KARNATAKA
ಮೈಸೂರಿನಲ್ಲಿ ಕಂಡ ಯೋಗದ ಬೆಳಕು ವಿಶ್ವದೆಲ್ಲಡೆ ಪಸರಿಸಿದೆ – ಮೋದಿ
ಮೈಸೂರು ಜೂನ್ 21: ವಿಶ್ವ ಯೋಗ ದಿನಾಚರಣೆ ಹಿನ್ನಲೆ ಮೈಸೂರಿನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 15 ಸಾವಿರಕ್ಕೂ ಅಧಿಕ ಯೋಗಪಟುಗಳ ಜೊತೆ ಯೋಗಾಸನ ಮಾಡಿದ್ದಾರೆ.
ಖಾಸಗಿ ಹೋಟೆಲಿನಿಂದ ಬೆಳಗ್ಗೆ 6:30ರ ವೇಳೆಗೆ ಅರಮನೆ ಮುಂಭಾಗಕ್ಕೆ ಮೋದಿ ಆಗಮಿಸಿದರು. ಚುಟುಕಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಆರಂಭದಲ್ಲಿ ಆಯುಷ್ ಸಚಿವ ಸರ್ಬಾನಂದ ಸೊನೊವಾಲ್, ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು.
8ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮಾತನಾಡಿದ ಅವರು, ದೇಶದ ಜನತೆಗೆ ಯೋಗ ದಿನಾಚರಣೆ ಶುಭಾಶಯಗಳು. ಕರ್ನಾಟಕ ಸಾಂಸ್ಕೃತಿಕ ರಾಜಧಾನಿ ಮೈಸೂರು, ಯೋಗ ಭೂಮಿ.. ಇಲ್ಲಿ ಕಂಡ ಯೋಗದ ಬೆಳಕು ಇವತ್ತು ವಿಶ್ವದ ಎಲ್ಲೆಡೆ ಪಸರಿಸಿದೆ. ಇಂದು ಯೋಗ ವಿಶ್ವಕ್ಕೆ ಆರೋಗ್ಯದ ಮಹತ್ವವನ್ನು ತಿಳಿಸುತ್ತಿದೆ. ಮೈಸೂರು ಭಾರತದ ಆಧ್ಯಾತ್ಮಿಕ ಕೇಂದ್ರವಾಗಿದೆ. ಈ ಮೊದಲು ಯೋಗವನ್ನು ಕೇವಲ ಮನೆಗಳಲ್ಲಿ ಮಾತ್ರ ಮಾಡಲಾಗುತ್ತಿತ್ತು. ಯೋಗ ವ್ಯಕ್ತಿಗೆ ಮಾತ್ರವಲ್ಲ, ವಿಶ್ವ ಮಾನವೀಯತೆ ಬೇಕಿದೆ.
ಕೊರೋನಾ ಸಾಂಕ್ರಾಮಿಕ ರೋಗ ಸಮಯದಲ್ಲೂ ಕೂಡ ಯೋಗ ದಿನದ ಉತ್ಸಾಹ ಕಡಿಮೆ ಆಗಿರಲಿಲ್ಲ. ಇಂದು ಯೋಗ ದಿನಾಚರಣೆ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ನಮ್ಮೆಲರ ಜೀವನಕ್ಕೆ ಯೋಗ ವಿಶ್ವಾಸವನ್ನು ನೀಡುತ್ತಿದೆ ಎಂದು ಹೇಳಿದರು.
ಬಳಿಕ ಯೋಗಾಸನ ಮಾಡಲು ನಿಗದಿಯಾದ ಸ್ಥಳಕ್ಕೆ ತೆರಳಿದರು. ಬೆಳಗ್ಗೆ 7:08ಕ್ಕೆ ಆರಂಭಗೊಂಡ ಯೋಗ ಕಾರ್ಯಕ್ರಮ ಶಾಂತಿ ಮಂತ್ರದೊಂದಿಗೆ 7:52ಕ್ಕೆ ಮುಕ್ತಾಯಗೊಂಡಿತು.
15 ಸಾವಿರ ಮಂದಿ ಪೈಕಿ ಸುಮಾರು 8 ಸಾವಿರ ಜನರು ಮೋದಿ ಯೋಗ ಮಾಡುವ ಜಾಗದ ಅಕ್ಕಪಕ್ಕದಲ್ಲೇ ಯೋಗ ಮಾಡಿದ್ದಾರೆ. ಉಳಿದವರು ಅರಮನೆಯ ಹಿಂಭಾಗದ ಆವರಣದಲ್ಲಿ ಯೋಗ ಮಾಡಿದ್ದಾರೆ. 15 ಸಾವಿರ ಜನರಲ್ಲಿ 3 ಸಾವಿರ ಜನರು ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ 12 ಸಾವಿರ ಮಂದಿ ಸ್ಥಳೀಯರು ಭಾಗವಹಿಸಿದ್ದರು.