LATEST NEWS
ಮಕ್ಕಳ ಅನ್ನಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಭಿಕ್ಷಾಂದೇಹಿ ಆಂದೋಲನ….
ಮಂಗಳೂರು,ಅಗಸ್ಟ್ 14: ಕಲ್ಲಡ್ಕ ಶ್ರೀರಾಮ ಹಾಗೂ ಪುಣಚದ ಶ್ರೀದೇವಿ ವಿದ್ಯಾ ಕೇಂದ್ರಗಳಿಗೆ ನೀಡಲಾಗುತ್ತಿದ್ದ ಬಿಸಿಯೂಟದ ಅನುದಾನವನ್ನು ರಾಜ್ಯ ಸರಕಾರ ಕಡಿತಗೊಳಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಹಿನ್ನಲೆಯಲ್ಲಿ ಅನ್ನದಾನಕ್ಕಾಗಿ ಜಾಲತಾಣಗಳ್ಲಲಿ ಭಿಕ್ಷಾಂದೇಹಿ ಅಂದೋಲನ ಆರಂಭವಾಗಿದೆ.
ಟ್ವಿಟ್ಟರ್,ಫೆಸ್ಬುಕ್ ನಲ್ಲಿ ಜಸ್ಟೀಸ್ ಫಾರ್ ಕಲ್ಲಡ್ಕ ಸ್ಟೂಡೆಂಟ್ ಹ್ಯಾಶ್ ಟ್ಯಾಗ್ ನೊಂದಿಗೆ ಈ ಆಂದೋಲನ ಆರಂಭಗೊಂಡಿದೆ. ಡಾ. ಪ್ರಭಾಕರ್ ಭಟ್ ನೇತೃತ್ವದ ಕಲ್ಲಡ್ಕ ಶ್ರೀರಾಮ ಕೇಂದ್ರ ಹಾಗೂ ಪುಣಚದ ಶ್ರೀದೇವಿ ವಿದ್ಯಾಕೇಂದ್ರಕ್ಕೆ ಕೊಲ್ಲೂರು ಮೂಕಾಂಬಿಕಾ ದೇವಾಲಯದಿಂದ ಬಿಸಿಯೂಟಕ್ಕಾಗಿ ಅನುದಾನವನ್ನು ನೀಡಲಾಗುತ್ತಿತ್ತು.
2006 ರಿಂದ 2017 ರ ವರೆಗೆ ಸುಮಾರು 2.83 ಕೋಟಿ ರೂಪಾಯಿಗಳನ್ನು ದೇವಸ್ಥಾನದ ವತಿಯಿಂದ ಈ ಎರಡು ಶಾಲೆಗಳಿಗೆ ನೀಡಲಾಗಿದ್ದು, ಇದೀಗ ರಾಜ್ಯ ಸರಕಾರ ಈ ಅನುದಾನವನ್ನು ರದ್ದುಪಡಿಸಿತ್ತು. ಸರಕಾರದ ಈ ನಿರ್ಧಾರಕ್ಕೆ ಪ್ರತಿಕ್ರಿಯಿಸಿದ್ದ ಡಾ. ಕಲ್ಲಡ್ಕ ಪ್ರಭಾಕರ್ ಭಟ್ ಜೋಳಿಗೆ ಹಾಕಿ ಭೀಕ್ಷೆ ಬೇಡಿಯಾದರೂ ಮಕ್ಕಳಿಗೆ ಊಟದ ವ್ಯವಸ್ಥೆ ಮಾಡುತ್ತೇನೆಂದು ಹೇಳಿದ್ದರು.
ಈ ಹಿನ್ನಲೆಯಲ್ಲಿ ಉತ್ತೇಜಿತರಾದ ಕೆಲವು ಐಟಿ ತಂತ್ರಜ್ಞರು ಟ್ವಿಟ್ಟರ್ ನಲ್ಲಿ ಭಿಕ್ಷಾಂದೇಹಿ ಹಾಗೂ ಫೆಸ್ಬುಕ್ ನಲ್ಲಿ ಜಸ್ಟೀಸ್ ಫಾರ್ ಕಲ್ಲಡ್ಕ ಸ್ಟೂಟೆಂಟ್ ಹ್ಯಾಶ ಟ್ಯಾಗ್ ಆಂದೋಲನವನ್ನು ಆರಂಭಿಸಿದ್ದಾರೆ. ಸಂಸ್ಥೆಯ ಬ್ಯಾಂಕ್ ಅಕೌಂಟ್ ಸಹಿತ ಪೋಸ್ಟರ್ ಗಳು ಇದೀಗ ಈ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಲಾಗುತ್ತಿದ್ದು ಇದಕ್ಕೆ ಭಾರೀ ಬೆಂಬಲವೂ ವ್ಯಕ್ತವಾಗುತ್ತಿದೆ.
ಮಾಜಿ ಸಚಿವ ಸಿ.ಟಿ.ರವಿ ತನ್ನ ವೈಯುಕ್ತಿಕ ನೆಲೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಒಂದು ಲಕ್ಷ ರೂಪಾಯಿಗಳನ್ನು ನೀಡುವ ಘೋಷಣೆ ಮಾಡಿದ್ದು, ಸಂಸದೆ ಶೋಭಾ ಕರಂದ್ಲಾಜೆ ಒಂದು 10 ಕಿಂಟ್ವಾಲ್ ಅಕ್ಕಿ ನೀಡುವ ಘೋಷಣೆ ಮಾಡಿದ್ದಾರೆ. ಅದಲ್ಲದೆ ಈ ಆಂದೋಲನಕ್ಕೆ ಕೆಲವು ಸಂಘ ಸಂಸ್ಥೆಗಳೂ ಹಾಗೂ ವೈಯುಕ್ತಿಕವಾಗಿ ಸ್ಪಂದನೆಯೂ ದೊರೆತಿದೆ.