Connect with us

DAKSHINA KANNADA

ಪಠ್ಯ ಪುಸ್ತಕದಲ್ಲಿ ಯೋಧರ ಅವಮಾನ, ಮಂಗಳೂರು ವಿ.ವಿ. ವಿರುದ್ಧ ಹೆಚ್ಚುತ್ತಿರುವ ಆಕ್ರೋಶ…..

ಪುತ್ತೂರು, ಅಗಸ್ಟ್ 12,ಮಂಗಳೂರು ವಿಶ್ವ ವಿದ್ಯಾನಿಯದ ಪ್ರಥಮ ಬಿ.ಸಿ.ಎ ವಿಭಾಗದ ಕನ್ನಡ ಪಠ್ಯ ಪುಸ್ತಕದಲ್ಲಿ ಸೈನಿಕರ ಬಗ್ಗೆ ಅವಮಾನಕಾರಿ ಲೇಖನ ಪ್ರಕಟಿಸಿರುವುದನ್ನು ವಿರೋಧಿಸಿ ಹಾಗೂ ವಿಶ್ವ ವಿದ್ಯಾನಿಲಯ ಕೂಡಲೇ ಈ ಪುಸ್ತಕವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಪುತ್ತೂರಿನಲ್ಲಿ ಪ್ರತಿಭಟನೆ ನಡೆಸಿತು. ಪುತ್ತೂರು ವಿವೇಕಾನಂದ ಕಾಲೇಜಿನ ವಿವೇಕಾನಂದ ಪ್ರತಿಮೆಯ ಮುಂಭಾಗದಲ್ಲಿ ಸೇರಿದ ಎಬಿವಿಪಿ ಕಾರ್ಯಕರ್ತರು ಲೇಖನವನ್ನು ಬರೆದ ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಲೇಖನವನ್ನು ಪಠ್ಯ ಪುಸ್ತಕದಲ್ಲಿ ಪ್ರಕಟಿಸಿದ ಮಂಗಳೂರು ವಿಶ್ವ ವಿದ್ಯಾನಿಲಯದ ವಿರುದ್ಧವೂ ಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿದ್ಯಾರ್ಥಿ ಮುಖಂಡರು ಬರಗೂರು ರಾಮಚಂದ್ರಪ್ಪರಂತ ಸಾಹಿತಿಗಳು ನಿರಂತರವಾಗಿ ಯೋಧರ ವಿರುದ್ಧ ಅವಹೇಳನಕಾರಿ ಮಾತುಗಳನ್ನಾಡುತ್ತಿದ್ದು, ಇಂಥವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಿದೆ. ಆಯಕಟ್ಟಿನ ಸ್ಥಳದಲ್ಲಿ ಕುಳಿತು ದೇಶಕ್ಕಾಗಿ ತನ್ನ ಪ್ರಾಣವನ್ನು ಪಣಕ್ಕಿಟ್ಟು ಗಡಿ ಕಾಯುವ ಸೈನಿಕನ ವಿರುದ್ಧ ಬರೆಯುವುದು ಇಂಥ ಸಾಹಿತಿಗಳಿಗೆ ಸುಲಭವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪುಸ್ತಕ ವಿವಾದ , ಹೆಚ್ಚುತ್ತಿರುವ ಹೋರಾಟ.

ಮಂಗಳೂರು ವಿ.ವಿ ಪ್ರಸಾರಾಂಗ ವಿಭಾಗ ಪ್ರಸಕ್ತ ಸಾಲಿನ ಪ್ರಥಮ ಬಿ.ಸಿ.ಎ ವಿಭಾಗದ ಕನ್ನಡ ಪಠ್ಯ ಪುಸ್ತಕದಲ್ಲಿ ಬರಗೂರು ರಾಮಚಂದ್ರಪ್ಪರ ಯುದ್ದ ಒಂದು ಉದ್ಯಮ ಎನ್ನುವ ಲೇಖನವನ್ನು ಪ್ರಕಟಿಸಿದ್ದು, ಇದರಲ್ಲಿ ಲೇಖಕರು ತನ್ನ ಸ್ನೇಹಿತ ಯುದ್ಧದ ಬಗ್ಗೆ ಹಾಗೂ ಸೈನಿಕರ ಬಗ್ಗೆ ಹೇಳಿದ ಮಾತುಗಳನ್ನು ಬರೆದಿದ್ದಾರೆ. ಗಡಿ ಕಾಯುವ ಸೈನಿಕರು ಅತ್ಯಾಚಾರದಂತಹ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದು ಸೈನಿಕರಿಗೆ ಅವಮಾನವಾಗುವಂತೆ ವಿಚಾರಗಳು ಈ ಲೇಖನದಲ್ಲಿದೆ.

ಪಠ್ಯ ಪುಸ್ತಕದಲ್ಲಿ ಇಂಥ ವಿಚಾರವನ್ನು ಪ್ರಕಟಿಸಿರುವುದನ್ನು ಖಂಡಿಸಿ ಇದೀಗ ಜಿಲ್ಲೆಯಾದ್ಯಂತ ಪ್ರತಿಭಟನೆಗಳು, ಹೋರಾಟಗಳ ಕಾವು ಹೆಚ್ಚುತ್ತಿದೆ. ಕರಾವಳಿ ಸಾಂಸ್ಕೃತಿಕ ಪರಿಷತ್ ಈಗಾಗಲೇ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದು, ಮನವಿಯಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಪಠ್ಯ ಪುಸ್ತಕ ಸಮಿತಿ ವಿರುದ್ಧ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದೆ. ಪುತ್ತೂರು ಮಾಜಿ ಸೈನಿಕ ಸಂಘವೂ ಲೇಖನವನ್ನು ಖಂಡಿಸಿದ್ದು, ಪಠ್ಯದಿಂದ ಲೇಖನವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಇದೀಗ ಪ್ರತಿಭಟನೆಯ ಹಾದಿ ಹಿಡಿದಿದ್ದು, ಮಂಗಳೂರು ವಿಶ್ವ ವಿದ್ಯಾನಿಲಯ ಈ ಬಗ್ಗೆ ಕ್ರಮ ಕೈಗೊಳ್ಳದೇ ಇದ್ದಲ್ಲಿ ಹೋರಾಟ ತೀವೃಗೊಳಿಸುವ ಎಚ್ಚರಿಕೆಯನ್ನೂ ನೀಡಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *