UDUPI
ರೋಗಿಗಳಿಗೆ ಡಾಕ್ಟರ್ ಹೇಳಿದ ಔಷಧಿಗಳನ್ನು ಸರಿಯಾಗಿ ನೀಡಿ – ಜಿಲ್ಲಾ ವಾರ್ತಾಧಿಕಾರಿ ರೋಹಿಣಿ
ರೋಗಿಗಳಿಗೆ ಡಾಕ್ಟರ್ ಹೇಳಿದ ಔಷಧಿಗಳನ್ನು ಸರಿಯಾಗಿ ನೀಡಿ – ಜಿಲ್ಲಾ ವಾರ್ತಾಧಿಕಾರಿ ರೋಹಿಣಿ
ಉಡುಪಿ ಅಕ್ಟೋಬರ್ 06: ಜಿಲ್ಲೆಯಲ್ಲಿ ಈಗಾಗಲೇ ಒಟ್ಟು 44 ಕ್ಷಯ ರೋಗಿಗಳನ್ನು ಗುರುತಿಸಲಾಗಿದ್ದು, ಕ್ಷಯರೋಗ ತಡೆಗೆ ಸಂಪೂರ್ಣ ಚಿಕಿತ್ಸೆ ಅತ್ಯಂತ ಅಗತ್ಯ ಎಂದು ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಮ್ ರಾವ್ ಹೇಳಿದರು.
ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಕುಟುಂಬ ಕಲ್ಯಾಣ ಇಲಾಖೆ, ಕ್ಷಯರೋಗ ನಿಯಂತ್ರಣಾಧಿಕಾರಿ ಕಚೇರಿ, ಸಹಾಯಕ ಔಷಧ ನಿಯಂತ್ರಕರ ಕಚೇರಿ ಸಂಯುಕ್ತವಾಗಿ ಆಯೋಜಿಸಿದ ಉಡುಪಿ ತಾಲೂಕು ವ್ಯಾಪಾರಸ್ಥರಿಗೆ RNTCP-TOG ಬಗ್ಗೆ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಕ್ಷಯರೋಗವು ಗಾಳಿಯಲ್ಲಿ ಬಹುಬೇಗ ಹರಡುವ ಕಾಯಿಲೆಯಾಗಿದ್ದು, ಎರಡು ವಾರ ಅಥವಾ ಅದಕ್ಕಿಂತ ಮೇಲ್ಪಟ್ಟು ಸತತ ಕೆಮ್ಮು, ಜ್ವರ ಸಂಜೆ ವೇಳೆ ಹೆಚ್ಚಳ, ತೂಕ ಕಡಿಮೆಯಾಗುವುದು ಪ್ರಮುಖ ಲಕ್ಷಣವಾಗಿದ್ದು, ವೈದ್ಯರು ಹೇಳುವವರೆಗೆ ಸಂಪೂರ್ಣ ಚಿಕಿತ್ಸೆ ಪಡೆದರೆ ಮಾತ್ರ ಕ್ಷಯ ರೋಗ ಸಂಪೂರ್ಣ ಗುಣಮುಖವಾಗಲು ಸಾಧ್ಯ ಎಂದರು.
ಉಡುಪಿ ಜಿಲ್ಲೆ ರೋಗ ಪತ್ತೆಯಲ್ಲಿ ಮುಂಚೂಣಿಯಲ್ಲಿದ್ದು, ಜಿಲ್ಲೆಯಲ್ಲಿ ಪತ್ತೆಯಾಗದೆ ಉಳಿದವರನ್ನು ಪತ್ತೆ ಹಚ್ಚಿ ಚಿಕಿತ್ಸೆ ಕೊಡಿಸುವ ಹೊಣೆ ಖಾಸಗಿಯವರ ಮೇಲಿದೆ ಎಂದರು. ರೋಗ ಪತ್ತೆ ಮತ್ತು ನಿರ್ಮೂಲನೆಗೆ ಎಲ್ಲರ ಸಹಕಾರದ ಅಗತ್ಯವನ್ನು ಪ್ರತಿಪಾದಿಸಿದ ಅವರು, ಕಾರ್ಯಾಗಾರದಿಂದ ಇನ್ನಷ್ಟು ಮಾಹಿತಿ ಲಭ್ಯವಾಗಲಿ ಎಂದು ಆಶಿಸಿದರು.
ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರು, ಸಾಮಾಜಿಕ ಆರೋಗ್ಯಕ್ಕೆ ಔಷಧಿ ವ್ಯಾಪಾರಿಗಳ ಹೊಣೆ ಮುಖ್ಯವಾಗಿದ್ದು, ರೋಗಿಗಳಿಗೆ ಡಾಕ್ಟರ್ ಹೇಳಿದ ಔಷಧಿಗಳನ್ನು ಸರಿಯಾಗಿ ನೀಡಿ ಎಂದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾದ ಸಹಾಯಕ ಔಷಧ ನಿಯಂತ್ರಕ ನಾಗರಾಜ ಕೆ.ವಿ ಅವರು ಮಾತನಾಡಿ, ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಿದ್ದು, ಚಿಕಿತ್ಸೆಯನ್ನು ಸಂಪೂರ್ಣ ಅವಧಿ ಪಡೆಯದಿದ್ದರೆ ಕ್ಷಯ ಗುಣವಾಗುವುದಿಲ್ಲ. ರೋಗ ಪತ್ತೆಗೆ ಜಿಲ್ಲೆ ಹೆಚ್ಚಿನ ಮುತುವರ್ಜಿಯನ್ನು ವಹಿಸಿದ್ದು, ಕೆಮ್ಮಿಗಾಗಿ ನಿರಂತರ ಔಷಧಿ ಪಡೆಯುವವರು ಮೆಡಿಕಲ್ಸ್ಗೆ ಬಂದರೆ ಅಂತಹವರ ಮಾಹಿತಿಯನ್ನು ದಾಖಲಿಸಿ ಆರೋಗ್ಯ ಇಲಾಖೆ ಅಥವಾ ಸಹಾಯಕ ಔಷಧ ನಿಯಂತ್ರಕರ ಕಚೇರಿಗೆ ನೀಡಬೇಕೆಂದರು.
ಕ್ಷಯ ರೋಗ ಗುರುತಿಸುವಿಕೆಯಲ್ಲೂ ಜಿಲ್ಲೆ ಮುಂದಿದ್ದು, ರೋಗ ನಿಯಂತ್ರಣದಲ್ಲೂ ರಾಜ್ಯಕ್ಕೆ ಮಾದರಿಯಾಗಬೇಕು; ಈ ನಿಟ್ಟಿನಲ್ಲಿ ಔಷಧಿ ವ್ಯಾಪಾರಿಗಳ ಸಹಕಾರ ಅಗತ್ಯ ಎಂದ ಅವರು, ಇಂದು ಕಾರ್ಯಾಗಾರಕ್ಕೆ ಹಾಜರಾಗಿದ್ದ ಎಲ್ಲರಿಗೂ ಮಾಹಿತಿ ಸಂಗ್ರಹಿಸಲು ಪೂರಕ ಮಾಹಿತಿಯನ್ನು ನೀಡಿದರು.
ರೋಗಿಗಳ ಗುರುತಿಸುವಿಕೆ ರೋಗ ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಚಿಕಿತ್ಸೆ ಸಲಹಾ ಸೂತ್ರಗಳನ್ನು ಪಾಲಿಸುವಂತಾಗಬೇಕು; ಸಾರ್ವಜನಿಕ ಆರೋಗ್ಯ ಸುಸ್ಥಿತಿಗೆ ಈ ವ್ಯವಸ್ಥೆ ಪೂರಕ. ಟಿಬಿಯನ್ನು ನಿಯಂತ್ರಿಸಲು ರೋಗಿಗಳ ಪತ್ತೆ ಹಾಗೂ ಅವರ ಮನೆಯ ವಾತಾವರಣ ಇತರರಿಗೆ ಸೋಂಕು ಹರಡದಂತೆ ತಡೆಯಲು ಕೈಗೊಳ್ಳುವ ಕ್ರಮಗಳು ವಾತಾವರಣವನ್ನು ರೋಗ ನಿರೋಧಕವಾಗಿಡಲು ಸಾಧ್ಯ ಎಂದರು. ದೇಶ 2025ಕ್ಕೆ ಕ್ಷಯ ಮುಕ್ತ ಭಾರತವಾಗಲು ಎಲ್ಲರ ಸಹಕಾರ ಅಗತ್ಯ ಎಂದರು.