LATEST NEWS
ಪೇಜಾವರ ಶ್ರೀಗಳಿಗೆ ಯೋಗಿ ಆದಿತ್ಯನಾಥ್ ಆತಿಥ್ಯ

ಪೇಜಾವರ ಶ್ರೀಗಳಿಗೆ ಯೋಗಿ ಆದಿತ್ಯನಾಥ್ ಆತಿಥ್ಯ
ಉಡುಪಿ ಮೇ 26: ಉತ್ತರ ಭಾರತದ ಪ್ರವಾಸದಲ್ಲಿರುವ ಪೇಜಾವರ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಮತ್ತು ಕಿರಿಯ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮಿಜಿ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ಆತಿಥ್ಯವನ್ನು ಸ್ವೀಕರಿಸಿದರು.
ಮಖ್ಯಮಂತ್ರಿಗಳ ಲಕ್ನೋ ನಿವಾಸಕ್ಕೆ ಭೇಟಿ ನೀಡಿದ ಪೇಜಾವರ ಶ್ರೀಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸ್ವತಃ ಉಪಚರಿಸಿದ್ದಾರೆ. ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಯೋಗಿ ಆದಿತ್ಯನಾಥ್ ಬೆಂಗಳೂರಿನಲ್ಲಿ ಪೇಜಾವರ ಶ್ರೀಗಳನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಉತ್ತರ ಭಾರತದ ಪ್ರವಾಸದ ಸಮಯದಲ್ಲಿ ತಮ್ಮಲ್ಲಿ ಭೇಟಿ ನೀಡುವಂತೆ ಯೋಗಿ ಆದಿತ್ಯನಾಥ್ ಪೇಜಾವರ ಶ್ರೀಗಳಲ್ಲಿ ವಿನಂತಿಸಿದ್ದರು.

ಅದರಂತೆ ಪರ್ಯಾಯ ಮುಗಿದ ಬಳಿಕ ಪುಣ್ಯಕ್ಷೇತ್ರಗಳ ಪ್ರವಾಸದಲ್ಲಿರುವ ಪೇಜಾವರ ಶ್ರೀಗಳು ಸದ್ಯ ಉತ್ತರ ಭಾರತ ಪ್ರವಾಸದಲ್ಲಿದ್ದಾರೆ. ಪೇಜಾವರ ಶ್ರೀಗಳು ಪ್ರವಾಸದಲ್ಲಿ ಉತ್ತರಪ್ರದೇಶದ ಅಯೋಧ್ಯೆಯಲ್ಲಿರುವ ಪೇಜಾವರ ಮಠಕ್ಕೆ ತೆರಳಿದ್ದು, ಅಲ್ಲಿಂದ ಲಕ್ನೋದಲ್ಲಿರುವ ಮುಖ್ಯಮಂತ್ರಿಗಳ ನಿವಾಸಕ್ಕೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಶಿಷ್ಯೆ ಕೇಂದ್ರ ಸಚಿವೆ ಉಮಾಭಾರತಿ ಉಪಸ್ಥಿತರಿದ್ದರು.