Connect with us

DAKSHINA KANNADA

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರ ಅಭಿವೃದ್ಧಿಯ ನಡೆ, ತಿರುಗಿಬಿದ್ದ ಅರ್ಚಕರಿಂದ ಪ್ರಸಾದಕ್ಕೆ ತಡೆ…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರ ಅಭಿವೃದ್ಧಿಯ ನಡೆ, ತಿರುಗಿಬಿದ್ದ ಅರ್ಚಕರಿಂದ ಪ್ರಸಾದಕ್ಕೆ ತಡೆ…

ಮಂಗಳೂರು, ಫೆಬ್ರವರಿ 08: ರಾಜ್ಯದ ಅತೀ ಶ್ರೀಮಂತ ದೇವಸ್ಥಾನವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರಿಗೆ ಅರ್ಚಕರು ಪ್ರಸಾದ್ ನೀಡಲು ಹಿಂದೇಟು ಹಾಕುತ್ತಿರುವ ವಿಚಾರ ಇದೀಗ ವಿವಾದಕ್ಕೆ ಕಾರಣವಾಗಿದೆ.

ಕ್ಷೇತ್ರದಲ್ಲಿ ವಿಶೇಷ ಪೂಜೆ, ಉತ್ಸವಗಳು ಇರುವ ಸಂದರ್ಭದಲ್ಲಿ ದೇವರಿಗೆ ಪೂಜಾ ಪುನಸ್ಕಾರಾಧಿಗಳು ನಡೆದ ಬಳಿಕ ದೇವರ ಪ್ರಸಾದವನ್ನು ಪ್ರಥಮವಾಗಿ ದೇವಸ್ಥಾನದ ಮುಖ್ಯಸ್ಥರಿಗೆ ನೀಡುವ ಪರಿಪಾಠ ಕಳೆದ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲಿ ಸರಕಾರದಿಂದ ನಾಮ ನಿರ್ದೇಶನಗೊಂಡ ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಇದ್ದಲ್ಲಿ ಈ ಗೌರವ ಮಂಡಳಿಯ ಅಧ್ಯಕ್ಷನಿಗೆ ಸಲ್ಲುವಂತಹುದು.

ಒಂದು ವೇಳೆ ವ್ಯವಸ್ಥಾಪನಾ ಮಂಡಳಿ ಇಲ್ಲದೇ ಹೋದ ಪಕ್ಷದಲ್ಲಿ ಆ ಗೌರವ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸಲ್ಲುವಂತಹುದು.

ಅಲ್ಲದೆ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡದ ದೇವಸ್ಥಾನಗಳಲ್ಲಿ ದೇವಸ್ಥಾನದ ಆಡಳಿತ ಮುಕ್ತೇಸರರಿಗೆ ಈ ಗೌರವ ಸಲ್ಲುವುದು ಸಾಮಾನ್ಯವಾಗಿ ತಿಳಿದ ಸಂಗತಿಯಾಗಿದೆ.

ಆದರೆ ಕುಕ್ಕೆ ಸುಬ್ರಮಣ್ಯದಲ್ಲಿ ಹೊಸದಾಗಿ ಅಸ್ತತ್ವಕ್ಕೆ ಬಂದ ವ್ಯವಸ್ಥಾಪನಾ ಮಂಡಳಿಯ ಅಧ್ಯಕ್ಷರಾದ ನಿತ್ಯಾನಂದ ಮುಂಡೋಡಿಯವರಿಗೆ ಈ ಗೌರವ ಇದೀಗ ಸಲ್ಲುತ್ತಿಲ್ಲ.

ಕಳೆದ ಕಿರುಷಷ್ಠಿ ಸಂದರ್ಭದಲ್ಲಿ ದೇವರ ಜಳಕದ ಬಳಿಕ ಮಂಟಪ ಪೂಜೆಯಾಗಿ ದೇವರಿಗೆ ಪೂಜೆ ಸಲ್ಲಿಸಲಾಗುತ್ತದೆ.

