LATEST NEWS
ಹಿಂಸಾರೂಪ ಪಡೆದ ಸಿರ್ಸಿ ಬಂದ್
ಹಿಂಸಾರೂಪ ಪಡೆದ ಸಿರ್ಸಿ ಬಂದ್
ಕಾರವಾರ ಡಿಸೆಂಬರ್ 12: ಪರೇಶ್ ಮೇಸ್ತ ಪ್ರಕರಣ ಖಂಡಿಸಿ ಹಾಗೂ ಪರೇಶ್ ಮೇಸ್ತ ಕುಟುಂಬಕ್ಕೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಸಿರ್ಸಿ ಯಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿಂಸಾ ರೂಪ ಪಡೆದುಕೊಂಡಿದೆ. ಪರೇಶ್ ಮೇಸ್ತ ಪ್ರಕರಣವನ್ನು ಖಂಡಿಸಿ ಹಿಂದೂಪರ ಸಂಘಟನೆಗಳಿಂದ ಇಂದು ಸಿರ್ಸಿ ಬಂದ್ ಗೆ ಕರೆ ನೀಡಲಾಗಿತ್ತು.
ಸಿರ್ಸಿಯ ವಿಕಾಸಾಶ್ರಮ ಮೈದಾನದ ಮುಂದೆ ಸೇರಿದ ಹಿಂದೂ ಸಂಘಟನೆಗಳು ಶಾಸಕ ವಿಶ್ವೇಶರ ಹೆಗಡೆ ಕಾಗೇರಿ ನೇತೃತ್ವದಲ್ಲಿ ಪ್ರತಿಭಟನೆಗಳಿದ ಹಿಂದೂ ಸಂಘಟನೆಗಳ ಕಾರ್ಯಕರ್ತರನ್ನು ಪೊಲೀಸರು ತಡೆದಿದ್ದಾರೆ. ಈ ಹಿನ್ನಲೆಯಲ್ಲಿ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗುವ ಸೂಚನೆ ದೊರೆತ ಹಿನ್ನಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.
ಈ ಹಿನ್ನಲೆಯಲ್ಲಿ ಕೆರಳಿದ ಪ್ರತಿಭಟನಾ ನಿರತ ಹಿಂದೂ ಸಂಘಟನೆಯ ಕಾರ್ಯಕರ್ತರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಕಲ್ಲು ತೂರಾಟದಲ್ಲಿ ಹಲವಾರು ವಾಹನಗಳು ಜಖಂ ಗೊಂಡಿದ್ದು ಕೆಎಸ್ ಆರ್ ಟಿಸಿ ಬಸ್ ಗಳ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ.
ಈ ನಡುವೆ ಬಸ್ ನಿಲ್ದಾಣಕ್ಕೆ ನುಗ್ಗಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಬಸ್ ಸಂಚಾರ ತಡೆದಿದ್ದಾರೆ.
ಇಂದು ಮುಂಜಾನೆಯಿಂದಲೇ ಸಿರ್ಸಿ ಸಂಪೂರ್ಣ ಬಂದ್ ಆಗಿದ್ದರೂ ಅಲ್ಲಲ್ಲಿ ಅಂಗಡಿಗಳು ತೆರೆದಿರುವುದನ್ನು ಪ್ರತಿಭಟನಾಕಾರರು ಮುಚ್ಚಿಸಿದ್ದಾರೆ. ಕೆಲ ಅಂಗಡಿಗಳಿಗೆ ನುಗ್ಗಿದ ಪ್ರತಿಭಟನಾಕಾರರು ಅಂಗಡಿಯ ವಸ್ತುಗಳನ್ನು ಹೊರಗೆಸೆದು ಬೆಂಕಿ ಹಚ್ಚಿದ್ದಾರೆ.
ಈ ನಡುವೆ ಮಾಧ್ಯಮ ಪ್ರತಿನಿಧಿಗಳ ವಿರುದ್ದ ತಿರುಗಿ ಬಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ವಿಡಿಯೋ ಮಾಡದಂತೆ ಬೆದರಿಕೆ ಹಾಕಿದ್ದಾರೆ. ಪರೇಶ ಮೇಸ್ತ ಸಾವಿನ ಸುದ್ದಿ ಮಾಡದೇ , ಬೆಳಗೆರೆ ಸುದ್ದಿ ಪ್ರಸಾರ ಮಾಡುತ್ತಿರುವುದಕ್ಕೆ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.