DAKSHINA KANNADA
ಎಸೈ ಖಾದರ್ ವಿರುದ್ಧ ದೂರು ನೀಡಿದ ವ್ಯಕ್ತಿ ನ್ಯಾಯಾಲಯದಲ್ಲಿ ಅಸ್ವಸ್ಥ.
ಎಸೈ ಖಾದರ್ ವಿರುದ್ಧ ದೂರು ನೀಡಿದ ವ್ಯಕ್ತಿ ನ್ಯಾಯಾಲಯದಲ್ಲಿ ಅಸ್ವಸ್ಥ.
ಪುತ್ತೂರು,ಅಕ್ಟೋಬರ್ 7: ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯ ಎಸ್.ಐ. ಅಬ್ದುಲ್ ಖಾದರ್ ವಿರುದ್ಧ ನ್ಯಾಯಾಲಯದಲ್ಲಿ ಖಾಸಗಿ ದೂರು ಸಲ್ಲಿಸಿದ ವ್ಯಕ್ತಿ ಇಂದು ವಿಚಾರಣೆಗೆ ಹಾಜರಾಗುವ ಸಂದರ್ಭದಲ್ಲಿ ಅಸೌಖ್ಯದಿಂದ ಬಳಲಿ ಬಿದ್ದ ಘಟನೆ ನಡೆದಿದೆ. ಎಸೈ ಅಬ್ದುಲ್ ಖಾದರ್ ಕಳೆದ ವರ್ಷ ಪುತ್ತೂರು ನಗರ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಮಯದಲ್ಲಿ ತನ್ನ ಮೇಲೆ ದೈಹಿಕ ಹಿಂಸೆ ನಡೆಸಿದ್ದರು ಎನ್ನುವ ಆರೋಪದ ಹಿನ್ನಲೆಯಲ್ಲಿ ಈ ದೂರು ದಾಖಲಿಸಲಾಗಿತ್ತು.ಪುತ್ತೂರು ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಕಬಕ ಎಂಬಲ್ಲಿ ಒಂದು ವರ್ಷದ ಹಿಂದೆ ನಡೆದ ಪ್ರಕರಣ ಇದಾಗಿದೆ. ಕಬಕ ಪರಿಸರದ ಕೆಲವು ವ್ಯಕ್ತಿಗಳು ಅಂಗವಿಕಲರಾದ ಅಂಡ್ರ್ಯೂ ಪಾಲ್ ಎಂಬ ವ್ಯಕ್ತಿಗೆ ಹಲ್ಲೆ ನಡೆಸುತ್ತಿದ್ದರು ಎನ್ನುವ ಕಾರಣಕ್ಕೆ ಅಂಡ್ರ್ಯೂ ಪಾಲ್ ನಗರ ಪೋಲೀಸರಿಗೆ ದೂರು ಹೋಗಿದ್ದರು. ಈ ಸಂದರ್ಭದಲ್ಲಿ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಅಬ್ದುಲ್ ಖಾದರ್ ತನ್ನ ಕುತ್ತಿಗೆ ಹಿಡಿದು ತಳ್ಳಿದ್ದಲ್ಲದೆ, ಕಾಲಿನಿಂದ ಒದ್ದು ದೈಹಿಕ ಹಿಂಸೆ ನೀಡಿದ್ದರು ಎಂದು ಅಂಡ್ರ್ಯೂ ಪಾಲ್ ಆರೋಪಿಸಿದ್ದಾರೆ. ಇನ್ನು ಮುಂದೆ ಠಾಣೆಗೂ ಬಾರದಂತೆ ಬೆದರಿಕೆಯನ್ನೂ ಒಡ್ಡಿದ್ದರು ಎಂದು ಪಾಲ್ ಆರೋಪಿಸಿದ್ದಾರೆ. ಈ ಸಂಬಂಧ ಪುತ್ತೂರು ನ್ಯಾಯಾಲಯದಲ್ಲಿ ಆಂಡ್ರ್ಯೂ ಪಾಲ್ ಎಸೈ ವಿರುದ್ಧ ಖಾಸಗಿ ದೂರನ್ನೂ ಸಲ್ಲಿಸಿದ್ದರು. ಇಂದು (ಅಕ್ಟೋಬರ್ 7) ದೂರಿನ ವಿಚಾರಣೆಗಾಗಿ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ಕಾಲಿನ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ. ತನ್ನ ಈ ಅವಸ್ಥೆಗೆ ಎಸ್.ಐ ಅಬ್ದುಲ್ ಖಾದರ್ ಕಾರಣ ಎಂದು ಅವರು ಇದೇ ಸಂದರ್ಭದಲ್ಲಿ ಸ್ಥಳದಲ್ಲಿ ಉಪಸ್ಥಿತರಿದ್ದ ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ನಡೆದಾಡಲು ಸಾಧ್ಯವಾಗದೆ ಕೋರ್ಟ್ ಆವರಣದಲ್ಲೇ ಬಿದ್ದಿದ್ದ ಅಂಡ್ರ್ಯೂ ಪಾಲ್ ಅವರನ್ನು ಅವರ ಪರ ವಾದಿಸುವ ವಕೀಲ ಹಾಗೂ ಪೋಲೀಸ್ ಸಿಬ್ಬಂದಿಯೋರ್ವರು ಆಸ್ಪತ್ರೆಗೆ ಸಾಗಿಸುವುದಾಗಿ ನ್ಯಾಯಾಲಯದ ಆವರಣದಿಂದ ಕೊಂಡೊಯ್ದಿದ್ದಾರೆ. ಠಾಣಾಧಿಕಾರಿ ವಿರುದ್ಧ ನ್ಯಾಯಾಲಯದಲ್ಲಿ ಆಂಡ್ರ್ಯೂ ಪಾಲ್ ಖಾಸಗಿ ದೂರು ಸಲ್ಲಿಸಿರುವುದು ಇಂದು ನ್ಯಾಯಾಲಯದಲ್ಲಿ ನಡೆದ ಘಟನೆಯಿಂದ ಸಾರ್ವಜನಿಕರ ಗಮನಕ್ಕೆ ಬಂದಿದೆ.ತನ್ನ ಮೇಲೆ ಹಲವು ಆರೋಪಗಳನ್ನು ಈಗಾಗಲೇ ಹೊತ್ತುಕೊಂಡಿರುವ ಸಂಪ್ಯ ಠಾಣಾಧಿಕಾರಿ ಇದೀಗ ಮತ್ತೊಂದು ಆರೋಪದಡಿ ಸಿಕ್ಕಿ ಬಿದ್ದಿದ್ದಾರೆ. ಒಬ್ಬ ಅಂಗವಿಕಲನೆಂದೂ ನೋಡದೆ ಎಸೈ ಖಾದರ್ ನಡೆಸಿದ ದೌಜನ್ಯವನ್ನು ಕಂಡು ಕೋರ್ಟ್ ಆವರಣದಲ್ಲಿದ್ದ ಮಂದಿ ಖಾದರ್ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದರು. ಇದೇ ಸಂದರ್ಭದಲ್ಲಿ ನ್ಯಾಯಾಲಯದಲ್ಲಿದ್ದ ಕೆಲವು ವಕೀಲರು ಈ ವ್ಯಕ್ತಿ ಪ್ರತಿ ಬಾರಿಯೂ ಇದೇ ರೀತಿ ಮಾಡುತ್ತಿರುತ್ತಾನೆ ಎನ್ನುವ ಮಾಹಿತಿಯನ್ನೂ ನೀಡಿದ್ದಾರೆ.