ಈ ಪೂಜೆಯ ಪ್ರಸಾದವನ್ನು ಪ್ರಥಮವಾಗಿ ದೇವಸ್ಥಾನದ ಮುಖ್ಯಸ್ಥರಿಗೆ ಕೊಡಬೇಕಾಗಿರುವುದು ಸಂಪ್ರದಾಯ.

ಆದರೆ ಕ್ಷೇತ್ರದ ಅರ್ಚಕರು ಈ ರೀತಿ ಮಾಡದೆ ಪ್ರಸಾದವನ್ನು ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಿರುವುದು ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರು ಸೇರಿದಂತೆ ಸದಸ್ಯರಿಗೆ ಭಾರಿ ಮುಜುಗರವನ್ನೂ ಉಂಟುಮಾಡಿದೆ.

ಈ ಬಗ್ಗೆ ವ್ಯವಸ್ಥಾಪನಾ ಮಂಡಳಿ ಸದಸ್ಯರು ಅರ್ಚಕರ ಹಾಗೂ ಕಾರ್ಯನಿರ್ವಾಹಣಾಧಿಕಾರಿಗಳ ಗಮನಕ್ಕೆ ತಂದರೂ ಅರ್ಚಕರ ನಿರ್ಧಾರ ಮಾತ್ರ ಬದಲಾಗಿಲ್ಲ.

ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಸ್ಥಾನದಲ್ಲಿ ಯಾರು ಕೂತರೂ ಆ ಸ್ಥಾನಕ್ಕೆ ಗೌರವ ಸಲ್ಲಿಸಬೇಕಾಗಿರುವುದು ಧರ್ಮವಾಗಿದೆ.

ಈ ಧರ್ಮವನ್ನು ಮುರಿಯುವಂತಹ ಕೆಲಸವನ್ನು ದೇವಸ್ಥಾನದ ಅರ್ಚಕರು ಮಾಡುತ್ತಿದ್ದಾರೆ ಎನ್ನುವ ಆರೋಪ ಇದೀಗ ವ್ಯವಸ್ಥಾಪನಾ ಮಂಡಳಿ ಸದಸ್ಯರಿಂದ ಕೇಳಿ ಬರುತ್ತಿದೆ.

ದೇವಸ್ಥಾನದಲ್ಲಿ ಇತ್ತೀಚಿನ ದಿನಗಳಲ್ಲಿ ಅಶ್ಲೇಷ ಬಲಿ ಪೂಜೆಗೆ ಹೆಚ್ಚಿನ ಒತ್ತಡವಿದ್ದ ಕಾರಣ ಈ ಪೂಜೆಯನ್ನು ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲೂ ವಿಸ್ತರಿಸಲು ಅಧ್ಯಕ್ಷರು ತೀರ್ಮಾನಿಸಿದ್ದರು.

ಈ ವಿಚಾರವಾಗಿ ಅರ್ಚಕರು ಹಾಗೂ ಅಧ್ಯಕ್ಷರ ನಡುವೆ ಮನಸ್ತಾಪ ಉಂಟಾಗಿದೆ.

ಅಲ್ಲದೆ ಪ್ರಸ್ತುತ ಆಶ್ಲೇಷ ಪೂಜೆ ನೆರವೇರಿಸುವ ಸ್ಥಳವೂ ಇಕ್ಕಟ್ಟಾಗಿದ್ದು, ಬೇರೊಂದು ಸ್ಥಳಕ್ಕೆ ಸ್ಥಳಾಂತರಿಸಲೂ ಅಧ್ಯಕ್ಷರು ಯೋಜನೆ ಹಾಕಿಕೊಂಡಿದ್ದರು.

ಆದರೆ ಈ ವಿಚಾರವಾಗಿ ಅರ್ಚಕರು ಅಧ್ಯಕ್ಷರಲ್ಲಿ ಮುನಿಸಿಕೊಂಡಿದ್ದರು ಎನ್ನಲಾಗಿದೆ.

