UDUPI
ಫಲಭರಿತ ಭೂಮಿಯನ್ನಾಗಿಸಿ ಬದುಕು ಕಟ್ಟಿಕೊಳ್ಳಿ- ಪ್ರಮೋದ್ ಸಲಹೆ
ಉಡುಪಿ, ಜುಲೈ 26: ಆದಿವಾಸಿ ಸಮುದಾಯದವರಿಗೆ ಈಗಾಗಲೇ ಭೂಮಿಯನ್ನು ನೀಡಲಾಗಿದ್ದು, ಸರ್ಕಾರ ನೀಡಿರುವ ಯೋಜನೆಗಳನ್ನು ಸದ್ಬಳಕೆ ಮಾಡಿ ಬದುಕು ಕಟ್ಟಿಕೊಳ್ಳಿ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಅವರಿಂದು ಕೊಕ್ಕರ್ಣೆಯ ಹೊರ್ಲಾಳಿ ಕುದಿ ಗ್ರಾಮದ ಕೊರಗ ಸಮುದಾಯದ ಜಮೀನಿನಲ್ಲಿ ಕೃಷಿ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡುತ್ತಿದ್ದರು. ದೇವರಾಜ್ ಅರಸ್ ಕಾಲದಲ್ಲೇ ಉಳುವವನೇ ಭೂಮಿಗೆ ಒಡೆಯ ಕಾನೂನು ತಂದು ಭೂಮಿ ನೀಡಲಾಗಿದ್ದರೂ ಆ ಭೂಮಿಯನ್ನು ಅಭಿವೃದ್ಧಿಪಡಿಸಿ ಫಲ ಪಡೆಯುವಲ್ಲಿ ಜಿಲ್ಲೆಯ ಕೊರಗ ಸಮುದಾಯ ಹಿಂದುಳಿದಿದ್ದು, ಇದೀಗ ಭೂಮಿಯನ್ನು ಫಲಭರಿತ ಪ್ರದೇಶವನ್ನಾಗಿಸಲು ಇಲಾಖೆಗಳೇ ಎಲ್ಲ ಸೌಲಭ್ಯಗಳನ್ನು ವಿತರಿಸುತ್ತಿದ್ದು ಅದರ ಪ್ರಯೋಜನ ಪಡೆದು ಸುಂದರ ಬದುಕು ಕಟ್ಟಿಕೊಳ್ಳಿ ಎಂದು ಸಚಿವರು ಸಲಹೆ ಮಾಡಿದರು.
ತೋಟಗಾರಿಕಾ ಇಲಾಖೆ ಯೋಜನೆ ಅನುಷ್ಠಾನಕ್ಕಿಂತ ಮುಂಚೆ ಸ್ಥಳೀಯ ಕೊರಗ ಸಮುದಾಯದವರ ಅವಶ್ಯಕತೆಗಳನ್ನು ಪಟ್ಟಿ ಮಾಡಿ ಅವರೇ ನೀಡಿದ ಬೇಡಿಕೆಯಂತೆ ಒಂದು ಕುಟುಂಬಕ್ಕೆ 15 ತೆಂಗು, ಮಲ್ಲಿಗೆ, ಹಲಸು, ಜೀಗುಜ್ಜೆ ಹಾಗೂ ತರಕಾರಿ ಬೀಜಗಳನ್ನು ನೀಡುತ್ತಿದೆ. ಎನ್ ಆರ್ ಇ ಜಿಯಡಿ ಕೃಷಿ ಮಾಡಿ, ಕೂಲಿಯನ್ನೂ ಪಡೆಯಿರಿ ಎಂದು ಸಲಹೆ ಮಾಡಿದ ಸಚಿವರು, ಮುಂದಿನ ಭೇಟಿ ವೇಳೆ ಜಮೀನು ಫಲಭರಿತವಾಗಿರಬೇಕೆಂದು ಹೇಳಿದರು.
ಏಪ್ರಿಲ್ ಮೇ ತಿಂಗಳಲ್ಲಿ ಎದುರಿಸುತ್ತಿರುವ ನೀರಿನ ಸಮಸ್ಯೆ ಪರಿಹರಿಸಲು ಯೋಜನೆ ರೂಪಿಸಲಾಗಿದೆ ಎಂದ ಸಚಿವರು, ವಿದ್ಯುತ್ ಸಂಪರ್ಕ ಬೇಡಿಕೆಯನ್ನು ದೀನದಯಾಳ್ ಯೋಜನೆಯಡಿ ಪಡೆಯಲು ಸಲಹೆ ಮಾಡಿದರು. ಇಲ್ಲಿನ ಕೊರಗರಿಗೆ ನೀಡಿರುವ ಭೂಮಿ ಒತ್ತುವರಿಯಾಗಿದೆ ಎಂಬ ದೂರು ಸ್ಥಳದಲ್ಲಿ ಉಪಸ್ಥಿತರಿದ್ದ ಕುಟುಂಬಗಳಿಂದ ಬಂದಿದ್ದು, ಈ ಬಗ್ಗೆ ಲಿಖಿತ ದೂರು ನೀಡಿ ಸಂಬಂಧಪಟ್ಟವರಿಗೆ ಕ್ರಮಕೈಗೊಳ್ಳಲು ಸೂಚಿಸುವೆ ಎಂದು ಸಚಿವರು ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮೈರ್ಮಾಡಿ ಸುಧಾಕರ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯರಾದ ಸುನೀತಾ ಶೆಟ್ಟಿ, ಭುಜಂಗ ಶೆಟ್ಟಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಆಶಾಲತಾ, ಉಪಾಧ್ಯಕ್ಷರಾದ ದೇವಕಿ ಕೋಟ್ಯಾನ್, ಬೊಗ್ರ ಕೊರಗ, ಸುಶೀಲ, ತೋಟಗಾರಿಕಾ ಇಲಾಖೆ ಉಪನಿರ್ದೇಶಕರಾದ ಭುವನೇಶ್ವರಿ, ಸಹಾಯಕ ನಿರ್ದೇಶಕರಾದ ಸಂಜೀವ ನಾಯಕ್ ಪಾಲ್ಗೊಂಡರು.