Connect with us

KARNATAKA

ಯೂಟ್ಯೂಬ್ ವಿಡಿಯೋ ನಂಬಿ ಮೋಸ ಹೋದ ವ್ಯಕ್ತಿ, ಯೂಟ್ಯೂಬ್ ವಿಡಿಯೋ ಎಲ್ಲಾ ನಿಜವಲ್ಲ..!

ಬಾಗಲಕೋಟೆ, ಜನವರಿ 22: ಈ ಡಿಜಿಟಲ್​ ಪ್ರಪಂಚದಲ್ಲಿ ಬಹುತೇಕರು ಯೂಟ್ಯೂಬ್​ ಅವಲಂಬಿಸಿದ್ದಾರೆ. ಅನೇಕ ಸಂಗತಿಗಳನ್ನು ಯೂಟ್ಯೂಬ್​ ನೋಡಿಯೇ ಕಲಿಯುತ್ತಿದ್ದಾರೆ. ಅಡುಗೆಯಿಂದ ಹಿಡಿದು ಮೊಬೈಲ್​, ಕಂಪ್ಯೂಟರ್​ ರಿಪೇರಿ ಮತ್ತು ಶಿಕ್ಷಣ ಸೇರಿದಂತೆ ಅನೇಕ ಸಂಗತಿಗಳನ್ನು ಕಲಿತುಕೊಳ್ಳುವವರಿದ್ದಾರೆ.ಅನೇಕ ವಿಚಾರಗಳ ಮೇಲೆ ಬೆಳಕು ಚೆಲ್ಲುವ ಯೂಟ್ಯೂಬ್​ ಎಷ್ಟು ಉಪಕಾರಿಯೋ? ಅಷ್ಟೇ ಅಪಾಯಕಾರಿ ಎಂಬುದನ್ನು ಮರೆಯಬಾರದು. ವಿಡಿಯೋ ಸೋಗಿನಲ್ಲಿ ಕೆಲವು ವಂಚಕರು ಅಮಾಯಕರನ್ನು ಯಾಮಾರಿಸಲು ಕಾದು ಕುಳಿತಿರುತ್ತಾರೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆಯಾಗಿದೆ.

ವಂಚಕನೊಬ್ಬ ಕರಿ ಕಲ್ಲು ಕೊಟ್ಟು ಐದು ಲಕ್ಷ ಪೀಕಿರುವ ಘಟನೆ ವರದಿಯಾಗಿದೆ. ಯೂಟ್ಯೂಬ್​ ವಿಡಿಯೋ ನೋಡಿದ ವ್ಯಕ್ತಿಯೊಬ್ಬ ಮೋಸದ ಜಾಲಕ್ಕೆ ಸಿಲುಕಿದ್ದು, ಇದೀಗ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾನೆ. ಅದೃಷ್ಟವಶಾತ್​ ವಂಚಕನ ಜಾಡು ಪತ್ತೆ ಮಾಡಿದ ಪೊಲೀಸರು ಹಣ ಮತ್ತು ಆಭರಣವನ್ನು ವಶಕ್ಕೆ ಪಡೆದು ವಂಚಕನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇದಿಷ್ಟು ಘಟನೆ ಬಾಗಲಕೋಟೆ ನಗರದಲ್ಲಿ ನಡೆದಿದೆ.

ದೈವಿ ಕಲ್ಲನ್ನು ಮಾರಾಟ ಮಾಡುವುದಾಗಿ ಹೇಳಿ ಯೂಟ್ಯೂಬ್​ನಲ್ಲಿ ಸುಲೇಮಾನ್ ಸ್ಟೋನ್ ಹಾಕಿ, ದೂರವಾಣಿ ಸಂಖ್ಯೆಯನ್ನು ಸ್ಕ್ರೀನ್​ ಮೇಲೆ ನಮೂದಿಸಿ ವಂಚಕ ಅಜಯ್ ಉರ್ಫ ಸಮೀರ ಜಹಗೀರದಾರ್ ಎಂಬಾತ ವಿಡಿಯೋ ಹರಿ ಬಿಟ್ಟಿದ್ದ. ವಿಜಯಪುರದ ರೇವಣಸಿದ್ದಪ್ಪ ಇಂಡಿ ಎಂಬಾಂತ ಯೂಟ್ಯೂಬ್ ವಿಡಿಯೋ ನೋಡಿ, ದೈವಿ ಕಲ್ಲು ಎಂಬುದನ್ನು ನಂಬಿ ಖರೀದಿಗೆ ಮುಂದಾಗಿದ್ದರು. ಫೋನ್​ ಮಾಡಿ ವಿಚಾರಿಸಿದಾಗ ವಂಚಕ ಕಲ್ಲು ನೀಡಲು 7 ಲಕ್ಷ ರೂ. ಬೇಡಿಕೆ ಇಟ್ಟಿದ್ದ. ಕೊನೆಗೆ ಐದು ಲಕ್ಷ ರೂ. ಹಣ ಹಾಗೂ ಬಂಗಾರದ ಬ್ರೇಸ್​ಲೇಟ್ ನೀಡಿ ರೇವಣಸಿದ್ದಪ್ಪ ದೈವಿ ಕಲ್ಲೆಂದು ನಂಬಿ ಖರೀದಿ ಮಾಡಿದ್ದರು.

ಇದಾದ ಬಳಿಕ ಕಲ್ಲಿನ ಬಗ್ಗೆ ಅನುಮಾನಗೊಂಡು ರೇವಣಸಿದ್ದಪ್ಪ ಬಾಗಲಕೋಟೆಯ ಶಹರ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದ. ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಒಂದು ಬೈಕ್, ಐದು ಲಕ್ಷ ನಗದು ಹಾಗೂ ಬಂಗಾರದ ಬ್ರೇಸ್​ಲೇಟ್​ ವಶಕ್ಕೆ ಪಡೆದಿದ್ದಾರೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *