Connect with us

    LATEST NEWS

    ಹೆಣದಲ್ಲೂ ಹಣ ಮಾಡಲು ಹೊರಟ ದಗಲ್ಬಾಜಿ ಪಾದ್ರಿ..!!

    ಮಂಗಳೂರು,ಆಗಸ್ಟ್ 17 : ಮಹಿಳೆಯೊಬ್ಬರು ಮೃತಪಟ್ಟ ನಂತರ ಆಕೆಯ ಶವದ ಹೆಬ್ಬೆಟಿನ ಸಹಿ ಪಡೆದು ನಕಲಿ ಉಯಿಲು ಸಿದ್ದಪಡಿಸಿದ ಆರೋಪದ ಮೇಲೆ ನಗರದ ಉರ್ವ ಚರ್ಚ್‍ನ ಹಿಂದಿನ ಪಾದ್ರಿ ಫಾದರ್ ವಿಕ್ಟರ್ ಡಿಮೆಲ್ಲೋ ಮೇಲೆ ಪ್ರಕರಣ ದಾಖಲಾಗಿದೆ.
    2010 ಜು.31ರಂದು ಉರ್ವ ಚರ್ಚ್‍ನ ವ್ಯಾಪ್ತಿಯಲ್ಲಿ ವಾಸಮಾಡುತ್ತಿದ್ದ ಅನ್ನಿ ಪಾಯಸ್ ಎಂಬ ಮಹಿಳೆ ಮೃತರಾಗಿದ್ದು, ಅವರ ಶವದ ಹೆಬ್ಬೆರಳಿನ ಗುರುತನ್ನು ಪಡೆದು ನಕಲಿ ಪ್ರಮಾಣ ಪತ್ರ ತಯಾರಿಸಿ ಅವರ ಬ್ಯಾಂಕ್ ಖಾತೆಗಳಲ್ಲಿದ್ದ ಹಣವನ್ನು ಡ್ರಾ ಮಾಡಿ ವಂಚಿಸಿದ ಆರೋಪ ಈ ಪಾದ್ರಿ ಮೇಲಿದೆ. 2008ರ ಫೆಬ್ರವರಿ 4ರಂದು ಮೃತ ಅನ್ನಿಪಾಯಸ್ ಉಯಿಲು ಪತ್ರವೊಂದು ಬರೆಸಿ ಇದಕ್ಕೆ ಸಹಿ ಮಾಡಿದ್ದರು. ಇದಕ್ಕೆ ಪತ್ರ ಬರಹಗಾರ ಸಿ.ಟಿ.ಜೆ ಗೊನ್ಸಾಲ್ವೇಸ್, ನೋಟರಿ ಕ್ಲಿಯರೆನ್ಸ್ ಪಾಯಸ್ ಮತ್ತು ಉಯಿಲಿನ ಅನುಷ್ಠಾನ ಅಧಿಕಾರಿಯಾಗಿ ನೇಮಕವಾಗಿದ್ದ ಜೋಸೆಫ್ ಡಿ’ಸೋಜ ಈ ಪತ್ರಕ್ಕೆ ಸಹಿ ಮಾಡಿದ್ದರು. ಈ ಉಯಿಲಿನಲ್ಲಿ ಎಲ್ಲಾ ಸ್ಥಿರಾಸ್ತಿಗಳನ್ನು ತಮ್ಮ ಸಂಬಂಧಿಕರಿಗೆ ಹಂಚಿಕೆ ಮಾಡಿ ಅವುಗಳನ್ನು ಹೇಗೆ ಬಳಕೆ ಮಾಡಬೇಕು ಎಂಬುವುದಾಗಿ ಅದರಲ್ಲಿ ಷರತ್ತುಗಳನ್ನು ವಿಧಿಸಿದ್ದರು. ತಮ್ಮ ಬ್ಯಾಂಕ್ ಖಾತೆಗಳಲ್ಲಿ ಇದ್ದ ಹಣದ ವಿನಿಯೋಗದ ಬಗ್ಗೆಯೂ ಸ್ಪಷ್ಟವಾಗಿ ಉಲ್ಲೇಖಿಸಿ ಎಲ್ಲಾ ಪತ್ರಗಳಿಗೂ ಸ್ವತಃ ಅನ್ನಿ ಪಾಯಸ್ ಸಹಿ ಮಾಡಿದ್ದರು. ಆದರೆ ಅನ್ನಿ ಪಾಯಸ್ ಮೃತರಾದ ಬಳಿಕ ಶವದ ಹೆಬ್ಬೆಟಿನ ಸಹಿ ಪಡೆದು ನಕಲಿ ಉಯಿಲು ತಯಾರಿಸಲಾಗಿದೆ ಎಂದು ಅನ್ನಿ ಪಾಯಸ್ ಸಂಬಂಧಿ ವಿನ್ನಿ ಪಿಂಟೋ ಎಂಬುವವರು ಜೂನ್ 14ರಂದು ಉರ್ವ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.


    ಜು.31 2010 ರಲ್ಲಿ ಅನ್ನಿ ಪಾಯಸ್ ಮೃತಪಟ್ಟಿದ್ದರು, ಇದಕ್ಕೆ 43 ದಿನಗಳ ಮೊದಲು ಅಂದರೆ 2010 ಜೂನ್ 18ರಂದು ಅವರ ಹೆಸರಿನಲ್ಲಿ ಉಯಿಲು ಸಿದ್ದಪಡಿಸಲಾಗಿದೆ. ಆದರೆ ಅದರಲ್ಲಿ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸ್ಥಿರಾಸ್ತಿಗಳ ಯಾವ ವಿವರವನ್ನು ನಮೂದಿಸಿಲ್ಲ, ಆದರೆ ಬ್ಯಾಂಕ್ ಖಾತೆಯಲ್ಲಿರುವ ಹಣದ ಬಗ್ಗೆ ಮಾತ್ರ ಮಾಹಿತಿ ಇದೆ. ಇದರಲ್ಲಿ ಉಯಿಲು ತಯಾರಿಸಿದವರು, ಅನುಷ್ಠಾನಕ್ಕೆ ತರಬೇಕಾದವರ ವಿವರವೂ ಇದರಲ್ಲಿ ಇಲ್ಲ. ನೋಟರಿ ಎದುರು ಹಾಜರಿಪಡಿಸಿದ ವಿವರಗಳೂ ಇಲ್ಲ. ಪ್ರಮುಖ ಅಂಶ ಎಂದರೆ ಉಯಿಲಿನಲ್ಲಿ ಅನ್ನಿ ಪಾಯಸ್ ಸಹಿ ಬದಲಿಗೆ ಹೆಬ್ಬೆಟ್ಟಿನ ಗುರುತು ಇದೆ ಎಂದು ಸ್ಥಳೀಯ ಪೊಲೀಸ್ ಮೂಲಗಳು ತಿಳಿಸಿವೆ.
    ಸದ್ಯ ಪಾದ್ರಿ ವಿಕ್ಟರ್ ಡಿಮೆಲ್ಲೋ ಸೇರಿ 4 ಜನರ ವಿರುದ್ದ ಜೂ.4ರಂದು ಉರ್ವ ಪೋಲಿಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ. ಮೃತ ಅನ್ನಿಪಾಯಸ್ ಸ್ನೇಹಿತೆ ಐರಿನ್ ಲೋಬೊ ಅವರು ಅನ್ನಿ ಪಾಯಸ್ ಖಾತೆಯಿಂದ ಪಾದ್ರಿ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ ಎಂಬ ಆರೋಪವಿದೆ. ಉಳಿದಂತೆ ಉರ್ವ ಚರ್ಚ್ ಮಂಡಳಿಯ ಆಗಿನ ಉಪಾಧ್ಯಕ್ಷ ಕೆವಿನ್ ಅಜಯ್ ಮಾರ್ಟಿಸ್ ಮತ್ತು ಪಾದ್ರಿ ಸಂಬಂಧಿ ಅದೇ ಚರ್ಚ್‍ನ ಹಿಂದಿನ ಕಾರ್ಯದರ್ಶಿ ಜೆನೆವಿನ್ ಬಿ. ಮಥಾಯಿಸ್ ಎಂಬುವವರನ್ನು ಆರೋಪಿಗಳೆಂದು ಹೆಸರಿಸಲಾಗಿದೆ. ಸದ್ಯ ಕಿನ್ನಿಗೋಳಿ ಸಮೀಪದ ಕಿರಂ ಚರ್ಚಿಗೆ ವರ್ಗಾವಣೆಯಾಗಿದ್ದು ಅಲ್ಲಿ ಧರ್ಮಗುರುಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
    ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಫಾದರ್ ಡಿಮೆಲ್ಲೋ ಇದು ನನ್ನ ಮೇಲೆ ಸುಖಾ ಸುಮ್ಮನೆ ಮಾಡಿರುವ ಆರೋಪ. ಚರ್ಚ್‍ನಲ್ಲಿ ಪ್ರಾರ್ಥನಾ ಮಂದಿರ ಸ್ಥಾಪಿಸುವಂತೆ ಆಸೆ ಹೊಂದಿದ್ದರು. ಅದರಂತೆ ಹಣ ಸಂದಾಯವಾದ ಬಗ್ಗೆ ದಾಖಲೆಗಳಿವೆ. ಈ ಬಗ್ಗೆ ಧರ್ಮಪ್ರಾಂತ್ಯದ ಬಿಷಪ್ ಆಯೋಗವೊಂದನ್ನು ರಚಿಸಿ ತನಿಖೆ ನಡೆಸಬೇಕು. ತಾನು ಯಾವುದೇ ತನಿಖೆಗೆ ಸಿದ್ದ ಎಂದಿದ್ದಾರೆ.

    ಸಂಶಯಕ್ಕೆ ಕಾರಣಗಳು :
    ಅನ್ನಿ ಪಾಯಸ್ ಸಾಯುವ 20 ದಿನಗಳ ಮೊದಲು ಅಂದರೆ 2010 ಜು.11 ರಂದು ಸಂಬಂಧಿಗಳ ಜೊತೆ ಸೇರಿ ಜನ್ಮದಿನ ಆಚರಿಸಿಕೊಂಡಿದ್ದ ಪಾಯಸ್ ಸಹಿ 43 ದಿನಗಳ ಮೊದಲು ಸಿದ್ದಪಡಿಸಿದ ಉಯಿಲಿನಲ್ಲಿ ಇಲ್ಲ. ಆದರೆ ಹೆಬ್ಬೆಟ್ಟಿನ ಗುರುತು ಮಾತ್ರ ಇದೆ. ಕಾನೂನು ಪ್ರಕಾರ ದಾಖಲೆಗಳಲ್ಲಿ ಬಲಗೈ ಹೆಬ್ಬೆಟ್ಟಿನ ಗುರುತು ಹಾಕಬೇಕು. ಆದರೆ ಈ ಉಯಿಲಿನಲ್ಲಿ ಎಡಗೈ ಹೆಬ್ಬೆರಳಿನ ಗುರುತು ಇದೆ. ಮೂರನೆಯದಾಗಿ ಸ್ಥಿರಾಸ್ಥಿಗಳು ಇದ್ದರೂ ಅವುಗಳಿಗೆ ಸಂಬಂಧಿಸಿದ ಯಾವ ವಿವರಗಳನ್ನೂ ಉಯಿಲಿನಲ್ಲಿ ಉಲ್ಲೇಖಿಸದಿರುವುದು. ನಾಲ್ಕನೆಯದಾಗಿ 2010 ಜೂ.24ರಂದು ಅವಧಿ ಪೂರ್ಣಗೊಳ್ಳಬೇಕಾಗಿದ್ದ ನಿಗದಿತ ಠೇವಣಿಯ ಮೊತ್ತವನ್ನು ಸಂದಾಯ ಮಾಡಿದ ರಸೀದಿ ಸಂದಾಯ ಮಾಡಿದ ರಸೀದಿ ಸಂಖ್ಯೆಯನ್ನು 2010 ಜೂ.18ರಂದು ಸಿದ್ದಪಡಿಸಲಾಗಿದೆ ಎಂದು ಉಯಿಲಿನಲ್ಲಿ ಉಲ್ಲೇಖಿಸಿರುವುದು ಸಂದೇಹಗಳಿಗೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply