DAKSHINA KANNADA
ಅನ್ನ ಕಸಿದ ಹಿಂದೆ ರಾಜಕೀಯ ದ್ವೇಷ- ಶೋಭಾ ಕರಂದ್ಲಾಜೆ
ಮಂಗಳೂರು,ಅಗಸ್ಟ್17: ರಾಜ್ಯ ಸರ್ಕಾರದ ದ್ವೇಷ ರಾಜಕಾರಣದ ಫಲವಾಗಿ ಕಲ್ಲಡ್ಕ ದ ಶಾಲೆಗಳಿಗೆ ಅನುದಾನ ರದ್ದುಗೊಳಿಸಲಾಗಿದ್ದು, ಡಾ.ಕಲ್ಲಡ್ಕ ಪ್ರಭಾಕರ ಭಟ್ ಅವರನ್ನು ಟಾರ್ಗೆಟ್ ಮಾಡುವ ಉದ್ದೇಶವನ್ನಿಟ್ಟು ಸರ್ಕಾರ ಶಾಲಾಮಕ್ಕಳ ಹೊಟ್ಟೆಯ ಮೇಲೆ ರಾಜಕೀಯ ದ್ವೇಷ ಸಾಧಿಸಿದೆ ಎಂದು ಶೋಭಾ ಕರಂದ್ಲಾಜೆ ಆರೋಪಿಸಿದರು .ಕಲ್ಲಡ್ಕ ಶಾಲೆಗಳಿಗೆ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ಕಲ್ಲಡ್ಕ ಶಾಲೆಯ ಮಕ್ಕಳಿಗಾಗಿ ಅಕ್ಕಿ ಭಿಕ್ಷೆ ಪಡೆಯುವ ಬಿಜೆಪಿ ಮಹಿಳಾ ಮೋರ್ಚಾದ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 2001 ರಲ್ಲಿ ಕಾಂಗ್ರೆಸ್ ಸರ್ಕಾರ ಇರುವಾಗಲೇ ದೇವಾಲಯಗಳಿಂದ ಶಾಲೆಗಳಿಗೆ ಅನುದಾನ ನೀಡುವ ನಿರ್ಧಾರ ಕೈಗೊಂಡು ಆದೇಶ ಹೊರಡಿಸಲಾಗಿತ್ತು . ಆ ಸಂದರ್ಭದಲ್ಲಿ ಜೇವರ್ಗಿ, ಹೂವಿನಹಡಗಲಿ , ಹೊಳೆನರಸೀಪುರ ಸೇರಿದಂತೆ ಕನಕಪುರದ ನಾಲ್ಕು ಶಾಲೆಗಳಿಗೆ ಅನುದಾನ ನೀಡುವ ಪ್ರಕ್ರಿಯೆ ಆರಂಭಿಸಲಾಗಿತ್ತು ಎಂದು ಅವರು ಹೇಳಿದರು .
2007 ರಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದಾಗ ಶ್ರೀಕ್ಷೇತ್ರ ಕೊಲ್ಲೂರು ದೇವಾಲಯದಿಂದ ಕಲ್ಲಡ್ಕ ಹಾಗೂ ಪುಣಚ ಶಾಲೆಗಳಿಗೆ ಅನುದಾನ ನೀಡುವ ನಿಟ್ಟಿನಲ್ಲಿ ಯೋಜನೆ ವಿಸ್ತರಿಸಲಾಯಿತು ಎಂದು ತಿಳಿಸಿದರು. ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಪುಣಚ ಶ್ರೀದೇವಿ ಪ್ರೌಢಶಾಲೆಯಲ್ಲಿ ಮುಖ್ಯಮಂತ್ರಿಗಳು ಹೇಳುವ ಅಹಿಂದ ವರ್ಗದ ಮಕ್ಕಳೇ ಕಲಿಯುತ್ತಿದ್ದಾರೆ . ಈ ಎರಡು ಶಾಲೆಗಳಲ್ಲಿ ಶೇ ೯೦% ರಷ್ಟು ಶಿಕ್ಷಣ ಪಡೆಯುತ್ತಿರುವುದು ಅಹಿಂದ ವರ್ಗಕ್ಕೆ ಸೇರಿದ ಮಕ್ಕಳು ಎಂದು ಹೇಳಿದ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಜಪ ಕೇವಲ ಭಾಷಣಕ್ಕೆ ಮಾತ್ರ ಸೀಮಿತವಾಗಿದೆ ಎಂದವರು ಕಿಡಿಕಾರಿದರು. ಅನುದಾನ ಕಡಿತಗೊಳಿಸುವ ಮೂಲಕ ಅಹಿಂದ ವರ್ಗದ ಮಕ್ಕಳ ಅನ್ನವನ್ನು ರಾಜ್ಯ ಸರ್ಕಾರ ಕಸಿದುಕೊಂಡಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು . ಕಲ್ಲಡ್ಕ ಶಾಲೆಯ ಅನುದಾನ ಕಡಿತಗೊಳಿಸಿರುವುದನ್ನು ವಿರೋಧಿಸಿ ಹಾಗೂ ಕಲ್ಲಡ್ಕ ಶಾಲೆಯ ಮಕ್ಕಳಿಗಾಗಿ ಭಿಕ್ಷಾ ಅಭಿಯಾನ ಇಂದಿನಿಂದ ಆರಂಭಿಸಿರುವುದಾಗಿ ಅವರು ತಿಳಿಸಿದರು . ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಪ್ರತಿ ಮನೆಗೆ ತೆರಳಿ ಒಂದು ಮುಷ್ಟಿ ಅಕ್ಕಿ ಕೇಳಲಿದ್ದೇವೆ ಎಂದು ಹೇಳಿದ ಅವರು ಪ್ರತಿ ಮನೆಯಲ್ಲಿ ಅನ್ನಕ್ಕೆ ಅಕ್ಕಿ ಹಾಕುವಾಗ ಒಂದು ಮುಷ್ಟಿ ಅಕ್ಕಿ ಕಡಿಮೆ ಹಾಕಿ ಅದನ್ನು ತಾಯಂದಿರು ಕಲ್ಲಡ್ಕ ಶಾಲೆಯ ಮಕ್ಕಳಿಗಾಗಿ ತೆಗೆದಿಡಲಿದ್ದಾರೆ ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶೋಭಾ ಕರಂದ್ಲಾಜೆ ರಾಜ್ಯದಲ್ಲಿ ಈವರೆಗೆ ನಡೆದ ಹಿಂದೂ ಸಂಘಟನೆ ಹಾಗೂ ಆರ್ ಎಸ್ ಎಸ್ ಮುಖಂಡರ ಹತ್ಯೆ ಪ್ರಕರಣದಲ್ಲಿ ಪಿಎಫ್ಐ ಸಂಘಟನೆಯ ಕೈವಾಡವಿರುವುದು ಸಾಬೀತಾಗಿದೆ . ಈ ಹಿನ್ನೆಲೆಯಲ್ಲಿ ಪಿಎಫ್ಐ ಹಾಗೂ ಎಸ್ ಡಿ ಪಿ ಐ ಸಂಘಟನೆಗಳನ್ನು ರಾಜ್ಯ ಸರ್ಕಾರ ಈ ಕೂಡಲೇ ನಿಷೇಧಿಸಬೇಕು ಎಂದು ಅವರು ಒತ್ತಾಯಿಸಿದ್ದರು. ಕೇರಳದಲ್ಲಿ ನಡೆಯುತ್ತಿರುವ ಹತ್ಯಾಕಾಂಡ ರಾಜ್ಯಕ್ಕೂ ಕಾಲಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು ಕೇರಳದ ಲವ್ ಜಿಹಾದ್ ಕುರಿತ ತನಿಖೆ ಯನ್ನು ಸುಪ್ರೀಂಕೋರ್ಟ್ ಎನ್ಐಎಗೆ ವಹಿಸಿದೆ . ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿಯೂ ನಡೆದಿರವ ಲವ್ ಜಿಹಾದ್ ಹಾಗೂ ಮತಾಂತರ ಪ್ರಕರಣದ ತನಿಖೆಯನ್ನೂ ಎನ್ಐಎಗೆ ವಹಿಸಬೇಕು ಎಂದವರು ಒತ್ತಾಯಿಸಿದರು .