ಕ್ಷೇತ್ರದಲ್ಲಿ ಆಶ್ಲೇಷ ಪೂಜೆ ನಡೆಯುವ ಸ್ಥಳದಲ್ಲಿ ಪೂಜೆ ನೆರವೇರಿಸುವ ಭಕ್ತನಿಗೆ ಹಾಗೂ ಆತನ ಕುಟುಂಬಸ್ಥರಿಗೆ ಸರಿಯಾಗಿ ಪೂಜೆ ನೋಡುವ ಅವಕಾಶವಿಲ್ಲದ ಕಾರಣ ಈಗಿನ ಸ್ಥಳವನ್ನು ಬದಲಾಯಿಸಿ, ಆಶ್ಲೇಷ ಪೂಜೆಗಾಗಿ ಬೇರೊಂದು ಜಾಗವನ್ನೂ ಆಯ್ಕೆ ಮಾಡಿದ್ದರು.

ಇದು ದೇವಸ್ಥಾನದ ಒಳಗಿರುವ ಅರ್ಚಕರ ಒಳ ಆದಾಯಕ್ಕೆ ಕುತ್ತು ತರಲಿದೆ ಎನ್ನುವ ಕಾರಣಕ್ಕಾಗಿ ಈ ಯೋಜನೆಗೆ ತಮ್ಮ ವಿರೋಧ ವ್ಯಕ್ತಪಡಿಸುವುದರ ಜೊತೆಗೆ ಸಂಜೆ ಸಮಯದಲ್ಲೂ ಆಶ್ಲೇಷ ಪೂಜೆ ನೆರವೇರಿಸುವುದಕ್ಕೂ ಮೀನ ಮೇಷ ಎಣಿಸುತ್ತಿದ್ದಾರೆ ಎನ್ನುವ ವಿಚಾರವೂ ಬೆಳಕಿಗೆ ಬಂದಿದೆ.

ದೇವಸ್ಥಾನದಲ್ಲಿ ಮೂಲಭೂತ ವ್ಯವಸ್ಥೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಅರ್ಚಕ ವರ್ಗಕ್ಕೆ ವಿರುದ್ಧವಾಗಿ ಕಾರ್ಯಾಚರಣೆ ನಡೆಸಿದ ಹಿನ್ನಲೆಯಲ್ಲಿಯೇ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷರಿಗೆ ದೇವರ ಪ್ರಸಾದವನ್ನು ನೀಡುವಲ್ಲಿ ತಾರತಮ್ಯ ಎಸಗಲಾಗಿದೆ ಎನ್ನುವ ಆರೋಪಗಳೂ ಇದೀಗ ಕೇಳಿ ಬರುತ್ತಿದೆ.

ದೇವಸ್ಥಾನದ ವ್ಯವಸ್ಥಾಪನಾ ಮಂಡಳಿ ಅಧ್ಯಕ್ಷ ಹುದ್ದೆಗೆ ತನ್ನದೇ ಆದ ಗೌರವವಿದ್ದು, ಯಾರೇ ವ್ಯಕ್ತಿ ಆ ಸ್ಥಾನದಲ್ಲಿ ಕುಳಿತರೂ ಆ ಸ್ಥಾನಕ್ಕೆ ನೀಡುವ ಗೌರವ ನೀಡಬೇಕು ಎನ್ನುವ ಮಾತೂ ಕೇಳಿ ಬರುತ್ತಿದೆ.

ಮಾತೆತ್ತಿದರೆ ಸಂಪ್ರದಾಯವೆನ್ನುವ ಈ ಅರ್ಚಕರು ತಮಗೆ ಬೇಕಾದ ಸಂದರ್ಭದಲ್ಲಿ ಎಲ್ಲಾ ಸಂಪ್ರದಾಯಗಳನ್ನು ಮೀರುತ್ತಿರುವ ಅಂಶವನ್ನೂ ಇಲ್ಲಿ ಗಮನಿಸಬೇಕಿದೆ ಎನ್ನುತ್ತಾರೆ ವ್ಯವಸ್ಥಾಪನಾ ಮಂಡಳಿ ಸದಸ್ಯರು.

ಈ ವಿವಾದದ ನಡುವೆ ವ್ಯವಸ್ಥಾಪನಾ ಮಂಡಳಿ ಈ ವಿಚಾರವನ್ನು ಸರಕಾರದ ಗಮನಕ್ಕೂ ತರಲು ಸಿದ್ಧತೆ ನಡೆಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *