FILM
ಕತ್ತಲೆ ಕೋಣೆ ಶೂಟಿಂಗ್ ವೇಳೆ ನಡೆದ ಹಾರರ್ ಘಟನೆ
ಕತ್ತಲೆ ಕೋಣೆ ಶೂಟಿಂಗ್ ವೇಳೆ ನಡೆದ ಹಾರರ್ ಘಟನೆ
ಉಡುಪಿ ಡಿಸೆಂಬರ್ 21: ಕರಾವಳಿಯ ಕಲಾವಿದರು ಸೇರಿ ‘ಕತ್ತಲೆ ಕೋಣೆ’ ಎನ್ನುವ ನೈಜ ಕಥೆ ಆಧಾರಿತ ಹಾರರ್ ಸಿನೆಮಾ ಬರುತ್ತಿದ್ದು, ಇದರ ಶೂಟಿಂಗ್ ವೇಳೆ ಕೆಲವೊಂದು ಅಚ್ಚರಿ ಘಟನೆಗಳು ನಡೆದಿರುವುದಾಗಿ ಚಿತ್ರ ತಂಡ ಹೇಳಿಕೊಂಡಿದೆ. ಕುಂದಾಪುರ ಪರಿಸರದ ದಟ್ಟಾರಣ್ಯ ಪ್ರದೇಶವೊಂದರಲ್ಲಿ ಚಿತ್ರೀಕರಣ ಸಂದರ್ಭದಲ್ಲಿ ಮರದ ಕೊಂಬೆಯೊಂದನ್ನು ಏರಿದ್ದ ಬಾಲಕ ಕೊಂಬೆ ಮುರಿದು ಬಿದ್ದಿದ್ದು , ಬಾಲಕನಿಗೆ ಯಾವುದೇ ಅಪಾಯವಾಗಿರಲಿಲ್ಲ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ತುಣುಕು ವೈರಲ್ ಆಗಿದೆ. ಆದರೆ ಬಾಲಕ ಪವಾಡ ಸದೃಶ ಪಾರಾಗಿರುವುದಾಗಿ ಚಿತ್ರ ತಂಡ ಹೇಳಿದೆ. ಈಗಾಗಲೇ ಚಿತ್ರೀಕರಣ ಅಂತಿಮ ಹಂತದಲ್ಲಿದ್ದು, ಚಿತ್ರೀಕರಣ ವೇಳೆ ಇಂತಹ ಹಲವು ವಿಘ್ನಗಳು ಎದುರಾಗಿತ್ತಾದರೂ ದೇವರು, ದೈವಗಳ ಆಶೀರ್ವಾದದಿಂದ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಯೋಧನಾಗುವ ಕನಸು ಕಂಡ ಮಲೆನಾಡಿನ ಯುವಕನೊಬ್ಬನ ದುರಂತ ಅಂತ್ಯವನ್ನು ಹೇಳುವ ಕಥೆಯನ್ನು ಕತ್ತಲೆ ಕೋಣೆ ಚಿತ್ರ ಹೊಂದಿದ್ದು, ಆತನ ಆತ್ಮವೇ ಈ ಎಲ್ಲಾ ದುರ್ಘಟನೆಗಳಿಗೆ ಕಾರಣವಾಗುತ್ತಿದ್ಯಾ ಅನ್ನೋ ಸಂಶಯವೂ ವ್ಯಕ್ತವಾಗಿದೆ. ಸಂದೇಶ್ ಶೆಟ್ಟಿ ನಿರ್ದೇಶನ ಹಾಗೂ ನಾಯಕತ್ವ ಇರುವ ಈ ಚಿತ್ರದಲ್ಲಿ ಮುಂಬೈಯ ಮಾಡೆಲಿಂಗ್ ಕ್ಷೇತ್ರದ ಚಲುವೆ ಹೈನಿಕಾ ರಾವ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ.