KARNATAKA
ಕಡಿಮೆ ಹಣಕ್ಕೆ ಚಿನ್ನ ಕೊಡಿಸುವುದಾಗಿ 2.48 ಕೋಟಿ ರೂ. ವಂಚನೆ!

ಬೆಂಗಳೂರು: ಚಿನ್ನದ ವ್ಯವಹಾರದಲ್ಲಿ ಹಣ ಹೂಡಿಕೆ ಹಾಗೂ ಕಡಿಮೆ ಮೊತ್ತಕ್ಕೆ ಚಿನ್ನಾಭರಣ ಕೊಡಿಸುವುದಾಗಿ ನಂಬಿಸಿ ದಂಪತಿ ಸೇರಿ ನಾಲ್ವರು ಮಹಿಳೆ ಮತ್ತು ಆಕೆಯ ಸಂಬಂಧಿಕರಿಗೆ ಬರೋಬ್ಬರಿ 2.48 ಕೋಟಿ ರೂ. ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಕೆ.ಆರ್.ಪುರದ ಸಾಯಿ ಲೇಔಟ್ ನಿವಾಸಿ ಅಮರಾವತಿ ಎಂಬವರು ನೀಡಿದ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಕೋಲಾರ ಮೂಲದ ಗೋಪಾಲಕೃಷ್ಣ, ಈತನ ಪತ್ನಿ ರೂಪಾ, ಯಶವಂತಕುಮಾರ್ ಹಾಗೂ ಆಂಧ್ರಪ್ರದೇಶ ಮೂಲದ ರಾಕೇಶ್ ರೆಡ್ಡಿ ಎಂಬವರ ವಿರುದ್ಧ ವಂಚನೆ, ನಂಬಿಕೆ ದ್ರೋಹ ಆರೋಪದಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಏನಿದು ಪ್ರಕರಣ?: ದೂರುದಾರರಾದ ಅಮರಾವತಿ ಕೆ.ಆರ್.ಪುರದ ಸಾಯಿ ಲೇಔಟ್ ನಿವಾಸಿಯಾಗಿದ್ದು, 2024ರ ಮಾರ್ಚ್ನಲ್ಲಿ ಮನೆಯಲ್ಲಿ ಶಾಂತಿ ಪೂಜೆಗಾಗಿ ಆರೋಪಿ ಗೋಪಾಲಕೃಷ್ಣ ಅವರನ್ನು ಕರೆಸಿದ್ದಾರೆ. ಗೋಪಾಲಕೃಷ್ಣ ಜತೆಗೆ ಬಂದಿದ್ದ ಆರೋಪಿ ರಾಕೇಶ್ ರೆಡ್ಡಿ, ಪೂಜೆ ಮುಗಿದ ಬಳಿಕ ನಿಮ್ಮ ಪೂಜೆಯಿಂದಾಗಿ ನಾನು ಶ್ರೀಮಂತನಾಗಿದ್ದೇನೆ ಎಂದು ಗುರುಕಾಣಿಕೆಯಾಗಿ 10-15 ಚಿನ್ನದ ಬಿಸ್ಕೆಟ್ಗಳನ್ನು ಗೋಪಾಲಕೃಷ್ಣನಿಗೆ ನೀಡಿದ್ದಾನೆ. ಈ ವೇಳೆ ಗೋಪಾಲಕೃಷ್ಣ, ಅಮರಾವತಿ ಅವರನ್ನು ರಾಕೇಶ್ ರೆಡ್ಡಿಗೆ ಪರಿಚಯಿಸಿ, ಕಷ್ಟದಲ್ಲಿರುವ ಇವರಿಗೂ ಸಹಾಯ ಮಾಡುವಂತೆ ಸೂಚಿಸಿದ್ದಾನೆ. ಅದಕ್ಕೆ ರಾಕೇಶ್ ರೆಡ್ಡಿ ಒಪ್ಪಿಕೊಂಡಿದ್ದ. ಎರಡು ದಿನಗಳ ಬಳಿಕ ಗೋಪಾಲಕೃಷ್ಣ ಮತ್ತು ರಾಕೇಶ್ ರೆಡ್ಡಿ, ಅಮರಾವತಿ ಮನೆಗೆ ಬಂದಿದ್ದಾರೆ. ನಾವಿಬ್ಬರೂ ಪಾಲುದಾರಿಕೆಯಲ್ಲಿ ಚಿನ್ನದ ವ್ಯವಹಾರ ಮಾಡುತ್ತಿದ್ದೇವೆ. ನಮ್ಮ ಬಳಿ 300 ಕೋಟಿ ರೂ. ಅಮೆರಿಕನ್ ಡಾಲರ್ ಇದ್ದು, ಕೆ.ಜಿ. ಲೆಕ್ಕದಲ್ಲಿ ನಮಗೆ ಚಿನ್ನ ಸಿಗುತ್ತದೆ. ನಾವು ಕೇವಲ 4 ಸಾವಿರ ರೂ.ಗೆ ಪ್ರತಿ ಗ್ರಾಂ ಚಿನ್ನ ನೀಡುತ್ತೇವೆ. ನಮ್ಮನ್ನು ನಂಬಿ ನೀವೂ ನಮ್ಮ ಚಿನ್ನದ ವ್ಯವಹಾರದಲ್ಲಿ ಹೂಡಿಕೆ ಮಾಡಿದರೆ, ಕಡಿಮೆ ಬಲೆಗೆ ಚಿನ್ನ ಕೊಡುವುದಾಗಿ ನಂಬಿಸಿದ್ದಾರೆ.
ಬಳಿಕ ಇಬ್ಬರು ಆರೋಪಿಗಳು ಅಮರಾವತಿ ಅವರ ಪುತ್ರನ ಸಮ್ಮುಖದಲ್ಲಿ ಮಲ್ಲೇಶ್ವರದ ಜ್ಯೂವೆಲ್ಲರಿ ಅಂಗಡಿಯಲ್ಲಿ ಒಂದು ಚಿನ್ನದ ಬಿಸ್ಕತ್ ಮಾರಾಟ ಮಾಡಿ ಹಣ ಪಡೆದು ಅಮರಾವತಿ ಅವರಿಗೆ ನಂಬಿಕೆ ಬರುವಂತೆ ಮಾಡಿದ್ದಾರೆ. ಬಳಿಕ ಅಮರಾವತಿ, ಚಿನ್ನದ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಲು ಒಪ್ಪಿದ್ದಾರೆ. ಅದರಂತೆ 2024ರ ಏ.20ರಿಂದ ಅ.30ರ ನಡುವೆ ಆರೋಪಿಗಳಿಗೆ ಒಟ್ಟು 1.39 ಕೋಟಿ ರೂ. ನೀಡಿದ್ದಾರೆ. ಬಳಿಕ ಅಮರಾವತಿ ತಮ್ಮ ಸಂಬಂಧಿಕ ಗಣೇಶ್ಗೂ ವ್ಯವಹಾರದ ಬಗ್ಗೆ ತಿಳಿಸಿದ್ದಾರೆ. ನಂತರ ಗಣೇಶ್ ಹಾಗೂ ಅವರ ಕುಟುಂಬದವರು ಹೂಡಿಕೆ ನೆಪದಲ್ಲಿ ಆರೋಪಿಗಳಿಗೆ ಒಟ್ಟು 1.9 ಕೋಟಿ ರೂ. ನೀಡಿದ್ದಾರೆ.
ಜೀವ ಬೆದರಿಕೆ: ಕೆಲ ದಿನಗಳ ಬಳಿಕ ಈ ಇಬ್ಬರು ಆರೋಪಿಗಳು ಅಮರಾವತಿ ಮತ್ತು ಅವರ ಸಂಬಂಧಿಕರಿಗೆ ಯಾವುದೇ ಚಿನ್ನ ನೀಡಿಲ್ಲ. ಈ ಬಗ್ಗೆ ಪ್ರಶ್ನೆ ಮಾಡಿದಾಗ ನಮ್ಮ ಚಿನ್ನ ಕಸ್ಟಮ್ಸ್ನಲ್ಲಿ ಸಿಲುಕಿದೆ ಎಂದು ಸಬೂಬು ಹೇಳಿದ್ದಾರೆ. ಬಳಿಕ ಗೋಪಾಲಕೃಷ್ಣ ಅವರ ಮನೆಗೆ ತೆರಳಿ ಚಿನ್ನದ ಬಗ್ಗೆ ವಿಚಾರಿಸಿದಾಗ ಆತನ ಪತ್ನಿ ರೂಪಾ ಮತ್ತು ಪುತ್ರ ಯಶವಂತ ಕುಮಾರ್ ಹಣ ಕೇಳಲು ಮನೆ ಬಳಿ ಬಂದರೆ ಅಥವಾ ದೂರು ನೀಡಿದರೆ ಜೀವಂತವಾಗಿ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಅಮರಾವತಿ ದೂರಿನಲ್ಲಿ ಆರೋಪಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ವಿರುದ್ಧ ತನಿಖೆ ಮುಂದುವರಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು