DAKSHINA KANNADA
ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಯುವಕರ ಸಿಂಗಲ್ ವೀಲ್ ಸೈಕ್ಲಿಂಗ್ ಸಾಹಸ ಯಾತ್ರೆ.!
ಮಂಗಳೂರು : ಸೈಕಲ್ ಸವಾರಿ ನೋಡಲು ಸುಲಭ ಅನಿಸಿದ್ರೂ ರೈಡ್ ಮಾಡಲು ಅಷ್ಟೇ ಕಷ್ಟಕರ. ಅಂತದ್ರಲ್ಲಿ ಬರೇ ಒಂದು ಚಕ್ರದ ಸೈಕಲ್ ಅಂದ್ರೆ ಯೋಚಿಸಲು ಅಸಾಧ್ಯ ಅಲ್ವಾ. ಕೇರಳ ಮೂಲದ ಈ ಬಿಸಿ ರಕ್ತದ ಯುವಕರು ಒಂದು ವಿಶಿಷ್ಟ ಮತ್ತು ಸಾಹಸಮಯ ಅಭಿಯಾಕ್ಕೆ ಕೈ ಹಾಕಿದ್ದಾರೆ.
ಸಮಾಜವನ್ನು ಒಳಗಿನಿಂದಲೇ ಟೊಳ್ಳುಮಾಡುವ ಗೆದ್ದಲಿನಂತೆ ಹರಡುತ್ತಿರುವ ಮಾದಕ ವ್ಯಸನದ ವಿರುದ್ದ ಜನ ಜಾಗೃತಿ ಮೂಡಿಸಲು ಸಂಕಲ್ಪ ತೊಟ್ಟಿದ್ದಾರೆ. ಸನೀದ್ ಮತ್ತು ಅವರ ಸ್ನೇಹಿತರ ತಂಡದೊಂದಿಗೆ ಕನ್ಯಾಕುಮಾರಿಯಿಂದ ಕಾಶ್ಮೀರದ ಲೇಹ್ ಲಡಕ್ ಗೆ ಒಂದು ಚಕ್ರದ ಸೈಕಲ್ ಮೂಲಕ ಪ್ರಯಾಣ ಬೆಳೆಸಲು ಮುಂದಾಗಿದ್ದು ಈಗಾಗಲೇ ಕನ್ಯಾಕುಮಾರಿಯಿಂದ ಹೊರಟು ಮಂಗಳೂರು ತಲುಪಿ ಮುಂದಕ್ಕೆ ಸಾಗಿದ್ದಾರೆ. ತನಗೆ ತಿಳಿದಿರುವ ಅಪರೂಪದ ಕಲೆಯಾಗಿರುವ ಫ್ರಂಟ್ ವೀಲ್ ಸೈಕ್ಲಿಂಗ್ ಈ ಮೂಲಕ ಪ್ರಯಾಣ ಆರಂಭಿಸಿರುವ ಸನೀದ್ ನೇತ್ರತ್ವದ ತಂಡ ಎರಡು ತಿಂಗಳ ಅವಧಿಯಲ್ಲಿ 2 ಸಾವಿರ ಕಿ.ಮಿ ಪ್ರಯಾಣ ಬೆಳೆಸಿ ಬಂದರು ನಗರಿ ಮಂಗಳೂರು ತಲುಪಿದ್ದು ಕರ್ನಾಟಕದಲ್ಲೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಲಭ್ಯವಾಗಿದೆ. ಇನ್ನು ವಿಶೇಷ ಅಂದ್ರೆ ಈ ಮೂರು ಯುವಕರ ತಂಡದೊಂದಿಗೆ ಜರ್ಮನಿಯಿಂದ ಹದಿನೈದು ದೇಶ ಮಣ್ಣು ರಕ್ಷಿಸಿ ಎಂಬ ಘೋಷದೊಂದಿಗೆ ಭಾರತಕ್ಕೆ ಬಂದ ಯುವಕ ಮಂಗಳೂರಿನಲ್ಲಿ ಜೊತೆಯಾಗಿದ್ದಾರೆ. ಈ ತಂಡಕ್ಕೆ ಮಂಗಳೂರಿನ ಎಂಎಸ್ ಸ್ಪೋರ್ಟ್ಸ್ ವೇರ್, ಹೋಪ್ ಫೌಂಡೇಶನ್, ಒಲಿಂಪಿಕ್ ಸ್ಪೋರ್ಟ್ಸ್,ಎಂ ಎಸ್ ಸ್ಪೋರ್ಟ್ಸ್ ಹೀಗೆ ಜಿಲ್ಲೆಯ ಹತ್ತು ಹಲವು ಸಂಘ ಸಂಸ್ಥೆಗಳು ಅದ್ದೂರಿಯಾಗಿ ಸ್ವಾಗತಿಸಿ ಪ್ರೋತ್ಸಹ ನೀಡಿ ಹುರಿದುಂಬಿಸಿದ್ದಾರೆ. ಅದೇನೇ ಇರಲಿ ನಾಳಿನ ಭವಿಷ್ಯವಾಗಿರುವ ಯುವ ಜನತೆಯನ್ನು ಗೆದ್ದಲಿನಂತೆ ಅಂಟಿಕೊಂಡು ನಾಶ ಮಾಡುತ್ತಿರುವ ಮಾದಕ ವ್ಯಸನದ ವಿರುದ್ಧ ಜಾಗೃತಿಗಾಗಿ ಸಾನಿಧ್ ಮತ್ತವರ ಸ್ನೇಹಿತರು ಕೈಗೊಂಡ ಫ್ರಂಟ್ ವೀಲ್ ಸೈಕ್ಲಿಂಗ್ ಯಾತ್ರೆ ಯಶಸ್ವಿಯಾಗಿ ಗುರಿ ಮುಟ್ಟಲಿ ಮತ್ತು ಸಮಾಜಕ್ಕೆ ಒಳಿತಾಗಲಿ ಎಂಬುವುದೇ ನಮ್ಮ ಆಶಯ….