಉಡುಪಿ, ಅಕ್ಟೋಬರ್ 5: ರಾಮಾಯಣ ಆದಿಕಾವ್ಯ ರಚಿಸಿದ ವಾಲ್ಮೀಕಿ ಅವರು ಕವಿ ಮತ್ತು ಮಹರ್ಷಿಗಳ ಪರಂಪರೆಯಲ್ಲಿ ಅತ್ಯಂತ ಶ್ರೇಷ್ಠರು ಎಂದು ಎಂದು ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ ಶೆಟ್ಟಿ ಹೇಳಿದ್ದಾರೆ.

    ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ, ಜಿಲ್ಲಾಡಳಿತ , ಜಿಲ್ಲಾ ಪಂಚಾಯತ್, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಪರಿಶಿಷ್ಟ ವರ್ಗಗಳ ಸಂಘಟನೆ ಸಹಯೋಗದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
    ವ್ಯಾಧನಾಗಿ ಅಹಿಂಸೆಯಲ್ಲಿ ತೊಡಗಿದ್ದ ವಾಲ್ಮೀಕಿ, ನಾರದ ಮಹರ್ಷಿಗಳ ಸೂಚನೆಯಂತೆ ರಾಮಧ್ಯಾನ ಮಾಡಿ ಮಹರ್ಷಿಯಾದರು, ಬೇಡನೊಬ್ಬನ ಬಾಣದಿಂದ ಕ್ರೌಂಚ ಪಕ್ಷಿಗಳ ಮರಣವನ್ನು ಕಂಡ ಮರುಗಿದ ಅವರ ಕರುಣೆಯ ಹೃದಯ ರಾಮಯಣ ಕಾವ್ಯ ಬರೆಯಲು ಸ್ಪೂರ್ತಿಯಾಯಿತು.

    ವಾಲ್ಮೀಕಿ ರಚಿಸಿದ ರಾಮಾಯಣ ಗ್ರಂಥವು ವಿಶ್ವಮಾನ್ಯವಾದುದು, ಭಾರತ ಮಾತ್ರವಲ್ಲದೇ ಅನೇಕ ದೇಶಗಳಲ್ಲಿ ಇಂದಿಗೂ ರಾಮಾಯಣದ ಅನುಸರಣೆ ನಡೆಯುತ್ತಿದೆ, ರಾಮಾಯಣದಲ್ಲಿನ ಎಲ್ಲಾ ಮಹಾಪುರುಷರು ಸಮಾಜಕ್ಕೆ ಸದಾ ಆದರ್ಶಪ್ರಾಯರು, ರಾಮಾಯಣ ಕಾವ್ಯದಲ್ಲಿ ತಿಳಿಸಿದಂತೆ ಪ್ರತಿಯೊಬ್ಬರೂ ನ್ಯಾಯಮಾರ್ಗದಲ್ಲಿ ನಡೆಯಬೇಕು, ಬೇಡ ಜನಾಂಗದ ವಾಲ್ಮೀಕಿ ತಮ್ಮ ಛಲ ಮತ್ತು ಧಾರಣ ಶಕ್ತಿಯಿಂದ ಮಹಾನ್ ವ್ಯಕ್ತಿಯಾಗಿ ರೂಪುಗೊಂಡಿದ್ದು ಎಲ್ಲರಿಗೂ ಮಾದರಿಯಾಗಬೇಕು ಎಂದು ಶೀಲಾ ಶೆಟ್ಟಿ ಹೇಳಿದರು.

    ಮಹರ್ಷಿ ಶ್ರೀ ವಾಲ್ಮೀಕಿ ವ್ಯಕ್ವಿತ್ವ ಮತ್ತು ಜೀವನದ ಬಗ್ಗೆ ವಿಶೇಷ ಉಪನ್ಯಾಸ ನೀಡಿದ, ಕುಂದಾಪುರದ ಡಾ.ಬಿ.ಬಿ. ಹೆಗ್ಡೆ, ಪ್ರಥಮ ದರ್ಜೆ ಕಾಲೇಜಿನ ಉಪ ಪ್ರಾಂಶುಪಾಲ ಚೇತನ್ ಶೆಟ್ಟಿ ಕೋವಾಡಿ ಮಾತನಾಡಿ, ವಾಲ್ಮೀಕಿ ವಿಶ್ವ ಮಾನವರಾಗಿದ್ದರು, ಅವರು ಸಮಾಜ ಸುಧಾರಕ, ಶಿಕ್ಷಣ ತಜ್ಞ, ಪರಿಸರ ಪ್ರೇಮಿ, ಶೋಷಿತರ ಪರ ಕವಿಯಾಗಿದ್ದರು, ಅವರ ರಚನೆಯ ರಾಮಾಯಣದಲ್ಲಿನ ಭಾತೃತ್ವ, ಸಾಮಾಜಿಕ ನ್ಯಾಯ, ಮಾನವೀಯ ಧರ್ಮ 21 ನೆ ಶತಮಾನಕ್ಕೂ ಪ್ರಸ್ತುತವಾಗಿದ್ದು, ಅದರಲ್ಲಿನ ಪ್ರತಿಯೊಂದು ಪಾತ್ರಗಳಿಗೂ ಅದರದೇ ಆದ ಶ್ರೀಮಂತಿಕೆ ಇದೆ, ರಾಮಾಯಣದಲ್ಲಿನ ಮಹಾನ್ ವ್ಯಕ್ತಿಗಳು ಯಾವುದೇ ಒಂದು ಸಮುದಾಯದ ಸಂಕೇತವಾಗದೆ, ಅವರಲ್ಲಿನ ಚಿಂತನೆಗಳು, ಮೌಲ್ಯಗಳು ವಿಚಾರಧಾರೆ ಗಳು ಧರ್ಮಾತೀತವಾಗಿ ಸಮಾಜದಲ್ಲಿ ಅನುಕರಣೀಯವಾಗಬೇಕು ಎಂದು ಹೇಳಿದರು.

    ಸರಳ ವಿವಾಹವಾದ ದಂಪತಿಗಳಿಗೆ ಹಾಗೂ ಶಿಕ್ಷಣ ದಲ್ಲಿ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಲಾಯಿತು.

    Share Information
    Advertisement
    Click to comment

    You must be logged in to post a comment Login

    Leave a Reply