DAKSHINA KANNADA
ಸುರತ್ಕಲ್ – ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಂಪೆನಿ ದಿವಾಳಿ
ಸುರತ್ಕಲ್ – ಬಿ.ಸಿ.ರೋಡ್ ರಾಷ್ಟ್ರೀಯ ಹೆದ್ದಾರಿ ನಿರ್ವಹಣಾ ಕಂಪೆನಿ ದಿವಾಳಿ
ಮಂಗಳೂರು, ಅಕ್ಟೋಬರ್ 15 :ಕರ್ನಾಟಕ ರಾಜ್ಯದ ಆರ್ಥಿಕ ಹೆಬ್ಬಾಗಿಲು ಹಾಗೂ ಕೋಟ್ಯಾಂತರ ಆದಾಯ ತರುವ ಏಕೈಕ ಬಂದರು ಹೊಂದಿರುವ ನವ ಮಂಗಳೂರು ಬಂದರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ನಿರ್ವಹಣೆ ಮಾಡುವ ಕಂಪೆನಿ ಇದೀಗ ದಿವಾಳಿ ಹಂತದಲ್ಲಿದೆ.
2004 ರಲ್ಲಿ NH 66 ರ ಸುರತ್ಕಲ್ ಹಾಗೂ ಮಂಗಳೂರು – ಬೆಂಗಳೂರು ಹೆದ್ದಾರಿಯ ಬಿ, ಸಿ, ರೋಡ್ ನ ಮಧ್ಯದಲ್ಲಿರುವ ಎರಡು ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣ ಹಾಗೂ ನಿರ್ವಹಣೆಗಾಗಿ ನ್ಯೂ ಮಂಗಳೂರು ಪೋರ್ಟ್ ರೋಡ್ ಕಂಪೆನಿಯನ್ನು ಅಸ್ತಿತ್ವಕ್ಕೆ ತರಲಾಗಿತ್ತು.
ಈ ಭಾಗದಲ್ಲಿ 35 ಕಿ.ಮೀ. ಉದ್ದದ ನಾಲ್ಕು ಲೇನ್ ನ ಚತುಷ್ಪತ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆಯ ಹೊಣೆಯನ್ನ ಈ ಕಂಪೆನಿ ವಹಿಸಿಕೊಂಡಿತ್ತು. ಈ ಹೆದ್ದಾರಿ ನಿರ್ಮಾಣಕ್ಕೆ ಈ NMPRC ಕಂಪೆನಿ ಬ್ಯಾಂಕ್‌ನಿಂದ 363 ಕೋಟಿ ಸಾಲ ಪಡೆದಿತ್ತು. ಇರ್ಕಾನ್ ಕಂಪೆನಿಗೆ ರಸ್ತೆ ನಿರ್ಮಾಣ ಮಾಡಲು ಟೆಂಡರ್ ಕೂಡ ನೀಡಿತ್ತು. ಈ ಸಾಲ ಮರುಪಾವತಿಗಾಗಿ NH 66 ಸುರತ್ಕಲ್ ಮತ್ತು NH75 ರ ಬ್ರಹ್ಮರಕೂಟ್ಲು ಟೋಲ್ ಗೇಟ್ ಗಳನ್ನು ನಿರ್ಮಾನ ಮಾಡಿ ಟೋಲ್ ಸಂಗ್ರಹಿಸುತ್ತಿತ್ತು.
ಆದರೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗದೇ ಕಂಪೆನಿ ಪರದಾಡುತ್ತಿದೆ ಮಾತ್ರವಲ್ಲ ಈ ಭಾಗದ ಹೆದ್ದಾರಿಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಹಣ ಇಲ್ಲದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಸುರತ್ಕಲ್‌ನಿಂದ ನಂತೂರು – ಬಿ.ಸಿ.ರೋಡ್ ಜಂಕ್ಷನ್‌ವರೆಗಿನ 35 ಕಿ.ಮೀ. ರಸ್ತೆ ಕಳೆದ ಎರಡು ವರ್ಷಗಳಿಂದ ಹಣದ ಕೊರತೆಯಿಂದ ನಿರ್ವಹಣೆ ಇಲ್ಲದೆ ನಲುಗುತ್ತಿದೆ.
ಇದರ ಪರಿಣಾಮ ಹೆದ್ದಾರಿಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿವೆ. ಅನೇಕ ಪ್ರಾಣಾಪಯಗಳು ಸಂಭವಿಸಿದೆ. ನೂರಾರು ಸವಾರರು ಅಂಗ ವೈಕಲ್ಯವನ್ನು ಹೊಂದಿದ್ದಾರೆ. ಎರಡು ಟೋಲ್ ಗಳಿಂದ ಕೋಟಿಗಟ್ಟಲೆ ಟೋಲ್ ಸಂಗ್ರಹ ವಾಗುತ್ತಿದೆ. ಆದರೆ ಆ ದುಡ್ಡು ಮಾತ್ರ ಎಲ್ಲಿ ಹೋಗುತ್ತೆ ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
ಇದೇ ರಸ್ತೆಯಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುವ ಕಾಂಗ್ರೆಸ್ ಪಕ್ಷದ ಅರಣ್ಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಆಹಾರ ಸಚಿವರೂ, ಸ್ಥಳೀಯ ಶಾಸಕರೂ, ಕೇಂದ್ರದಲ್ಲಿ ಆಡಳಿತ ನಡೆಸುವ ಪ್ರಭಾವಿ ಸಂಸದರೂ ದಿನನಿತ್ಯ ಓಡಾಟ ನಡೆಸುತ್ತಾರೆ, ಆದರೆ ಈ ರಸ್ತೆಯ ದುರಸ್ಥಿ ಬಗ್ಗೆ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ. ದಿನ ಬೆಳಗ್ಗೆ ಆದರೆ ಸ್ಮಾರ್ಟ್ ಸಿಟಿ ಎಂದು ರೈಲು ಬಿಡುವ ಜನಪ್ರತಿನಿಧಿಗಳಿಗೆ ಇಲ್ಲಿನ ಹೆದ್ದಾರಿಗಳು ಇದುವರೆಗೂ ಸ್ಮಾರ್ಟ್ ಆಗದಿರುವುದು ಮಾತ್ರ ಕಣ್ಣಿಗೆ ಕಂಡಿಲ್ಲ.