UDUPI
ಸಾಂಕ್ರಾಮಿಕ ರೋಗ:ಕ್ರಮಕ್ಕೆ ನಗರಸಭೆ ಸೂಚನೆ
ಉಡುಪಿ, ಆಗಸ್ಟ್ 24 :ಉಡುಪಿ ನಗರಸಭಾ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕನ್‍ಗುನ್ಯಾ, ಹಂದಿ ಜ್ವರ ಮುಂತಾದ ಕಾಯಿಲೆಗಳು ಹರಡದಂತೆ ಕ್ರಮ ಕೈಗೊಳ್ಳುವ ಸಲುವಾಗಿ ಸಾರ್ವಜನಿಕರು, ಹೊಸಕಟ್ಟಡ ನಿರ್ಮಾಣಕಾರರು ಹಾಗೂ ಉದ್ದಿಮೆದಾರರು ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ನಗರಸಭೆಯ ಈ ಮುಂದಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಿದೆ.
ಕಟ್ಟಡ/ಮನೆಗಳ ನೀರಿನ ತೊಟ್ಟಿ, ಡ್ರಮ್ ಬಕೆಟ್‍ಗಳಲ್ಲಿರುವ ನೀರು ಬದಲಾಯಿಸಿ ಶುಚಿಗೊಳಿಸಬೇಕು. ನೀರು ಸಂಗ್ರಹ ಪರಿಕರಗಳನ್ನು ಸೊಳ್ಳೆ ಪ್ರವೇಶಿಸದಂತೆ ಭದ್ರವಾಗಿ ಮುಚ್ಚಿಡಬೇಕು. ಮನೆ ಮತ್ತು ಕಟ್ಟಡದ ಪರಿಸರವನ್ನು ಸ್ವಂತ ಜವಾಬ್ದಾರಿಯಿಂದ ಶುಚಿಗೊಳಿಸಬೇಕು ಮತ್ತು ನೀರು ನಿಂತು ಸೊಳ್ಳೆ ಉತ್ಪತ್ತಿಯಾಗದಂತೆ ಎಚ್ಚರವಹಿಸಬೇಕು. ಹೋಟೆಲ್ ಉದ್ದಿಮೆದಾರರು ಶುಚಿತ್ವದೊಂದಿಗೆ ಸಾರ್ವಜನಿಕರಿಗೆ ಕುಡಿಯಲು ಕಡ್ಡಾಯವಾಗಿ ಕುದಿಸಿ ಆರಿಸಿದ ನೀರನ್ನು ಮಾತ್ರ ನೀಡಬೇಕು. ಕಾರ್ಮಿಕರಿಗೆ ಮತ್ತು ಲಾಡ್ಜ್‍ನಲ್ಲಿ ತಂಗುವವರಿಗೆ ಸೊಳ್ಳೆ ಪರದೆ ನೀಡಬೇಕು. ಹೊಟೇಲ್ ಸುತ್ತ ಮುತ್ತ ನೀರು ನಿಂತಲ್ಲಿ ವೇಸ್ಟ್ ಆಯಿಲ್ ಸಿಂಪಡಿಸಬೇಕು.
ಮನೆ ಸುತ್ತಮುತ್ತ ಎಸೆದ ಟಯರ್ ಹಾಗೂ ತೆಂಗಿನ ಚಿಪ್ಪುಗಳಲ್ಲಿ ಮತ್ತು ಇತರ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಜಾಗ್ರತೆ ವಹಿಸಬೇಕು. ಮನೆಯ ಕಿಟಕಿ, ಬಾಗಿಲುಗಳಿಗೆ ಕೀಟ ತಡೆಗಟ್ಟುವ ಮೆಶ್/ಪರದೆಗಳನ್ನು ಅಳವಡಿಸಿಕೊಳ್ಳುವುದು. ಸೊಳ್ಳೆ ಕಡಿತದಿಂದ ರಕ್ಷಣೆಗೆ ಮೈತುಂಬ ಬಟ್ಟೆ ಧರಿಸುವುದು. ಸೊಳ್ಳೆ ನಿರೋಧಕ ಕ್ರೀಮ್ ಉಪಯೋಗಿಸುವುದು ಅಥವಾ ಸೊಳ್ಳೆ ಪರದೆ ಉಪಯೋಗಿಸುವುದು.
ಯಾವುದೇ ಜ್ವರ ಬಂದರೂ ರಕ್ತ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಕಟ್ಟಡ ಕಾಮಗಾರಿ ಕೆಲಸಗಾರರಲ್ಲಿ ಮಲೇರಿಯಾ ಪ್ರಕರಣ ಕಂಡುಬಂದಲ್ಲಿ ಅಲ್ಲಿ ಸಂಗ್ರಹವಾಗಿರುವ ನೀರು ಮತ್ತು ಕ್ಯೂರಿಂಗ್‍ಗಾಗಿ ನಿಲ್ಲಿಸಿರುವ ನೀರಿಗೆ ಅಬೇಟ್/ವೇಸ್ಟ್ ಆಯಿಲ್‍ನ್ನು ವಾರಕ್ಕೊಮ್ಮೆ ಸಿಂಪಡಿಸಬೇಕು. ಕೆಲಸಗಾರರಿಗೆ ಸೊಳ್ಳೆ ಪರದೆ ಒದಗಿಸಬೇಕು., ಜ್ವರ ಕಂಡುಬಂದಲ್ಲಿ ತಕ್ಷಣ ಚಿಕಿತ್ಸೆ ಕೊಡಿಸಬೇಕು.
ಹೊಸಕಟ್ಟಡ ನಿರ್ಮಾಣಗಾರರು ತಮ್ಮ ಕಟ್ಟಡ ನಿರ್ಮಾಣದ ಕಲ್ಲು, ಜೆಲ್ಲಿ ಇತ್ಯಾದಿ ಸಾಮಾಗ್ರಿಗಳನ್ನು ಮಳೆ ನೀರು ಹರಿಯುವ ರಸ್ತೆ/ ಚರಂಡಿಯಲ್ಲಿ ಶೇಖರಿಸುವುದನ್ನು ತಕ್ಷಣ ತೆರವುಗೊಳಿಸಬೇಕು. ಇದಕ್ಕೆ ಸ್ಪಂದಿಸದಿದ್ದಲ್ಲಿ ಕಾಯ್ದೆಯ ಅನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಉಡುಪಿ ನಗರಸಭೆಯ ಪೌರಾಯುಕ್ತರು ಎಚ್ಚರಿಸಿದ್ದಾರೆ.