BANTWAL
ಸರಕಾರಿ ಭೂಮಿ ಗುಳುಂ ಮಾಡಲು ಹೊರಟ ಗ್ರಾಂ.ಪಂ.ಅಧ್ಯಕ್ಷೆ,ಗ್ರಾಮಸ್ಥರ ವೀರೋಧ
ಬಂಟ್ವಾಳ, ಆಗಸ್ಟ್ 24 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಟ್ಟಾಜೆ ಎಂಬಲ್ಲಿ ಸ.ನಂ.210ರಲ್ಲಿ 9.31 ಎಕ್ರೆ ಸಕರಾರಿ ಜಮೀನನ್ನು ಬಡಗಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಎಂಬವರು ಅಧಿಕಾರ ದುರ್ಬಳಕೆ ಮಾಡಿಕೊಂಡು ಅಕ್ರಮವಾಗಿ ಜೆಸಿಬಿ ಮೂಲಕ ಸಮತಟ್ಟುಗೊಳಿಸಿ ಅತಿಕ್ರಮಣಗೊಳಿಸಿದ್ದಾರೆ ಎನ್ನುವ ಆರೋಪವಿದ್ದು, ಸ್ಥಳೀಯರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇಲ್ಲಿಗೆ ಸಮೀಪದ ಸ.ನಂ.25/2ಎ3ರಲ್ಲಿ ಇರುವ ಕೇವಲ 27.50 ಸೆಂಟ್ಸ್ ಜಮೀನಿನ ದಾಖಲೆ ಮೂಲಕ ಗ್ರಾಮ ಪಂಚಾಯಿತಿಗೆ ತಪ್ಪು ಮಾಹಿತಿ ನೀಡಿ ನಿರಕ್ಷೇಪಣಾ ಪತ್ರ ಪಡೆದು ಬಳಿಕ ಈ ಸರಕಾರಿ ಜಮೀನಿನಲ್ಲಿ ಕೊಳವೆ ಬಾವಿ ಕೊರೆದು ವಿದ್ಯುತ್ ಸಂಪರ್ಕ ಪಡೆದಿದ್ದಾರೆ. ಈ ಬಗ್ಗೆ ಮಾಹಿತಿ ಹಕ್ಕಿನಡಿ ಸೂಕ್ತ ದಾಖಲೆಪತ್ರ ಪಡೆದು ಗ್ರಾಮ ಪಂಚಾಯಿತಿ ಪಿಡಿಒ ಮತ್ತು ಸಿದ್ಧಕಟ್ಟೆ ಮೆಸ್ಕಾಂ ಇಲಾಖೆಗೆ ದೂರು ಸಲ್ಲಿಸಲಾಗಿದೆ. ಇದರಿಂದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅವರು ಮತ್ತೆ ಈ ನಿರಕ್ಷೇಪಣಾಪತ್ರ ರದ್ದುಗೊಳಿಸಿದ್ದಾರೆ. ಈ ಸರಕಾರಿ ಜಮೀನು ಅತಿಕ್ರಮಣ ಬಗ್ಗೆ ಈಚೆಗೆ ನಡೆದ ಗ್ರಾಮಸಭೆಯಲ್ಲಿಯೂ ಭಾರೀ ಚರ್ಚೆಗೆ ಗ್ರಾಸವಾಗಿ ಬಳಿಕ ಗದ್ದಲಕ್ಕೆ ಕಾರಣವಾಗಿತ್ತು. ಅಂದಿನ ನೋಡೆಲ್ ಅಧಿಕಾರಿ ಈ ಬಗ್ಗೆ ತನಿಖೆಗೆ ಆದೇಶಿಸುವುದಾಗಿ ಭರವಸೆ ನೀಡಿದ್ದಾರೆ. ಈ ಅತಿಕ್ರಮಣ ಬಗ್ಗೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗೆ ಸೂಕ್ತ ದಾಖಲೆಪತ್ರ ಸಹಿತ ದೂರು ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಜಮೀನಿನ ಬಗ್ಗೆ ಹೋರಾಟ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಕಾಶ್ ಬೆಳ್ಳೂರು ಆರೋಪಿಸುತ್ತಾರೆ. ಈಗಾಗಲೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಳೆದ 10 ವರ್ಷಗಳಿಂದ ಸುಮಾರು 1,500ಕ್ಕೂ ಮಿಕ್ಕಿ ಮಂದಿ ಮನೆ ನಿವೇಶನಕ್ಕಾಗಿ ನಾಗರಿಕರು ಅರ್ಜಿ ಸಲ್ಲಿಸಿದ್ದು, ಈ ಸರಕಾರಿ ಜಮೀನು ವಶಪಡಿಸಿಕೊಂಡು ಮತ್ತೆ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸಬೇಕು. ಇಲ್ಲದಿದ್ದಲ್ಲಿ ಇಲ್ಲಿನ ನಾಗರಿಕರನ್ನು ಒಟ್ಟುಗೂಡಿಸಿ ಗ್ರಾಮ ಪಂಚಾಯಿತಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಸಿದರು.ಈ ನಡುವೆ ಸರಕಾರಿ ಜಮೀನನ್ನು ಅಕ್ರಮವಾಗಿ ಜೆಸಿಬಿ ಮೂಲಕ ಬುಧವಾರ ಸಮತಟ್ಟುಗೊಳಿಸುತ್ತಿರುವ ಬಗ್ಗೆ ಸ್ಥಳೀಯರು ಕಂದಾಯ ಇಲಾಖೆಗೆ ನೀಡಿದ ದೂರಿನ ಹಿನ್ನೆಲೆಯಲ್ಲಿ ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಕೂಡಲೇ ಕಾಮಗಾರಿ ಸ್ಥಗಿತಗೊಳಿಸಿರುವುದಾಗಿ ಗ್ರಾಮಕರಣಿಕೆ ಜ್ಯೋತಿ ಬಾಯಿ ತಿಳಿಸಿದ್ದಾರೆ.
ತಮ್ಮ ಮೇಲಿನ ಆರೋಪಕ್ಕೆ ಪ್ರತಿಕ್ರಿಯಿಸಿರುವ ಪಂಚಾಯತ್ ಅಧ್ಯಕ್ಷೆ ಜಯಂತಿ ಪೂಜಾರಿ ಬಡಗಬೆಳ್ಳೂರು ಗ್ರಾಮದ ಬಟ್ಟಾಜೆ ಎಂಬಲ್ಲಿ ಸ.ನಂ.210ರಲ್ಲಿ ಕೇವಲ 1.90 ಕುಮ್ಕಿ ಜಮೀನಿಗೆ ಮಾತ್ರ ಕಳೆದ 20 ವರ್ಷಗಳ ಹಿಂದೆಯೇ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದು, ಎಲ್ಲಾ 9.31ಎಕ್ರೆ ಜಮೀನಿಗೆ ಅರ್ಜಿ ಸಲ್ಲಿಸಿಲ್ಲ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಂತಿ ಪೂಜಾರಿ ಸ್ಪಷ್ಟಪಡಿಸಿದ್ದಾರೆ. ಇದು ಕುಮ್ಕಿ ಜಮೀನು ಎಂಬ ಕಾರಣಕ್ಕಾಗಿ ಮಾತ್ರ ಮಂಜೂರಾತಿಗೆ ಬಾಕಿ ಉಳಿದಿದ್ದು, ಇದೀಗ ಅನಗತ್ಯವಾಗಿ ಗೊಂದಲ ನಿರ್ಮಿಸಲು ನನ್ನ ವಿರುದ್ಧ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದ್ದಾರೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.