LATEST NEWS
ಕೊನೆಗೂ ತಾಯ್ನಾಡಿಗೆ ಮರಳಿದ ಕುವೈತ್ ನಲ್ಲಿ ಬಿದಿಗೆ ಬಿದ್ದಿದ್ದ ಕರಾವಳಿ ಯುವಕರು

ಕೊನೆಗೂ ತಾಯ್ನಾಡಿಗೆ ಮರಳಿದ ಕುವೈತ್ ನಲ್ಲಿ ಬಿದಿಗೆ ಬಿದ್ದಿದ್ದ ಕರಾವಳಿ ಯುವಕರು
ಮಂಗಳೂರು ಜುಲೈ 19: ವಿದೇಶ ಉದ್ಯೋಗದ ಆಸೆಗೆ ಬಿದ್ದು ನಕಲಿ ಎಜೆಂಟ್ ರ ಮೂಲಕ ಕುವೈಟ್ ನಲ್ಲಿ ಬಿದಿ ಬಿದ್ದಿದ್ದ ಕರಾವಳಿ ಯುವಕರು ಕೊನೆಗೂ ತಾಯ್ನಾಡಿಗೆ ವಾಪಾಸಾಗಿದ್ದಾರೆ.
ಗುರುವಾರ ಮುಂಬೈಗೆ ವಿಮಾನದಲ್ಲಿ ಬಂದಿದ್ದ ಯುವಕರನ್ನು ಇಂದು ಬೆಳಗ್ಗೆ ಬಸ್ ಮೂಲಕ ಮಂಗಳೂರಿಗೆ ಕರೆ ತರಲಾಯಿತು. ಅನಿವಾಸಿ ಉದ್ಯಮಿಗಳಾದ ಮೋಹನ್ ದಾಸ್ ಕಾಮತ್, ರಾಜ್ ಭಂಡಾರಿ ಕುವೈತ್‍ನಲ್ಲಿ ಸಿಕ್ಕಿಬಿದ್ದಿದ್ದ ಯುವಕರಿಗೆ ಆಶ್ರಯ ನೀಡಿ, ವಿಮಾನದ ಟಿಕೆಟ್ ವ್ಯವಸ್ಥೆ ಮಾಡಿದ್ದಾರೆ.

ಮಂಗಳೂರಿನ ಮಾಣಿಕ್ಯ ಅಸೋಸಿಯೇಟ್ಸ್ ಎನ್ನುವ ಏಜೆನ್ಸಿ ಮೂಲಕ ತೆರಳಿದ್ದ ನೂರಾರು ಯುವಕರು, ಅಲ್ಲಿ ಉದ್ಯೋಗ ಸಿಗದೇ ಬೀದಿ ಪಾಲಾಗಿದ್ದರು. ಹಿಂತಿರುಗಿ ಬರಲು ವೀಸಾ ಇಲ್ಲದೆ, ಊಟಕ್ಕೂ ಗತಿಯಿಲ್ಲದ ಸ್ಥಿತಿ ಒದಗಿತ್ತು. ಬಳಿಕ ಯುವಕರು ಒಂದೆಡೆ ಸೇರಿ, ವಿಡಿಯೋ ಮಾಡಿ ಮಂಗಳೂರು ಶಾಸಕ ವೇದವ್ಯಾಸ ಕಾಮತ್ ಮೂಲಕ ರಕ್ಷಣೆಗೆ ಮೊರೆಹೋಗಿದ್ದರು.
ಕೂಡಲೇ ಎಚ್ಚೆತ್ತ ಶಾಸಕ ವೇದವ್ಯಾಸ ಕಾಮತ್, ಭಾರತೀಯ ವಿದೇಶಾಂಗ ಇಲಾಖೆ ಮೂಲಕ ರಾಯಭಾರ ಕಚೇರಿ ಸಂಪರ್ಕಿಸಿದ್ದಲ್ಲದೆ, ಅಲ್ಲಿರುವ ಕರಾವಳಿ ಮೂಲದ ಉದ್ಯಮಿಗಳ ಮೂಲಕ ರಕ್ಷಣಾ ವ್ಯವಸ್ಥೆ ಮಾಡಿದ್ದಾರೆ. ಎರಡು ತಿಂಗಳ ನಿರಂತರ ಶ್ರಮದಿಂದ ಇದೀಗ 19 ಮಂದಿ ಮಂಗಳೂರು ತಲುಪಿದ್ದಾರೆ.
