DAKSHINA KANNADA
ಅಶ್ಲೀಲ ವಿಡಿಯೋ ಫೇಸ್ ಬುಕ್ ಗೆ : ಆರೋಪಿ ಜೈಲಿಗೆ
ಮಂಗಳೂರು , ಆಗಸ್ಟ್ 12 : ಪ್ರೇಯಸಿ ತನಗೆ ಮೋಸಮಾಡಿದಳು ಎಂದು ಆರೋಪಿಸಿ ಆಕೆ ಯೊಂದಿಗೆ ಅನೈತಿಕ ಚಟುವಟಿಕೆ ಯಲ್ಲಿ ತೊಡಗಿದ್ದ ಚಿತ್ರಗಳನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಿದ ಆರೊಪಿಗೆ ಮಾನ್ಯ ನಾಯಾಲಯ ಕಠಿಣ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಸುಳ್ಯ ಆಲೆಟ್ಟಿ ಮೊರಂಗಲ್ಲು ನಿವಾಸಿ ಕುಸುಮಾಧರ್ (30) ಶಿಕ್ಷೆ ಗೊಳಗಾದ ಆರೋಪಿ.
ಕುಸುಮಾಧರ್ ಮತ್ತು ಸುಳ್ಯದ ಯುವತಿಯೋರ್ವಳಿಗೆ ಸ್ಥಳೀಯ ಕಾರ್ಯಕ್ರಮದಲ್ಲಿ ಪರಿಚಯವಾಗಿದ್ದು, ಆತ್ಮೀಯತೆಗೆ ತಿರುಗಿ ದಿನ ಹೋದಂತೆ ಅವರೊಳಗಿನ ಪರಿಚಯ ಪ್ರೇಮಕ್ಕೆ ತಿರುಗಿತ್ತು. ಯುವತಿ ಮನೆಯ ಪಕ್ಕದಲ್ಲೇ ಕೆಲಸಕ್ಕೆ ಹೋಗುತ್ತಿದ್ದ ಕಾರಣ ಬಾಡಿಗೆ ರೂಮ್ ಮಾಡಿ ವಾಸಿಸುತ್ತಿದ್ದಳು. 2013ರ ಎ.14 ರಂದು ಕುಸುಮಾಧರ್ ಆಕೆಯನ್ನು ಭೇಟಿಯಾಗುವ ಉದ್ದೇಶದಿಂದ ಬೆಂಗಳೂರಿನಿಂದ ಯುವತಿಯ ಮನೆಗೆ ಬಂದಿದ್ದ. ಸಂಜೆ ಹೊತ್ತು ಬಸ್ ಇಲ್ಲ ಎಂಬ ನೆಪದಲ್ಲಿ ಆ ರಾತ್ರಿ ಯುವತಿ ರೂಮ್ ನಲ್ಲೇ ಉಳಿದುಕೊಂಡು ಆಕೆಯನ್ನು ಪುಸಲಾಯಿಸಿ ಮದುವೆಯಾಗುವುದಾಗಿ ನಂಬಿಸಿ ರಾತ್ರಿ ವೇಳೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ ಮಾತ್ರವಲ್ಲ ಅತ್ಯಾಚಾರದ ಕೃತ್ಯವನ್ನು ತನ್ನ ಮೊಬೈಲ್ನಲ್ಲಿ ಯುವತಿಗೆ ಗೊತ್ತಾಗ ದಂತೆ ರೆಕಾರ್ಡ್ ಮಾಡಿದ್ದನು. ಈ ಘಟನೆ ನಡೆದು ಕೆಲವು ದಿನಗಳ ಬಳಿಕ ಯುವಕನ ಅಸಲಿ ರೂಪ ಯುವತಿಗೆ ಗೊತ್ತಾಗಿತ್ತು, ಈ ಕಾರಣಕ್ಕಾಗಿ ಆಕೆ ಆತನಿಂದ ದೂರವಿರಲು ಪ್ರಯತ್ನಿಸಿದ್ದಳು. ಇದರಿಂದ ಕೋಪಗೊಂಡ ಕುಸುಮಾಧರ್ ಆಕೆಯ ಬಳಿ . ” ನೀನು 5 ಲಕ್ಷ ರೂ. ಹಣ ನೀಡಬೇಕು, ಇಲ್ಲದಿದ್ದರೆ ನನ್ನತ್ರ ನಿನ್ನ ಅಶ್ಲೀಲ ವಿಡಿಯೋಗಳಿವೆ ಅದನ್ನು ಫೇಸ್ಬುಕ್ಗೆ ಅಪ್ಲೋಡ್ ಮಾಡುತ್ತೇನೆ’ ಎಂದು ಬೆದರಿಕೆ ಹಾಕಿದ್ದನು. ಆದರೆ ಯುವತಿ ಆತನ ಮಾತಿಗೆ ಸೊಪ್ಪು ಹಾಕದ ಕಾರಣ ತೀವ್ರ ಅಸಮಾಧಾನಗೊಂಡ ಕುಸುಮಾಧರ್ 2013ರ ಜೂ.17 ರಂದು “ಮೊರಂಗಲ್ಸನ್ ಪಾಟಾಳಿ’ ಎಂಬ ಹೆಸರಿನಲ್ಲಿ ಫೇಸ್ಬುಕ್ ಅಕೌಂಟ್ ತೆರೆದು ಅದರಲ್ಲಿ ಆಕೆಯ ಅಶ್ಲೀಲ ವೀಡಿಯೋ ತುಣುಕುಗಳನ್ನು ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿದ್ದನು. ಇದು ಯುವತಿಯ ಸಂಬಂಧಿಕರಿಗೆ ಗೊತ್ತಾ ಗಿದ್ದು, ಜೂ.19 ರಂದು ಯುವತಿ ಸುಬ್ರಹ್ಮಣ್ಯ ಠಾಣೆಯಲ್ಲಿ ಕುಸುಮಾಧರ್ ವಿರುದ್ದ ದೂರು ದಾಖಲಿಸಿದ್ದಳು. ಆಗಿನ ಸುಳ್ಯ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ತನಿಖೆ ನಡೆಸಿ ದೋಷಾರೋಪಣ ಪಟ್ಟಿ ಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶ ಡಿ.ಟಿ. ಪುಟ್ಟರಂಗಸ್ವಾಮಿ ಅವರು ಆರೋಪಿಗೆ ಐಪಿಸಿ ಸೆಕ್ಷನ್ 292(2ಎ) ಅನ್ವಯ 6 ತಿಂಗಳು ಕಠಿನ ಸಜೆ ಮತ್ತು 2,000 ರೂ. ದಂಡ ಹಾಗೂ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 67(ಎ) ಅನ್ವಯ 1ವರ್ಷ ಕಠಿನ ಸಜೆ ಮತ್ತು 10,000 ರೂ. ದಂಡ ವಿಧಿಸಿ ಆ. 11ರಂದು ತೀರ್ಪು ನೀಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಬೆಂಗಳೂರಿನ ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ಸೇರಿದಂತೆ 19 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಫೇಸ್ಬುಕ್ ಸಂಸ್ಥೆಯಿಂದ ಆರೋಪಿಯ ಬಗ್ಗೆ ಐಪಿ ದಾಖಲೆ ಮಾಹಿತಿ ಪಡೆಯಲಾಗಿದೆ. ಆರೋಪಿಯ ಮೊಬೈಲ್ ಫೋನ್ಗೆ ಸಂಬಂಧಿಸಿ ಏರ್ಟೆಲ್ ಸಂಸ್ಥೆಯ ನೋಡಲ್ ಆಫೀಸರ್ ಕೂಡ ಸಾಕ್ಷಿ ನುಡಿದಿದ್ದಾರೆ. ಮಾತ್ರವಲ್ಲದೆ ಮೊಬೈಲ್ ಫೋನ್ ಸೆಟ್ ದಾಖಲೆ, ಎಫ್ಎಸ್ಎಲ್ ವರದಿ ಸೇರಿದಂತೆ 26 ದಾಖಲೆಗಳನ್ನು ನ್ಯಾಯಾಲಯ ಪರಿಶೀಲಿಸಿತ್ತು. ಈ ತೀರ್ಪು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡುವವರಿಗೆ ಎಚ್ಚರಿಕೆಯ ಕರೆಗಂಟೆಯಾಗಿದೆ.