UDUPI
ಅಹಿಂಸಾ ತತ್ವ ಪಾಲನೆಯಿಂದ ವಿಶ್ವಮಾನವರಾಗಿ – ನ್ಯಾಯಾಧೀಶರ ಕರೆ
ಅಹಿಂಸಾ ತತ್ವ ಪಾಲನೆಯಿಂದ ವಿಶ್ವಮಾನವರಾಗಿ – ನ್ಯಾಯಾಧೀಶರ ಕರೆ
ಉಡುಪಿ, ನವೆಂಬರ್ 13:- ಭಾರತದ ಇತಿಹಾಸ, ಭವಿಷ್ಯ ಎಲ್ಲವೂ ಅಹಿಂಸಾ ತತ್ವದ ಮೂಲಕವೇ ನಿಂತಿದೆ. 12ನೇ ಶತಮಾನದ ವಚನಕಾರರಿಂದ ಮೊದಲ್ಗೊಂಡು ಭಾರತ ಸ್ವಾತಂತ್ರ್ಯದ ಇತಿಹಾಸವೂ ಅಹಿಂಸಾ ತತ್ವದ ಆಧಾರದ ಮೇಲೆ ನಿಂತಿದೆ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ವೆಂಕಟೇಶ್ ನಾಯ್ಕ್ ಟಿ ತಿಳಿಸಿದ್ದಾರೆ.
ಅವರು ಸೋಮವಾರ, ಅಂಜಾರುವಿನ ಜಿಲ್ಲಾ ಕಾರಾಗೃಹದಲ್ಲಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಡುಪಿ , ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಉಡುಪಿ, ಕಾರಾಗೃಹ ಇಲಾಖೆ ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ಗಾಂಧೀಜಿ ಮತ್ತು ಅಹಿಂಸೆ ಕುರಿತ ವಿಚಾರ ಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಹಿಂಸೆಗಿರುವ ಶಕ್ತಿ ಹಿಂಸೆಗಿಲ್ಲ
ನಾಗರೀಕ ಸಮಾಜ ಕಾಯಿದೆ ಕಟ್ಟಳೆಗಳ ಜೊತೆಗೆ ನಮ್ಮ ರೀತಿ ನೀತಿಗಳ ಮೇಲೆ ನಿಂತಿದೆ. ಕೆಲವು ಕೆಟ್ಟ ಸಂದರ್ಭದಲ್ಲಿ ಆಲೋಚಿಸದೇ ತೆಗೆದುಕೊಳ್ಳುವ ತಪ್ಪು ನಿರ್ಧಾರಗಳಿಂದ ಅಪರಾಧ ಘಟನೆಗಳು ನಡೆಯುತ್ತವೆ, ಮೂಲತ: ಯಾರೂ ಹಿಂಸಾ ಪ್ರವೃತ್ತಿಯವರಾಗಿರುವುದಿಲ್ಲ, ಇನ್ನೊಬ್ಬನಿಗೆ ಹಿಂಸೆ ನೀಡುವ ಮೊದಲು ಆತನಿಗೂ ತನ್ನಂತೆ ಕೌಟುಂಬಿಕ ಸಂಬಂಧಗಳು ಇವೆ ಎಂಬುದನ್ನು ಅರಿಯಿರಿ, ಮನೆಯಲ್ಲಿ ಗೆದ್ದರೆ ಮಂದಿಯಲ್ಲಿ ಗೆಲ್ಲುತ್ತಾನೆ ಎಂಬ ಮಾತಿದೆ, ಮೊದಲು ತಮ್ಮ ಕುಟುಂಬದಲ್ಲಿ ಪರಿಸರದಲ್ಲಿ ಒಳ್ಳೆಯ ವ್ಯಕ್ತಿಯಾಗಿ ರೂಪುಗೊಳ್ಳಿ ಯಾವುದೇ ಕೆಲಸ ಮಾಡುವಾಗ ಸಾಧಕ ಬಾಧಕಗಳನ್ನು ಗಮನಿಸಿ. ಉತ್ತಮ ಮಾನವೀಯ ಗುಣಗಳನ್ನು ರೂಪಿಸಿಕೊಂಡು ವಿಶ್ವ ಮಾನವರಾಗಿ ಬಾಳಿ ಎಂದು ಕಾರಾಗೃಹವಾಸಿಗಳಿಗೆ ಜಿಲ್ಲಾ ನ್ಯಾಯಾಧೀಶರು ಕರೆ ನೀಡಿದರು.