ಈ 19 ಮಂದಿಗೆ ಕುವೈತ್ನಿಂದ ಮುಂಬೈಗೆ ವಿಮಾನ ಟಿಕೆಟ್ ಮತ್ತು ಅಲ್ಲಿಂದ ಮಂಗಳೂರಿಗೆ ಬಸ್ ಟಿಕೆಟ್ ಅನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ.ವೇದವ್ಯಾಸ ಕಾಮತ್ ವ್ಯವಸ್ಥೆ ಮಾಡಿದ್ದರು. ಇನ್ಸ್ಟಿಟ್ಯೂಷನ್ ಆಫ್ ಎಂಜಿನಿಯರ್ಸ್ನ ಕುವೈತ್ ಶಾಖೆಯ ಮಾಜಿ ಅಧ್ಯಕ್ಷ ಮಂಜೇಶ್ವರ ಮೋಹನದಾಸ್ ಕಾಮತ್, ಅನಿವಾಸಿ ಭಾರತೀಯ ಉದ್ಯಮಿಗಳಾದ ರಾಜ್ ಭಂಡಾರಿ, ವಿಜಯ್ ಫರ್ನಾಂಡಿಸ್ ಕುವೈತ್ ವಿಮಾನ ನಿಲ್ದಾಣದಲ್ಲಿ ಈ ಕಾರ್ಮಿಕರನ್ನು ಬೀಳ್ಕೊಟ್ಟಿದ್ದರು. ಹೀಗಾಗಿ ನಿನ್ನೆ 19 ಮಂದಿ ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಇಂದು ಖಾಸಗಿ ಬಸ್ ಮೂಲಕ ಮಂಗಳೂರು ತಲುಪಿದ್ದಾರೆ.
ನಷೂದ್ (ಮಂಜೇಶ್ವರ), ವರುಣ್ (ಆಕಾಶ್ ಭವನ), ಕಲಂದರ್ ಶಫೀಕ್ (ಮೂಡುಬಿದಿರೆ), ನಷೂದ್ (ಕೊಪ್ಪ), ರಫೀಕ್ (ಕೊಪ್ಪ), ಯಕೂಬ್ ಮುಲ್ಲಾ ( ಶಿರ್ಸಿ), ಪಾರ್ಲ್ಟ್ರಿಕ್ ಫೆರ್ನಾಂಡಿಸ್ (ಭಟ್ಕಳ), ಜಗದೀಶ್, ಆಶೀಕ್ (ಉಡುಪಿ), ಪಾರ್ಥಿಕ್ (ಉಡುಪಿ), ಮಹಮ್ಮದ್ ಹಸನ್ (ಕೊಲ್ನಾಡು), ಮಹಮ್ಮದ್ ಇಸ್ಮಾಯಿಲ್ (ಕೊಲ್ನಾಡು), ಅಬ್ದುಲ್ ಮಸೀದ್ (ಕಾರ್ಕಳ), ಮಹಮ್ಮದ್ ಸುಹೇಲ್ (ಉಳ್ಳಾಲ), ನೌಫಾಲ್ ಹುಸೈನ್ (ಉಳ್ಳಾಲ), ಮಹಮ್ಮದ್ ಶಕೀರ್ (ಉಳ್ಳಾಲ), ಅಬ್ದುಲ್ ಲತೀಫ್ (ತುಂಬೆ) ಫಯಾಝ್ (ಕುತ್ತಾರ್), ಅಬುಬಕ್ಕರ್ ಸಿದ್ದೀಕ್ (ಬಜಾಲ್) ತವರಿಗೆ ಬಂದಿಳಿದ ಕರಾವಳಿ ಮೂಲದ ಸಂತ್ರಸ್ತ ಯುವಕರು.
ಇನ್ನೂ ಮಂಗಳೂರು ತಲುಪಿದೊಡನೆ ಸಂತ್ರಸ್ಥರನ್ನು ಸ್ಥಳೀಯರು ಸ್ವಾಗತಿಸಿದರು. ಇನ್ನೂ 11 ಮಂದಿ ಸಂತ್ರಸ್ತರು ಕುವೈಟ್‍ನಲ್ಲಿ ಉಳಿದುಕೊಂಡಿದ್ದು, ಶೀಘ್ರದಲ್ಲೇ ಮರಳುವ ಸಾಧ್ಯತೆ ಇದೆ.