DAKSHINA KANNADA
ಆಳ್ವಾಸ್‍ನಲ್ಲಿ `ನಿಂಗೋಲ್ ಚಕೋಬ’ ಮಣಿಪುರಿ ಹಬ್ಬ
ಆಳ್ವಾಸ್‍ನಲ್ಲಿ `ನಿಂಗೋಲ್ ಚಕೋಬ’ ಮಣಿಪುರಿ ಹಬ್ಬ
ಮೂಡುಬಿದಿರೆ ಅಕ್ಟೋಬರ್ 24:ಮಣಿಪುರದಿಂದ ಹೊರಗೆ ಓದುವ ವಿದ್ಯಾರ್ಥಿಗಳ ಬಗ್ಗೆ ಮಣಿಪುರದ ಜನರಿಗೆ ಒಂದು ರೀತಿಯ ನಕಾರಾತ್ಮಕ ನಿಲುವಿದೆ. ಇತರ ರಾಜ್ಯಗಳಲ್ಲಿ ಓದುತ್ತಿರುವ ಮಣಿಪುರಿ ಮಕ್ಕಳು ತಮ್ಮ ಸಂಸ್ಕೃತಿಯನ್ನು ಅರಿಯಲಾರರು ಎಂಬುದು ಈ ನಿಲುವಿನ ಹಿಂದಿರುವ ಕಲ್ಪನೆ.
ಆದರೆ ಆಳ್ವಾಸ್‍ನಲ್ಲಿ ಆಯೋಜಿಸಿರುವ ಮಣಿಪುರಿ ಹಬ್ಬ ನಮ್ಮ ಮಣಿಪುರಿ ಸಂಸ್ಕೃತಿಯನ್ನು ಚಿತ್ರಿಸಿ ಕೊಡುವುದಲ್ಲದೆ ಅವರ ಬಗ್ಗೆ ಇರುವ ಪೂರ್ವಾಗ್ರಹ ಪೀಡಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುತ್ತದೆ” ಎಂದು ಮಣಿಪಾಲ ಕಾಲೇಜಿನ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಎಲ್ಸಾ ಸನಾತೊಂಬ ದೇವಿ ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ಮಿಜಾರಿನ ಎಐಇಟಿ ಕ್ಯಾಂಪಸ್‍ನಲ್ಲಿ ಆಯೋಜಿಸಿದ್ದ ಮಣಿಪುರಿ ಹಬ್ಬ `ನಿಂಗೋಲ್ ಚಕೋಬ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಣಿಪುರ ಶಿಕ್ಷಣ ಸಚಿವರಾದ ಥೋಕೋಮ್ ರಾಧೆಶಾಮ್ ಸಿಂಗ್ ವಿಡಿಯೋ ತುಣುಕು ಕಳುಹಿಸುವ ಮೂಲಕ ಹಬ್ಬದ ಆಚರಣೆಯನ್ನು ಬೆಂಬಲಿಸಿದ್ದಲ್ಲದೆ, ಆಳ್ವಾಸ್ ಕಾಲೇಜಿನಲ್ಲಿ ಮಣಿಪುರದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಮತ್ತು ವಸತಿ ನೀಡುತ್ತಿರುವುದಕ್ಕೆ ಕಾಲೇಜಿನ ಮುಖ್ಯಸ್ಥರಾದ ಮೋಹನ ಆಳ್ವರಿಗೆ ಕೃತಜ್ಞತೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸಂಸ್ಕೃತಿ ವಿನಿಮಯ ಎರಡೂ ಕಡೆಯಿಂದ ಸಾಧ್ಯವಾಗಬೇಕು. ಇಂತಹ ವಿನಿಮಯ ವಿಭಿನ್ನ ಸಂಸ್ಕೃತಿಯ ಜನರ ನಡುವೆ ಉತ್ತಮ ಬಾಂಧವ್ಯ ಬೆಸೆಯುತ್ತದೆ. ಈ ನಿಟ್ಟಿನಲ್ಲಿ ವಿಭಿನ್ನ ಪ್ರದೇಶಗಳ ಹಬ್ಬಗಳು, ಸಂಸ್ಕೃತಿಯ ಆಚರಣೆ ಹೆಚ್ಚು ಸೂಕ್ತವಾದವು ಎಂದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ನಾಟಕ, ನೃತ್ಯ, ಸಂಗೀತ, ಸಾಹಸ ಪ್ರದರ್ಶನ ನಡೆಯಿತು. ವಿಶೇಷ ಆಕರ್ಷಣೆಯಾಗಿ ಮಣಿಪುರದ ಖಾದ್ಯಗಳಾದ ಛಿಂಜೊ ಉತಿ, ಎರೊಂಬಾ, ಕೊಂಗ್‍ಹೌ, ಹಿಯೊಂಥೊವಾ ಮೊಯ್‍ರಾಂಗುಗಳ್ಳನ್ನೊಳಗೊಂಡ ಅದ್ಧೂರಿ ಭೋಜನವನ್ನು ಏರ್ಪಡಿಸಲಾಗಿತ್ತು. ನಿಂಗೊಲ್ ಚಕೋಬ ಆಚರಣೆಯ ಮೂಲಕ ಮಣಿಪುರ ರಾಜ್ಯದ ಸಂಸ್ಕೃತಿ, ಸಂಪ್ರದಾಯವನ್ನು ಕನ್ನಡಿಗರಿಗೆ ಪರಿಚಯಿಸುವ ಪ್ರಯತ್ನ ನಡೆಯಿತು.